ತಾಯಿ ಕಣ್ಣೆದುರೇ 18 ವರ್ಷದ ಮಗಳ ಅಪಹರಣ, ಪತ್ತೆಯಾದಾಗ ಬಯಲಾಯ್ತು ಗುಟ್ಟು!
ಹರ್ಯಾಣದಲ್ಲಿ ಶುಕ್ರವಾರ ಬೆಳಗ್ಗೆ 18 ವರ್ಷದ ಯುವತಿಯ ಅಪಹರಣ ಪ್ರಕರಣ ಸಂಬಂಧ ಶಾಕಿಂಗ್ ಸತ್ಯ ತೆರೆದುಕೊಂಡಿದೆ. ಸುಮಾರು 3 ಗಂಟೆಯ ತನಿಖೆ ಬಳಿಕ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದಾಗ, ಕಿಡ್ನ್ಯಾಪ್ ಮಾಡಿದ ಯುವಕ ಹಾಗೂ ಅಪಹರಣಕ್ಕೊಳಗಾದ ಯುವತಿ ಇಬ್ಬರೂ ಸಪ್ತಪದಿ ತುಳಿದಿದ್ದಾರೆಂಬ ವಿಚಾರ ಬಯಲಾಗಿದೆ. ಅಂದರೆ ಯುವತಿ ಹಾಗೂ ಆಕೆಯ ಪ್ರೇಮಿಯೇ ಈ ಅಪಹರಣದ ಡ್ರಾಮಾ ರಚಿಸಿದ್ದರು. ಯುವತಿಯ ಪ್ರೇಮಿ ಹಾಗೂ ಆತನ ಸ್ನೇಹಿತರು ಆಕೆಯ ತಾಯಿ ಕಣ್ಣೆದುರೇ ಕಿಡ್ನಾಪ್ ಮಾಡಿದ್ದರು. ಈ ಘಟನೆಯ ಸಿಸಿಟಿವಿ ಲಭ್ಯವಾದಾಗ ಆತಂಕ ಮನೆ ಮಾಡಿತ್ತು. ಅಲ್ಲದೇ ಪೊಲೀಸರ ವೈಫಲ್ಯದ ಬಗ್ಗೆಯೂ ಸವಾಲೆದ್ದಿತ್ತು. ಯುವತಿ ತನ್ನ ತಾಯಿ ಹಾಗೂ ಗೆಳತಿಯೊಂದಿಗೆ ಟೈಲರ್ ಅಂಗಡಿಗೆ ತೆರಳಿದ್ದಾಗ ಈ ಘಟನೆ ನಡೆದಿತ್ತು. ತಾಯಿ ಈ ವೇಳೆ ಮಗಳನ್ನು ಕಾಪಾಡಲು ಯತ್ನಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಏನಿದು ಘಟನೆ: ಶುಕ್ರವಾರ ಬೆಳಗ್ಗೆ 12ನೇ ತರಗತಿಯಲ್ಲಿ ವ್ಯಾಸಂಗ ನಡೆಸುತ್ತಿದ್ದ ಯುವತಿಯೊಬ್ಬಳ ಅಪಹರಣ ನಡೆದಿತ್ತು. ಕಾರಿನಲ್ಲಿ ಬಂದಿದ್ದ ಮೂರು, ನಾಲ್ಕು ಯುವಕರು ಆಕೆಯನ್ನು ಕಾರಿನಲ್ಲಿ ಎಳೆದೊಯ್ದಿದ್ದರು. ಆಕೆಯ ತಾಯಿಯನ್ನು ದೂಡಿ ಹಾಕಿದ್ದರು. ತಾನು ಮಗಳನ್ನು ಕಾಪಾಡಲು ಯತ್ನಿಸಿದಾಗ ಅಪಹರಣಕಾರರು ತನ್ನ ಹೊಟ್ಟೆಗೆ ಒದ್ದಿರುವುದಾಗಿ ತಾಯಿ ಹೇಳಿದ್ದರು.
ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅಲ್ಲದೇ ಅಲ್ಲಿಂದ ತೆರಳಿದ್ದ ಮಹಿಳೆಯೊಬ್ಬಳು ತಾನು ಪ್ರಾಣಿಗಳಿಗೆ ಹುಲ್ಲು ತೆಗೆದುಕೊಂಡು ಹೋಗುವಾಗ ಯುವತಿ ಅಳುತ್ತಿರುವುದನ್ನು ಆಲಿಸಿದ್ದೆ ಎಂದಿದ್ದರು.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದರು. ಈ ವೇಳೆ ಯುವತಿಯ ತಂದೆ ನಾಲ್ಕು ತಿಂಗಳ ಹಿಂದೆ ಯುವಕನೊಬ್ಬ ತನ್ನ ಮಗಳನ್ನು ಪೀಡಿಸುತ್ತಿದ್ದ ಎಂದು ಹೇಳಿದ್ದಾರೆ. ಅಲ್ಲದೇ ಆತನ ಕುರಿತಾಗಿ ಸಂಪೂರ್ಣ ವಿವರ ನೀಡಿದ್ದಾರೆ.
ಸೈಬರ್ ಸೆಲ್ ಸಹಾಯದಿಂದ ಪೊಲೀಸರು ಲೊಕೇಷನ್ ಟ್ರೇಸ್ ಮಾಡಿದ್ದಾರೆ. ಹೀಗಿರುವಾಗ ಆತ ರೋಹ್ತಕ್ ಆರ್ಯ ಸಮಾಜ ಮಂದಿರದ ಬಳಿ ಇದ್ದಾಋಎಂದು ತಿಳಿದು ಬಂದಿದೆ. ಅಲ್ಲಿಗೆ ತೆರಳಿದ್ದ ಪೊಲೀಸರು ಜಫರ್‌ಗಢದಲ್ಲಿದ್ದ ಯುವತಿಯನ್ನು ಬಿಡಿಸಿದ್ದಾರೆ. ಜೊತೆಗೆ ಇಬ್ಬರು ಯುವಕರನ್ನೂ ಬಂಧಿಸಿದ್ದಾರೆ. ಅಲ್ಲದೇ ಯುವತಿಯ ಹೇಳಿಕೆ ಮೇರೆಗೆ ಮುಂದಿನ ತನಿಖೆ ನಡೆಸುವುದಾಗಿಯೂ ಪೊಲೀಸರು ತಿಳಿಸಿದ್ದಾರೆ. ಆದರೆ ಯುವತಿಯ ತಾಯಿ ಈ ಸಂಬಂಧ ಯಾವುದೇ ದೂರು ದಾಖಲಿಸಿಲ್ಲ.
ಇನ್ನು ಪೊಲೀಸರಿ ಆರೋಪಿಗಳನ್ನು ಬಂಧಿಸಿ ಯುವತಿ ತಾನು ಮಂಜೀತ್ ಜೊತೆ ಆರ್ಯ ಸಮಾಜ ಮಂದಿರದಲ್ಲಿ ವಿವಾಹವಾಗಿರುವುದಾಗಿ ತಿಳಿಸಿದ್ದಾಳೆ. ಯುವಕನ ವಯಸ್ಸು 28 ಎಂದು ತಿಳಿದುಬಂದಿದೆ. ಪೊಲೀಸರು ಕೂಡಾ ಇದು ಪ್ರೇಮ ಪ್ರಕರಣ ಎಂದು ಹೇಳಿದ್ದಾರೆ.