ಹುಬ್ಬಳ್ಳಿ-ಬೆಂಗ್ಳೂರು ನಡುವೆ ಶೀಘ್ರ ಸೂಪರ್ ಫಾಸ್ಟ್ ರೈಲು
ಹುಬ್ಬಳ್ಳಿ(ಮಾ.28): ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಸೂಪರ್ ಫಾಸ್ಟ್ ರೈಲು ಆರಂಭಿಸಲಾಗುವುದು. ಮುಂದಿನ ಆರು ತಿಂಗಳೊಳಗೆ ಅದಕ್ಕೆ ಚಾಲನೆ ನೀಡಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ನಗರದ ದೇಶಪಾಂಡೆನಗರದ ಶ್ರೀಕೃಷ್ಣ ಕಲ್ಯಾಣ ಮಂಟಪದ ಬಳಿ ರೈಲ್ವೆ ಕೆಳಸೇತುವೆ ಹಾಗೂ ನಗರದ ರೈಲು ನಿಲ್ದಾಣದ ಪ್ರವೇಶದ್ವಾರದಲ್ಲಿ ಸ್ವಾಮಿ ವಿವೇಕಾನಂದರ ಕಂಚಿನ ಮೂರ್ತಿ ಅನಾವರಣಗೊಳಿಸಿದ ಪ್ರಹ್ಲಾದ ಜೋಶಿ
ಹುಬ್ಬಳ್ಳಿಯಿಂದ ಬೆಂಗಳೂರಿಗೆ ರೈಲಿನಲ್ಲಿ ತಲುಪಲು ಸದ್ಯ ಎಂಟು ತಾಸು ಬೇಕಾಗುತ್ತಿದೆ. ಸೂಪರ್ ಫಾಸ್ಟ್ ರೈಲು ಆರಂಭವಾದರೆ, ನಾಲ್ಕೂವರೆ ತಾಸಿನಲ್ಲಿ ಬೆಂಗಳೂರು ತಲುಪಬಹುದು. ಇದರಿಂದ ಪ್ರಯಾಣಿಕರ ಸಮಯ ಸಹ ಉಳಿತಾಯವಾಗಲಿದೆ ಎಂದ ಅವರು, ಕೇಂದ್ರ ಸಚಿವ ಪಿಯೂಷ್ ಗೋಯಲ್ ಮೌಖಿಕವಾಗಿ ಸಮ್ಮತಿ ಸೂಚಿಸಿದ್ದು, ಮುಂದಿನ ಆರು ತಿಂಗಳ ಒಳಗೆ ಅದಕ್ಕೆ ಚಾಲನೆ ನೀಡಲಾಗುವುದು ಎಂದರು. ಮುಂದೆ ಬೆಳಗಾವಿಗೂ ಈ ರೈಲನ್ನು ವಿಸ್ತರಿಸಲಾಗುವುದು ಎಂದು ನುಡಿದ ಜೋಶಿ
ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರಂ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ನಿಲ್ದಾಣದಲ್ಲಿರುವುದು ಹೆಮ್ಮೆಯ ವಿಷಯ. ಇದರ ಕಾಮಗಾರಿ ಇದೀಗ ಅಂತಿಮ ಹಂತಕ್ಕೆ ಬಂದಿದೆ. ಶೀಘ್ರದಲ್ಲೇ ಉದ್ಘಾಟನೆಗೊಳಿಸಲಾಗುವುದು ಎಂದು ನುಡಿದರು. ಹುಬ್ಬಳ್ಳಿ-ದಾವಣಗೆರೆ ಮಧ್ಯೆ ಡೆಮೋ ಟ್ರೈನ್ ಪ್ರಾರಂಭಿಸಬೇಕು. ಇದರಿಂದ ಈ ಭಾಗದ ಕಾರ್ಮಿಕರಿಗೆ, ಸಾರ್ವಜನಿಕರಿಗೆ ಬಹಳಷ್ಟುಅನುಕೂಲವಾಗುತ್ತದೆ ಎಂದು ನುಡಿದರು.
ತಾರಿಹಾಳದಲ್ಲಿ 150 ಕೋಟಿ ವೆಚ್ಚದಲ್ಲಿ ಕ್ರೀಡಾ ಸಮುಚ್ಛಯ ನಿರ್ಮಿಸಲಾಗುವುದು. ಎಲ್ಲ ಕ್ರೀಡೆಗಳಿಗೂ ಪ್ರೋತ್ಸಾಹ ನೀಡಲಾಗುವುದು. ಅದರ ಪಕ್ಕದಲ್ಲೇ ಕ್ರೀಡಾಶಾಲೆಯನ್ನು ಪ್ರಾರಂಭಿಸಲು ಚಿಂತನೆ ನಡೆದಿದೆ. ಈ ಬಗ್ಗೆ ಶೀಘ್ರವಾಗಿ ಸಚಿವ ಶೆಟ್ಟರ್ ಸೇರಿದಂತೆ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ನುಡಿದರು.
ದೇಶಪಾಂಡೆ ನಗರದಿಂದ ಭವಾನಿನಗರಕ್ಕೆ ಸಂಪರ್ಕ ಕಲ್ಪಿಸಲು ರೈಲ್ವೆ ಕೆಳಸೇತುವೆ ನಿರ್ಮಿಸಬೇಕು ಎನ್ನುವ ಬೇಡಿಕೆ ಈಡೇರಿದೆ. ಉಣಕಲ್ ಕೆರೆಯಲ್ಲಿ ದೊಡ್ಡ ವಿವೇಕಾನಂದ ಮೂರ್ತಿ ಸ್ಥಾಪಿಸಬೇಕೆಂಬ ಬೇಡಿಕೆ ಇದೆ. ಕೆಲವು ದಾನಿಗಳು ಮತ್ತು ಕಂಪನಿಗಳು ಮುಂದೆ ಬಂದಿವೆ. ಅವರ ಸಹಯೋಗದಲ್ಲಿ ಸುಂದರಮೂರ್ತಿ ಸ್ಥಾಪಿಸಿ, ಪ್ರವಾಸಿ ತಾಣವನ್ನಾಗಿ ಮಾಡುವ ಯೋಜನೆ ಇದೆ ಎಂದರು.
ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ನಗರದ ಉಣಕಲ್ ಕೆರೆಯಲ್ಲಿರುವ ವಿವೇಕಾನಂದರ ಮೂರ್ತಿ ಚಿಕ್ಕದಾಗಿದ್ದು, ಅದನ್ನು ತೆಗೆದು ಭವ್ಯವಾದ ಮೂರ್ತಿ ಪ್ರತಿಷ್ಠಾಪಿಸಬೇಕಿದೆ. ಇದರಿಂದ ಕೆರೆ ಸುತ್ತಲಿನ ಪ್ರದೇಶ ಪ್ರವಾಸಿ ತಾಣವಾಗಲಿದೆ ಎಂದು ಹೇಳಿದರು. ಉಣಕಲ್ ಕೆರೆಯಲ್ಲಿ ವಿವೇಕಾನಂದರ ಪುತ್ಥಳಿ ನಿರ್ಮಿಸಬೇಕೆಂಬುದು ತಮ್ಮ ಕನಸು. ಅದನ್ನು ಈಡೇರಿಸುತ್ತೇವೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರು, ಪ್ರದೀಪ ಶೆಟ್ಟರ್, ನೈಋುತ್ಯ ರೈಲ್ವೆ ವಲಯದ ಮಹಾಪ್ರಬಂಧಕ ಅಜಯಕುಮಾರ ಸಿಂಗ್, ಮಾಜಿ ಶಾಸಕ ಬಿ.ಆರ್. ಪಾಟೀಲ, ರಾಮಕೃಷ್ಣಾಶ್ರಮದ ರಘುವೀರಾನಂದ ಶ್ರೀ, ನಿರ್ಭಯಾನಂದ ಶ್ರೀ, ವಿಜಯಾನಂದ ಶ್ರೀ ಉಪಸ್ಥಿತರಿದ್ದರು.