'ಹಣಕ್ಕಿಂತ ನಿಯತ್ತು ಮುಖ್ಯ': ಎದುರಾಳಿ IPL ಫ್ರಾಂಚೈಸಿ 20 ಕೋಟಿ ಆಫರ್ ತಿರಸ್ಕರಿಸಿದ RCB ಹುಲಿ ವಿರಾಟ್ ಕೊಹ್ಲಿ..!
ಬೆಂಗಳೂರು: ವಿರಾಟ್ ಕೊಹ್ಲಿ ಆಧುನಿಕ ಕ್ರಿಕೆಟ್‌ನ ಸೂಪರ್ ಸ್ಟಾರ್ ಅಟಗಾರ. ಇದೀಗ ಬರೋಬ್ಬರಿ 17ನೇ ಬಾರಿಗೆ ಐಪಿಎಲ್‌ನಲ್ಲಿ ಒಂದೇ ತಂಡದ ಪರವಾಗಿ ಕಣಕ್ಕಿಳಿಯಲು ಸಜ್ಜಾಗಿದೆ. ಹೀಗಿರುವಾಗಲೇ ವಿರಾಟ್ ಕೊಹ್ಲಿ ಈ ಹಿಂದೆ ನೀಡಿದ್ದ ಹೇಳಿಕೆಯೊಂದು ವೈರಲ್ ಆಗುತ್ತಿದೆ. ಏನದು ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಮಾರ್ಚ್ 22ರಂದು ಆರ್‌ಸಿಬಿ-ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ.
ಚೆನ್ನೈನ ಚೆಪಾಕ್ ಮೈದಾನದಲ್ಲಿ ಬದ್ದ ಎದುರಾಳಿಗಳ ನಡುವಿನ ಕಾದಾಟಕ್ಕೆ ಕ್ಷಣಗಣನೆ ಶುರುವಾಗಿದೆ. ಎರಡು ತಂಡಗಳು ಗೆಲುವಿನೊಂದಿಗೆ ಶುಭಾರಂಭ ಮಾಡುವ ಕನವರಿಕೆಯಲ್ಲಿವೆ.
ಕಳೆದ 16 ಆವೃತ್ತಿಗಳಿಂದಲೂ ಐಪಿಎಲ್ ಕಪ್ ಗೆಲ್ಲುವ ಕನವರಿಕೆಯಲ್ಲಿರುವ ಆರ್‌ಸಿಬಿ ತಂಡವು ಇದೀಗ ಬಲಾಢ್ಯ ತಂಡದೊಂದಿಗೆ ಟೂರ್ನಿಗೆ ಸಜ್ಜಾಗಿದೆ.
ಇನ್ನು ಆರ್‌ಸಿಬಿ ಫ್ರಾಂಚೈಸಿಯು ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಫಾಫ್ ಡು ಪ್ಲೆಸಿಸ್, ವಿಲ್ ಜೇಕ್ಸ್, ಮೊಹಮ್ಮದ್ ಸಿರಾಜ್, ರೀಸ್ ಟಾಪ್ಲೆ ಅವರಂತಹ ಟಿ20 ಸ್ಪೆಷಲಿಸ್ಟ್ ಆಟಗಾರರನ್ನು ಉಳಿಸಿಕೊಂಡಿದೆ.
Cameron Green
ಇದೀಗ ಆರ್‌ಸಿಬಿ ಫ್ರಾಂಚೈಸಿಯು ಮುಂಬೈ ಇಂಡಿಯನ್ಸ್ ತಂಡದಿಂದ ಆಸ್ಟ್ರೇಲಿಯಾ ಮೂಲದ ಸ್ಟಾರ್ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಅವರನ್ನು ಖರೀದಿಸುವ ಮೂಲಕ ತನ್ನ ಬಲವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ.
ಇದೆಲ್ಲದರ ನಡುವೆ ಆರ್‌ಸಿಬಿ ಪಾಲಿನ ಆಪತ್ಭಾಂದವ ವಿರಾಟ್ ಕೊಹ್ಲಿ ಇದೀಗ ಸತತ 17ನೇ ಬಾರಿಗೆ ಬೆಂಗಳೂರು ತಂಡದಲ್ಲಿ ಆಡಲು ಸಜ್ಜಾಗಿದ್ದಾರೆ. ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯಿಂದಲೂ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡವನ್ನು ನಿರಂತರವಾಗಿ ಪ್ರತಿನಿಧಿಸುತ್ತಾ ಬಂದಿದ್ದಾರೆ.
2008ರಲ್ಲಿ ಆರ್‌ಸಿಬಿ ತಂಡ ಕೂಡಿಕೊಂಡಿದ್ದ ವಿರಾಟ್ ಕೊಹ್ಲಿಯನ್ನು 2011ರ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಬೆಂಗಳೂರು ಫ್ರಾಂಚೈಸಿಯು ಕೊಹ್ಲಿಯೊಬ್ಬರನ್ನೇ ರೀಟೈನ್ ಮಾಡಿಕೊಂಡಿತ್ತು. ಅದೇ ರೀತಿ ವಿರಾಟ್ ಕೊಹ್ಲಿ ಕೂಡಾ ಫ್ರಾಂಚೈಸಿಯ ನಂಬಿಕೆ ಉಳಿಸಿಕೊಳ್ಳುವಂತೆ ಪ್ರದರ್ಶನವನ್ನು ನೀಡುತ್ತಲೇ ಬಂದಿದ್ದಾರೆ.
ವಿರಾಟ್ ಕೊಹ್ಲಿ ಐಪಿಎಲ್ ಆರಂಭಿಕ ದಿನಗಳಲ್ಲಿ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಸಾಕಷ್ಟು ಪರದಾಟ ನಡೆಸಿದ್ದರು. ಆ ಸಂಕಷ್ಟದ ಸಂದರ್ಭದಲ್ಲಿ ಆಸರೆಯಾಗಿ ನಿಂತಿದ್ದು ಆರ್‌ಸಿಬಿ ಫ್ರಾಂಚೈಸಿ. ಈ ಕಾರಣಕ್ಕಾಗಿಯೇ ವಿರಾಟ್ ಕೊಹ್ಲಿಗೆ ಕೂಡಾ ಆರ್‌ಸಿಬಿ ಎಂದರೆ ಎಲ್ಲಿಲ್ಲದ ಪ್ರೀತಿ.
ಈ ಕಾರಣಕ್ಕಾಗಿಯೇ 2023ರ ಐಪಿಎಲ್ ಟೂರ್ನಿಗೂ ಮುನ್ನ ಜಿಯೋ ಸಿನಿಮಾದ ಜತೆ ಮಾತನಾಡಿದ್ದ ವಿರಾಟ್ ಕೊಹ್ಲಿ, "ನಾನು ಯಾವ ಫ್ರಾಂಚೈಸಿ ಎಂದು ಹೆಸರು ಹೇಳಲು ಬಯಸುವುದಿಲ್ಲ. ನಾನಾಗ 5-6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದೆ. ಆಗ ನಾನು ಅಗ್ರಕ್ರಮಾಂಕದಲ್ಲಿ ಆಡಲು ಬಯಸಿದ್ದೆ. ಆಗ ನೀವು ಹರಾಜಿಗೆ ಬನ್ನಿ ಎಂದು ಆಫರ್ ಮಾಡಿದರು. ಆದರೆ ನಾನು ಸಾಧ್ಯವೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ ಎಂದು ತಿಳಿಸಿದ್ದರು.
ನೀವು ಹರಾಜಿಗೆ ಬಂದರೆ ನಾವು 20 ಕೋಟಿ ರುಪಾಯಿ ನೀಡಿ ಬೇಕಿದ್ದರೂ ಖರೀದಿಸುತ್ತೇವೆ ಎಂದು ಎದುರಾಳಿ ಐಪಿಎಲ್ ಫ್ರಾಂಚೈಸಿ ಆಫರ್ ನೀಡಿತ್ತು. ಆಗ ಕೊಹ್ಲಿ ನಿಯತ್ತು ಮುಖ್ಯವೇ ಹೊರತು ಹಣವಲ್ಲ ಎನ್ನುವ ಮೂಲಕ ಈ ಆಫರ್ ಸಾರಾಸಗಟಾಗಿ ತಿರಸ್ಕರಿಸಿದ್ದರು.
ವಿರಾಟ್ ಕೊಹ್ಲಿ ಸದ್ಯ ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ಆರ್‌ಸಿಬಿ ತಂಡದ ಪರವೇ ವಿರಾಟ್ ಕೊಹ್ಲಿ 7263 ರನ್ ಬಾರಿಸಿದ್ದು, ಇದೀಗ ಮತ್ತೊಮ್ಮೆ ರೆಡ್ ಆರ್ಮಿ ಪರ ಅಬ್ಬರಿಸಲು ಸಜ್ಜಾಗಿದ್ದಾರೆ.