ಡ್ವೇನ್ ಬ್ರಾವೋ ಸಾರ್ವಕಾಲಿಕ IPL ದಾಖಲೆ ಸರಿಗಟ್ಟಿದ ಯುಜುವೇಂದ್ರ ಚಹಲ್
ಬೆಂಗಳೂರು: 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್‌ನ ಸ್ಟಾರ್ ಸ್ಪಿನ್ನರ್ ಯುಜುವೇಂದ್ರ ಚಹಲ್, ಐಪಿಎಲ್‌ನ ಸಾರ್ವಕಾಲಿಕ ದಾಖಲೆ ಸರಿಗಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಕ್ರಿಕೆಟಿಗ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ಹಾಲಿ ಸ್ಟಾರ್ ಬೌಲರ್ ಯುಜುವೇಂದ್ರ ಚಹಲ್, ಸನ್‌ರೈಸರ್ಸ್ ಹೈದರಾಬಾದ್ ಎದುರಿನ ಪಂದ್ಯದ ವೇಳೆ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಬಳಿಸಿದ ಬೌಲರ್ ಎನ್ನುವ ಡ್ವೇನ್ ಬ್ರಾವೋ ಅವರ ದಾಖಲೆಯನ್ನು ಇದೀಗ ಯುಜುವೇಂದ್ರ ಚಹಲ್ ಸರಿಗಟ್ಟಿದ್ದಾರೆ. ಮೇ 07ರಂದು ಸನ್‌ರೈಸರ್ಸ್ ಹೈದರಾಬಾದ್ ಎದುರಿನ ಪಂದ್ಯದ ವೇಳೆ ಈ ಸಾಧನೆ ಮಾಡಿದ್ದಾರೆ.
ಐಪಿಎಲ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ದಾಖಲೆ ವೆಸ್ಟ್ ಇಂಡೀಸ್ ಮೂಲದ ಡ್ವೇನ್ ಬ್ರಾವೋ ಹೆಸರಿನಲ್ಲಿತ್ತು. ಬ್ರಾವೋ ಐಪಿಎಲ್‌ನಲ್ಲಿ 183 ವಿಕೆಟ್ ಕಬಳಿಸಿದ್ದರು. ಇದೀಗ ಯುಜುವೇಂದ್ರ ಚಹಲ್, ಆ ದಾಖಲೆಯನ್ನು ಸರಿಗಟ್ಟಿದ್ದಾರೆ.
ಜೈಪುರದ ಸವಾಯಿ ಮಾನ್‌ಸಿಂಗ್ ಮೈದಾನದಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ ಎದುರಿನ ಪಂದ್ಯದಲ್ಲಿ ಯುಜುವೇಂದ್ರ ಚಹಲ್ 4 ಓವರ್ ಬೌಲಿಂಗ್ ಮಾಡಿ ಕೇವಲ 29 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು. ಚಹಲ್ ಅದ್ಭುತ ಪ್ರದರ್ಶನದ ಹೊರತಾಗಿಯೂ ರಾಯಲ್ಸ್ ಎದುರು ಸನ್‌ರೈಸರ್ಸ್ ಹೈದರಾಬಾದ್ ತಂಡವು ರೋಚಕ ಜಯ ಸಾಧಿಸಿತು.
ಡ್ವೇನ್ ಬ್ರಾವೋ 161 ಪಂದ್ಯಗಳನ್ನಾಡಿ 183 ವಿಕೆಟ್ ಕಬಳಿಸಿದರೆ, ಯುಜುವೇಂದ್ರ ಚಹಲ್ ಕೇವಲ 142 ಪಂದ್ಯಗಳನ್ನಾಡಿ 183 ಬ್ರಾವೋ ದಾಖಲೆ ಸರಿಗಟ್ಟಿದ್ದಾರೆ. ಬ್ರಾವೋಗಿಂತ 19 ಪಂದ್ಯಗಳನ್ನು ಕಡಿಮೆ ಆಡಿ ಚಹಲ್ ಈ ದಾಖಲೆ ಸರಿಗಟ್ಟಿದ್ದಾರೆ.
ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಯುಜುವೇಂದ್ರ ಚಹಲ್ 27 ವಿಕೆಟ್ ಕಬಳಿಸುವ ಮೂಲಕ ಪರ್ಪಲ್ ಕ್ಯಾಪ್ ಜಯಿಸಿದ್ದರು. ಇದೀಗ 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸದ್ಯ 11 ಪಂದ್ಯಗಳನ್ನಾಡಿ 17 ವಿಕೆಟ್ ಕಬಳಿಸುವ ಮೂಲಕ ಮತ್ತೊಮ್ಮೆ ಪರ್ಪಲ್ ಕ್ಯಾಪ್ ಪಡೆಯುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದಾರೆ.
ಯುಜುವೇಂದ್ರ ಚಹಲ್ ಇನ್ನು ಕೇವಲ ಒಂದು ವಿಕೆಟ್ ಕಬಳಿಸಿದರೆ, ಐಪಿಎಲ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಎನ್ನುವ ದಾಖಲೆ ನಿರ್ಮಿಸಲಿದ್ದಾರೆ. ಇನ್ನು ಕೇವಲ 17 ವಿಕೆಟ್ ಪಡೆದರೆ, ಐಪಿಎಲ್‌ನಲ್ಲಿ 200 ವಿಕೆಟ್ ಕಬಳಿಸಿದ ಮೊದಲ ಬೌಲರ್ ಎನ್ನುವ ಕೀರ್ತಿಗೆ ಪಾತ್ರರಾಗಲಿದ್ದಾರೆ.
ಸದ್ಯ ಸಕ್ರಿಯ ಐಪಿಎಲ್ ಬೌಲರ್‌ಗಳ ಪೈಕಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಅನುಭವಿ ಲೆಗ್‌ಸ್ಪಿನ್ನರ್ ಪೀಯೂಸ್ ಚಾವ್ಲಾ, 175 ಪಂದ್ಯಗಳನ್ನಾಡಿ 174 ವಿಕೆಟ್ ಕಬಳಿಸಿದ್ದಾರೆ. ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಆಗುವ ರೇಸ್‌ನಲ್ಲಿ ಚಾವ್ಲಾ ಕೂಡಾ ಹಿಂದೆ ಬಿದ್ದಿಲ್ಲ.
ಇನ್ನು ಲಖನೌ ಸೂಪರ್ ಜೈಂಟ್ಸ್ ತಂಡದ ಅನುಭವಿ ಲೆಗ್‌ಸ್ಪಿನ್ನರ್ ಅಮಿತ್ ಮಿಶ್ರಾ, ಕೂಡಾ 16ನೇ ಆವತ್ತಿಯ ಐಪಿಎಲ್‌ನಲ್ಲಿ ಭರ್ಜರಿಯಾಗಿಯೇ ಕಮ್‌ಬ್ಯಾಕ್ ಮಾಡಿದ್ದಾರೆ. ಅಮಿತ್ ಮಿಶ್ರಾ, ಸದ್ಯ 173 ವಿಕೆಟ್ ಕಬಳಿಸಿದ್ದ, ಚಹಲ್‌ಗಿಂತ ಕೇವಲ 10 ವಿಕೆಟ್ ಹಿಂದಿದ್ದಾರೆ.
ರಾಜಸ್ಥಾನ ರಾಯಲ್ಸ್‌ನ ಮತ್ತೋರ್ವ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 191 ಪಂದ್ಯಗಳನ್ನಾಡಿ 171 ವಿಕೆಟ್ ಕಬಳಿಸುವ ಮೂಲಕ ಅತಿಹೆಚ್ಚು ವಿಕೆಟ್ ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದ್ದಾರೆ.