WPL 2024: ಮಹಿಳಾ ಐಪಿಎಲ್ ಫೈನಲ್‌ಗೂ ಮುನ್ನ ಈ ಮಾಹಿತಿ ನಿಮಗೆ ತಿಳಿದಿರಲಿ
ಬೆಂಗಳೂರು: ಎರಡನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿ ಫೈನಲ್ ಪಂದ್ಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಫೈನಲ್ ಪಂದ್ಯ ನೋಡುವ ಮುನ್ನ ಈ ಮಾಹಿತಿ ಬಗ್ಗೆ ನಿಮಗೆಲ್ಲರಿಗೂ ತಿಳಿದಿರಲಿ.
ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಇಂದು ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪ್ರಶಸ್ತಿಗಾಗಿ ಕಾದಾಡಲಿವೆ. ಈ ಪಂದ್ಯಕ್ಕೆ ಅರುಣ್ ಜೇಟ್ಲಿ ಮೈದಾನ ಆತಿಥ್ಯ ವಹಿಸಿದೆ.
ಕಳೆದ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಫೈನಲ್ ಪ್ರವೇಶಿಸಿತ್ತಾದರೂ, ಮುಂಬೈ ಇಂಡಿಯನ್ಸ್ ಎದುರು 7 ವಿಕೆಟ್ ಹೀನಾಯ ಸೋಲು ಅನುಭವಿಸುವ ಮೂಲಕ ನಿರಾಸೆ ಅನುಭವಿಸಿತ್ತು. ಇದೀಗ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡವು ಈ ಆವೃತ್ತಿಯಲ್ಲಿ ಅದ್ಭುತ ಲಯದಲ್ಲಿದ್ದು, ಆಡಿದ ಎಂಟು ಪಂದ್ಯಗಳ ಪೈಕಿ 6 ಗೆಲುವು ಹಾಗೂ 2 ಸೋಲು ಸಹಿತ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ನೇರವಾಗಿ ಫೈನಲ್ ಪ್ರವೇಶಿಸಿತ್ತು.
ಡೆಲ್ಲಿ ಕ್ಯಾಪಿಟಲ್ಸ್ ಪರ ನಾಯಕಿ ಮೆಗ್ ಲ್ಯಾನಿಂಗ್ 8 ಪಂದ್ಯಗಳನ್ನಾಡಿ 308 ರನ್ ಬಾರಿಸಿದ್ದಾರೆ. ಮಾರಿಜ್ಜಾನೆ ಕ್ಯಾಪ್ ಹಾಗೂ ಜೆಸ್ ಜಾನ್ಸೆನ್ ತಲಾ 11 ವಿಕೆಟ್ ಕಬಳಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡವು ಇದುವರೆಗೂ ಆರ್‌ಸಿಬಿ ಎದುರು 4 ಪಂದ್ಯಗಳನ್ನಾಡಿದ್ದು ನಾಲ್ಕೂ ಪಂದ್ಯದಲ್ಲೂ ಗೆಲುವಿನ ನಗೆ ಬೀರಿದೆ. ಹೀಗಾಗಿ ಇಂದು 5ನೇ ಪಂದ್ಯ ಗೆದ್ದು ಟ್ರೋಫಿಗೆ ಮುತ್ತಿಕ್ಕುವ ಕನವರಿಕೆಯಲ್ಲಿದೆ ಡೆಲ್ಲಿ.
ಇನ್ನೊಂದೆಡೆ ಆರ್‌ಸಿಬಿ ತಂಡವು ಲೀಗ್ ಹಂತದಲ್ಲಿ ಮೂರನೇ ತಂಡವಾಗಿ ನಾಕೌಟ್ ಪ್ರವೇಶಿಸಿತ್ತು. ಇನ್ನು ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು 5 ರನ್ ರೋಚಕ ಗೆಲುವು ಸಾಧಿಸಿ ಫೈನಲ್‌ಗೆ ಲಗ್ಗೆಯಿಟ್ಟಿದೆ.
ಆರ್‌ಸಿಬಿ ತಂಡದ ಪರ ಎಲೈಸಿ ಪೆರ್ರಿ ಅದ್ಭುತ ಆಲ್ರೌಂಡ್ ಆಟ ಆಡುತ್ತಿದ್ದು, ಇದುವರೆಗೂ ಬ್ಯಾಟಿಂಗ್‌ನಲ್ಲಿ 312 ರನ್ ಸಿಡಿಸಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ 7 ವಿಕೆಟ್ ಕಬಳಿಸಿದ್ದಾರೆ.
ಇಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಗೆಲ್ಲುವ ತಂಡವು ಇದೇ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಲಿದೆ. ಯಾವ ತಂಡ ಚಾಂಪಿಯನ್ ಆಗಲಿದೆ ಎನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ..