Virat Kohli Press Conference: ಬಿಸಿಸಿಐ ಬಣ್ಣ ಬಯಲು ಮಾಡಿದ ಕಿಂಗ್ ಕೊಹ್ಲಿ..!
ಬೆಂಗಳೂರು: ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli), ಸೀಮಿತ ಓವರ್‌ಗಳ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಜತೆ ಮುನಿಸಿಕೊಂಡಿದ್ದಾರೆ. ಹೀಗಾಗಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ (India Tour of South Africa) ಏಕದಿನ ಸರಣಿಯಿಂದ ಹಿಂದೆ ಸರಿಯಲಿದ್ದಾರೆ ಎಂದೆಲ್ಲಾ ಸುದ್ದಿಯಾಗಿತ್ತು. ಇದರ ಜತೆಗೆ ಬಿಸಿಸಿಐ(BCCI), ಕೊಹ್ಲಿಯನ್ನು ಟಿ20 ನಾಯಕತ್ವದ ಕೆಳಗಿಳಿಯದೇ ಇರಲು ಮನವೊಲಿಸಲಾಗಿತ್ತು ಎಂದು ಸೌರವ್ ಗಂಗೂಲಿ (Sourav Ganguly) ಹೇಳಿದ್ದರು. ಇದೀಗ ಇವೆಲ್ಲದರ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟವಾಗಿ ಹಲವು ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಅಷ್ಟಕ್ಕೂ ವಿರಾಟ್ ಕೊಹ್ಲಿ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಏನಂದ್ರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ಟೆಸ್ಟ್ ಸರಣಿಗೆ ತಂಡವನ್ನು ಆಯ್ಕೆ ಮಾಡುವಾಗ ನನ್ನ ಜೊತೆ ಒಂದುವರೆ ಗಂಟೆಗಳ ಕಾಲ ಆಯ್ಕೆ ಸಮಿತಿ ಚರ್ಚೆ ನಡೆಸಿತು. ಕೊನೆಗೆ ಇನ್ನು ಮುಂದೆ ನೀವು ಏಕದಿನ ಕ್ರಿಕೆಟ್ ತಂಡದ ನಾಯಕರಾಗಿರುವುದಿಲ್ಲ ಎಂದು ಬಿಟ್ಟರು. ಇದರ ಬಗ್ಗೆ ನನಗ್ಯಾವ ಸಣ್ಣ ಸುಳಿವನ್ನು ಐವರು ಸದಸ್ಯರನ್ನೊಳಗೊಂಡ ಆಯ್ಕೆ ಸಮಿತಿ ನೀಡಲಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.
ಟಿ20 ವಿಶ್ವಕಪ್ ಮುಕ್ತಾಯದ ಬಳಿಕ ಭಾರತ ಟಿ20 ನಾಯಕತ್ವದಿಂದ ಕೆಳಗಿಳಿಯುವ ತೀರ್ಮಾನ ತೆಗೆದುಕೊಂಡಿದ್ದೆ. ನನ್ನ ರಾಜೀನಾಮೆ ಪತ್ರವನ್ನು ಬಿಸಿಸಿಐ ಅಂಗೀಕರಿಸಿತು. ಟಿ20 ನಾಯಕತ್ವ ಜವಾಬ್ದಾರಿಯಿಂದ ಕೆಳಗಿಳಿಯುವುದು ನನ್ನದೇ ನಿರ್ಧಾರವಾಗಿತ್ತು ಎಂದು ಕೊಹ್ಲಿ ಹೇಳಿದ್ದಾರೆ.
ನಾನು ಟಿ20 ನಾಯಕತ್ವದಿಂದ ಕೆಳಗಿಳಿಯುವುದಾಗಿ ತಿಳಿಸಿದಾಗ ಬಿಸಿಸಿಐ ಸಮ್ಮತಿ ಸೂಚಿಸಿತು. ಇದರ ಬಗ್ಗೆ ಯಾವುದೇ ಚರ್ಚೆಗಳು ನಡೆಯಲಿಲ್ಲ. ಆದರೆ ಟೆಸ್ಟ್ ಹಾಗೂ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ನಾಯಕನಾಗಿ ಮುಂದುವರೆಯುವುದಾಗಿ ಸ್ಪಷ್ಟವಾಗಿ ಬಿಸಿಸಿಐ ತಿಳಿಸಿದ್ದೆ ಎಂದು ಕೊಹ್ಲಿ ಹೇಳಿದ್ದಾರೆ.
ಈ ಮೊದಲು ಬಿಸಿಸಿಐ ಸೌರವ್ ಗಂಗೂಲಿ, ತಾವು ಕೊಹ್ಲಿಯನ್ನು ಟಿ20 ನಾಯಕತ್ವದಿಂದ ಕೆಳಗಿಳಿಯದಂತೆ ಮನವೊಲಿಸಲು ಪ್ರಯತ್ನಿಸಿದ್ದಾಗಿ ತಿಳಿಸಿದ್ದರು. ಆದರೆ ಕೊಹ್ಲಿಯ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ಬಟಾಬಯಲಾಗಿದೆ.
ಇನ್ನು ಇದೇ ವೇಳೆ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಮೂರು ಪಂದ್ಯಗಳ ಏಕದಿನ ಸರಣಿಗೆ ತಾವು ಆಯ್ಕೆಗೆ ಲಭ್ಯವಿರುವುದಾಗಿ ವಿರಾಟ್ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ. ಇದರ ಜತೆಗೆ ಈ ಮೊದಲು ಮಾಧ್ಯಮಗಳು ವರದಿ ಮಾಡಿದಂತೆ ಯಾವುದೇ ಬ್ರೇಕ್ ಕೇಳಿರಲಿಲ್ಲ ಎಂದು ಗಾಳಿ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ.
ಈ ಮೊದಲು ಮಾಧ್ಯಮಗಳಲ್ಲಿ ವಿರಾಟ್ ಕೊಹ್ಲಿ, ತಮ್ಮ ಮಗಳು ವಮಿಕಾ ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಿಸುವ ಉದ್ದೇಶದಿಂದ ಟೆಸ್ಟ್ ಸರಣಿ ಮುಕ್ತಾಯದ ಬಳಿಕ ಏಕದಿನ ಸರಣಿಯಿಂದ ಹೊರಗುಳಿಯಲು ತೀರ್ಮಾನಿಸಿದ್ದಾರೆ ಎಂದೆಲ್ಲಾ ವರದಿಯಾಗಿತ್ತು.
ಐಸಿಸಿ ಟಿ20 ವಿಶ್ವಕಪ್ ಮುಕ್ತಾಯದ ಬಳಿಕ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ದ ನಡೆದ ಮೂರು ಪಂದ್ಯಗಳ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿದ್ದರು. ಇದಾದ ಬಳಿಕ ಎರಡನೇ ಟೆಸ್ಟ್ ಪಂದ್ಯದ ವೇಳೆ ತಂಡ ಕೂಡಿಕೊಂಡಿದ್ದರು. ಇದೀಗ ದಕ್ಷಿಣ ಆಫ್ರಿಕಾ ವಿರುದ್ದದ ಮೂರು ಪಂದ್ಯಗಳ ಟೆಸ್ಟ್ ಸರಣಿ ಬಳಿಕ ಮತ್ತೆ ವಿಶ್ರಾಂತಿ ಕೇಳಿದ್ದರು ಎಂದು ವರದಿಯಾಗಿತ್ತು.
ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ನಡೆದ ಆಯ್ಕೆ ಸಮಿತಿಯ ನಿರ್ಧಾರದಂತೆ ಏಕದಿನ ಕ್ರಿಕೆಟ್ ತಂಡಕ್ಕೂ ರೋಹಿತ್ ಶರ್ಮಾಗೆ ನಾಯಕತ್ವ ಪಟ್ಟ ಕಟ್ಟಲಾಗಿದೆ. ಈಗಾಗಲೇ ರೋಹಿತ್ ಶರ್ಮಾ ಭಾರತ ಟಿ20 ತಂಡಕ್ಕೆ ನಾಯಕರಾಗಿ ನೇಮಕವಾಗಿದ್ದಾರೆ.
ನನ್ನ ಕರ್ತವ್ಯವೇನಿದ್ದರೂ ತಂಡವನ್ನು ಸರಿಯಾದ ದಿಕ್ಕಿನತ್ತ ಕೊಂಡೊಯ್ಯುವುದಾಗಿದೆ. ರೋಹಿತ್ ಶರ್ಮಾ ಓರ್ವ ಸಮರ್ಥ ಹಾಗೂ ಚಾಣಾಕ್ಷ ನಾಯಕ. ರಾಹುಲ್ ದ್ರಾವಿಡ್ ಅತ್ಯುತ್ತಮ ಮ್ಯಾನ್ ಮ್ಯಾನೇಜರ್. ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಅವರಿಬ್ಬರಿಗೂ ನನ್ನ ಬೆಂಬಲ 100% ಇರಲಿದೆ ಎಂದು ಕೊಹ್ಲಿ ಹೇಳಿದ್ದಾರೆ.
ಇನ್ನು ರೋಹಿತ್ ಜತೆಗಿನ ಮನಸ್ತಾಪದ ಕುರಿತು ಪ್ರತಿಕ್ರಿಯಿಸಿರುವ ಕೊಹ್ಲಿ, ನನ್ನ ಹಾಗೂ ರೋಹಿತ್ ಶರ್ಮಾ ನಡುವೆ ಯಾವುದೇ ಸಮಸ್ಯೆಗಳಿಲ್ಲ. ಕಳೆದ ಎರಡೂವರೆ ವರ್ಷಗಳಿಂದ ನಾನಿದನ್ನು ಎಲ್ಲರಿಗೂ ಅರ್ಥೈಸಿ ಸಾಕಾಗಿ ಹೋಗಿದೆ. ನನ್ನ ಯಾವ ನಿರ್ಧಾರ ಹಾಗೂ ಕ್ರಿಯೆಯೂ ತಂಡಕ್ಕೆ ಹಿನ್ನಡೆಯಾಗದಂತೆ ನೋಡಿಕೊಳ್ಳುವುದಾಗಿ ಕೊಹ್ಲಿ ಪುನರುಚ್ಚರಿಸಿದ್ದಾರೆ.