WPL 2023: ತಂಡದಲ್ಲಿ ಎಷ್ಟು ವಿದೇಶಿ ಆಟಗಾರ್ತಿಯರು ಕಣಕ್ಕಿಳಿಯಬಹುದು? ಡಿಆರ್‌ಎಸ್ ಇದೆಯಾ?
ಬೆಂಗಳೂರು(ಮಾ.04): ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯು ಇಂದಿನಿಂದ(ಮಾ.04) ಆರಂಭವಾಗಲಿದ್ದು, ಸ್ಮೃತಿ ಮಂಧನಾ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿದಂತೆ 5 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಈ ಟೂರ್ನಿಯ ಕುರಿತಾದ ಕಂಪ್ಲೀಟ್ ಡೀಟೈಲ್ಸ್ ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ ನೋಡಿ.

WPLಯಾವಾಗ? ಎಲ್ಲಿಯವರೆಗೆ ನಡೆಯುತ್ತೆ?
ಚೊಚ್ಚಲ ಆವೃತ್ತಿಯ WPL ಮಾರ್ಚ್ 04ರಂದು ನವಿ ಮುಂಬೈನ ಡಿವೈ ಪಾಟೀಲ್ ಮೈದಾನದಲ್ಲಿ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಕಾದಾಡಲಿವೆ. ಮಾರ್ಚ್ 26ರಂದು ಬ್ರೆಬೋರ್ನ್ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಟೂರ್ನಿ ಮಾದರಿ ಹೇಗೆ?
ಡಬಲ್ ರೌಂಡ್ ರಾಬಿನ್ ಮಾದರಿಯಲ್ಲಿ ಲೀಗ್ ಹಂತ ನಡೆಯಲಿದ್ದು, ಪ್ರತಿ ತಂಡ ಇತರ 4 ತಂಡಗಳ ವಿರುದ್ಧ ತಲಾ 2 ಬಾರಿ ಸೆಣಸಲಿದೆ. ಲೀಗ್ ಹಂತದಲ್ಲಿ ಅಗ್ರಸ್ಥಾನ ಪಡೆದ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದ್ದು, 2 ಮತ್ತು 3ನೇ ಸ್ಥಾನ ಪಡೆವ ತಂಡಗಳು ಎಲಿಮಿನೇಟರ್ನಲ್ಲಿ ಸೆಣಸಲಿವೆ. ನಾಕೌಟ್ ಪಂದ್ಯಕ್ಕೂ ಮುನ್ನ ಪ್ರತಿ ತಂಡವು 8 ಪಂದ್ಯಗಳನ್ನಾಡಲಿದೆ.
ಯಾವೆಲ್ಲಾ ತಂಡಗಳು ಪಾಲ್ಗೊಳ್ಳಲಿವೆ? ಯಾರು ಯಾವ ತಂಡದ ನಾಯಕಿಯರು?
ರಾಯಲ್ ಚಾಲೆಂಜರ್ಸ್ ಬೆಂಗಳೂರು- ಸ್ಮೃತಿ ಮಂಧನಾ
ಮುಂಬೈ ಇಂಡಿಯನ್ಸ್ - ಹರ್ಮನ್‌ಪ್ರೀತ್ ಕೌರ್
ಡೆಲ್ಲಿ ಕ್ಯಾಪಿಟಲ್ಸ್ - ಮೆಗ್ ಲ್ಯಾನಿಂಗ್
ಯುಪಿ ವಾರಿಯರ್ಸ್- ಎಲಿಸಾ ಹೀಲಿ
ಗುಜರಾತ್ ಜೈಂಟ್ಸ್ - ಬೆಥ್ ಮೂನಿ
ಟೂರ್ನಿಯ ಪಂದ್ಯಾವಳಿಗಳು ಎಷ್ಟು ಗಂಟೆಗೆ ಆರಂಭವಾಗಲಿವೆ?
ಟೂರ್ನಿಯಲ್ಲಿ 4 ಡಬಲ್ ಹೆಡರ್(ದಿನಕ್ಕೆ 2 ಪಂದ್ಯ)ಗಳಿದ್ದು, ಆ ದಿನ ಮೊದಲ ಪಂದ್ಯ ಮಧ್ಯಾಹ್ನ 3.30ಕ್ಕೆ, 2ನೇ ಪಂದ್ಯ ಸಂಜೆ 7.30ಕ್ಕೆ ಆರಂಭವಾಗಲಿದೆ. ಒಂದೇ ಪಂದ್ಯವಿರುವ ದಿನ ಸಂಜೆ 7.30ಕ್ಕೆ ಪಂದ್ಯ ಆರಂಭಗೊಳ್ಳಲಿದೆ.
ಟೂರ್ನಿಯಲ್ಲಿ ಒಟ್ಟು ಎಷ್ಟು ಪಂದ್ಯಗಳು ನಡೆಯಲಿವೆ?
ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಒಟ್ಟು 22 ಪಂದ್ಯಗಳು ನಡೆಯಲಿವೆ. ಈ ಪೈಕಿ 20 ಲೀಗ್ ಪಂದ್ಯಗಳಾದರೇ, ಒಂದು ಎಲಿಮಿನೇಟರ್ ಹಾಗೂ ಒಂದು ಫೈನಲ್ ಸೇರಿ ಒಟ್ಟು 22 ಪಂದ್ಯ ನಡೆಯಲಿವೆ.
ತಂಡದಲ್ಲಿ ಎಷ್ಟು ವಿದೇಶಿ ಆಟಗಾರ್ತಿಯರಿಗೆ ಸ್ಥಾನ? ಐಪಿಎಲ್ ರೂಲ್ಸ್ ಅನ್ವಯವಾಗುತ್ತಾ?
ಹೌದು, ಐಪಿಎಲ್‌ನಂತೆಯೇ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ತಂಡವೊಂದು ನಾಲ್ವರು ವಿದೇಶಿ ಆಟಗಾರ್ತಿಯರನ್ನು ಆಡುವ ಹನ್ನೊಂದರ ಬಳಗದಲ್ಲಿ ಕಣಕ್ಕಿಳಿಸಬಹುದು. ಇದಷ್ಟೇ ಅಲ್ಲದೇ ಐಸಿಸಿ ಅಸೋಸಿಯೇಟ್ ತಂಡದ ಆಟಗಾರ್ತಿಯನ್ನು ಈ ನಾಲ್ವರು ಆಟಗಾರ್ತಿಯರ ಜತೆಗೆ ಹೆಚ್ಚುವರಿಯಾಗಿ ಕಣಕ್ಕಿಳಿಸಬಹುದು. ಡೆಲ್ಲಿ ಕ್ಯಾಪಿಟಲ್ಸ್ ತಂಡ ಮಾತ್ರವೇ ಐಸಿಸಿ ಅಸೋಸಿಯೇಟ್ ರಾಷ್ಟ್ರವಾದ ಯುಎಸ್‌ಎ ತಂಡದ ತಾರಾ ನೋರಿಸ್‌ರನ್ನು ಖರೀದಿಸಿದೆ.
ಡಿಆರ್‌ಎಸ್ ನಿಯಮ ಅನ್ವಯವಾಗುತ್ತಾ?
ಹೌದು, ಪ್ರತಿ ತಂಡವು ಪ್ರತಿ ಇನಿಂಗ್ಸ್‌ನಲ್ಲಿ ಡಿಆರ್‌ಎಸ್(ಡಿಸಿಷನ್ ರಿವ್ಯೂ ಸಿಸ್ಟಂ) ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ. ಇದಷ್ಟೇ ಅಲ್ಲದೇ ಥರ್ಡ್ ಅಂಪೈರ್ ಅಲ್ಟ್ರಾ ಎಡ್ಜ್, ಹಾಕೈ ಟೆಕ್ನಾಲಜಿ ಬಳಸಲು ಅವಕಾಶವಿದೆ