90 ರೂ. ಗಡಿ ದಾಟಿದ ಪೆಟ್ರೋಲ್, ಕೇಂದ್ರದ ವಿರುದ್ಧ ಸ್ವತಃ ಬಿಜೆಪಿ ನಾಯಕ ಗರಂ!
ಪೆಟ್ರೋಲ್ ಹಾಗೂ ಡಿಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಪೆಟ್ರೋಲ್ ದುಬಾರಿ ತಲೆಬಿಸಿ ಒಂದೆಡೆಯಾದರೆ, ಮತ್ತೊಂದೆಡೆ ಕೊರೋನಾ, ಭಾರತ್ ಬಂದ್ ಸೇರಿದಂತೆ ಹೆಜ್ಜೆ ಹೆಜ್ಜೆಗೂ ಜನಸಾಮಾನ್ಯರಿಗೆ ಸಂಕಷ್ಟ ಎದುರಾಗುತ್ತಿದೆ. ಇಷ್ಟು ದಿನ ವಿರೋಧ ಪಕ್ಷಗಳು ಕೇಂದ್ರದ ವಿರುದ್ಧ ಇಂಧನ ಬೆಲೆ ಏರಿಕೆಗೆ ಕಿಡಿ ಕಾರಿತ್ತು. ಇದೀಗ ಸ್ವತಃ ಬಿಜೆಪಿ ನಾಯಕನೇ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಕಳೆದ ಮೂರು ವಾರದಿಂದ ಜನರಲ್ಲಿ ಆತಂಕ ಸೃಷ್ಟುತ್ತಿದೆ. ಕಳೆದೆರಡು ತಿಂಗಳು ಸ್ಥಿರವಾಗಿದ್ದ ಪೆಟ್ರೋಲ್, ಡೀಸೆಲ್ ಬೆಲೆ ಇದೀಗ 90ರೂಪಾಯಿ ಗಡಿ ದಾಟಿದೆ.
ಕೊರೋನಾದಿಂದ ಜನರು ಮೊದಲೇ ಸಂಕಷ್ಟದಲ್ಲಿದ್ದಾರೆ. ಇದರ ಜೊತೆಗೆ ಇದೀಗ ಪೆಟ್ರೋಲ್,ಡೀಸೆಲ್ ಬೆಲೆ ಏರಿಕೆಯಿಂದ ಎಲ್ಲಾ ಉತ್ಪನ್ನಗಳ ಬೆಲೆ ಹೆಚ್ಚಾಗತೊಡಗಿದೆ.
ಬೆಲೆ ಏರಿಕೆ ಬಿಸಿ ಇದೀಗ ಜನಸಾಮಾನ್ಯರಿಗೆ ತೀವ್ರ ಹೊರೆಯಾಗುತ್ತಿದೆ. ಪೆಟ್ರೋಲ್ ಬೆಲೆ ಏರಿಕೆ ಆರಂಭವಾಗತೊಡಗಿದ ಬೆನ್ನಲ್ಲೇ ವಿಪಕ್ಷಗಳು ಕೇಂದ್ರ ವಿರುದ್ಧ ಆಕ್ರೋಷ ವ್ಯಕ್ತಪಡಿಸಿತು. ಇಷ್ಟೇ ಅಲ್ಲ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲು ಆಗ್ರಹಿಸಿತ್ತು.
ಇದೀಗ ಪೆಟ್ರೋಲ್ ಬೆಲೆ 90 ರೂಪಾಯಿ ಗಡಿ ದಾಟುತ್ತಲೇ ಇದೀಗ ಬಿಜೆಪಿ ನಾಯಕ, ಹಿರಿಯ ವಕೀಲ ಸುಬ್ರಮಣಿಯನ್ ಸ್ವಾಮಿ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಪ್ರತಿ ಲೀಟರ್ ಪೆಟ್ರೋಲ್ ಬೆಲೆ 90 ರೂಪಾಯಿ ಆಗಿದೆ. ಇದು ಜನರ ಮೇಲೆ ಭಾರತ ಸರ್ಕಾರ ನೆಟ್ಟ ಸ್ಮಾರಕವಾಗಿದೆ. ಜನರ ಮೇಲೆ ಕೇಂದ್ರ ಶೋಷಣೆ ನಡೆಸುತ್ತಿದೆ ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.
ಪೆಟ್ರೋಲ್ ರಿಫೈನರಿಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 30 ರೂಪಾಯಿ. ಇನ್ನು ತೆರಿಗೆ, ಪೆಟ್ರೋಲ್ ಬಂಕ್ ಕಮಿಷನ್ ಎಲ್ಲಾ ಸೇರಿಸಿ ಒಟ್ಟು 60 ರೂಪಾಯಿ ಸರ್ಕಾರ ಹಾಕುತ್ತಿದೆ. ನನ್ನ ಪ್ರಕಾರ ಪೆಟ್ರೋಲ್ ಪ್ರತಿ ಲೀಟರ್‌ಗೆ ಗರಿಷ್ಠ 40 ರೂಪಾಯಿ ಇರಬೇಕು ಎಂದು ಸ್ವಾಮಿ ಹೇಳಿದ್ದಾರೆ.
ಕೇಂದ್ರದ ವಿರುದ್ಧ ಸುಬ್ರಮಣಿಯನ್ ಸ್ವಾಮಿ ಹಲವು ಬಾರಿ ಗುಡುಗಿದ್ದಾರೆ. ಇದೀಗ ಜನಸಾಮಾನ್ಯರಿಗೆ ಹೊರೆಯಾಗದಂತೆ ಸರ್ಕಾರ ಬೆಲೆ ನಿಯಂತ್ರಿಸಬೇಕು ಎಂದು ಸ್ವಾಮಿ ಕೇದ್ರವನ್ನು ಎಚ್ಚರಿಸಿದ್ದಾರೆ.
ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ(ಡಿ.07) 86.47 ರೂಪಾಯಿ ಹಾಗೂ ಡೀಸೆಲ್ ಬೆಲೆ 78.27 ರೂಪಾಯಿ ಆಗಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 83.71 ರೂಪಾಯಿ ಹಾಗೂ ಡೀಸೆಲ್ ಬೆಲೆ 73. 88 ರೂಪಾಯಿ ಆಗಿದೆ.