ಟೀಂ ಇಂಡಿಯಾಗೆ 15 ವರ್ಷದ ವೈಭವ್ ಸೂರ್ಯವಂಶಿ ಎಂಟ್ರಿ ಯಾವಾಗ? ಕೊಟ್ಟೇಬಿಡ್ತು BCCI ಬಿಗ್ ಹಿಂಟ್!
ರಾಜಸ್ಥಾನ ರಾಯಲ್ಸ್ ತಂಡದ ವೈಭವ್ ಸೂರ್ಯವಂಶಿ ಸದ್ಯ ಕ್ರಿಕೆಟ್ ಜಗತ್ತಿನ ಹಾಟ್ ಟಾಪಿಕ್. ಐಪಿಎಲ್‌ನಲ್ಲಿ 15ನೇ ವಯಸ್ಸಿಗೆ ಆರೆಂಜ್ ಕ್ಯಾಪ್ ಗೆದ್ದ ಅತಿ ಕಿರಿಯ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಈ ದಾಖಲೆ ಬೆನ್ನಲ್ಲೇ, ಅಭಿಮಾನಿಗಳ ಮನಸ್ಸಲ್ಲಿ ಒಂದೇ ಪ್ರಶ್ನೆ - ವೈಭವ್ ಇಂಡಿಯಾಕ್ಕೆ ಯಾವಾಗ ಆಡ್ತಾರೆ?

ಐಪಿಎಲ್‌ನಲ್ಲೂ ಸಾಮಾರ್ಥ್ಯ ಅನಾವರಣ ಮಾಡಿದ ವೈಭವ್ ಸೂರ್ಯವಂಶಿ
ಭವಿಷ್ಯದ ಸೂಪರ್‌ಸ್ಟಾರ್ ಅಂತಾನೇ ಬಿಂಬಿತವಾಗಿರುವ ಈ ಹುಡುಗನನ್ನ ಬೇಗ ತಂಡಕ್ಕೆ ಸೇರಿಸಿಕೊಳ್ಳಬೇಕು ಅನ್ನೋ ಕೂಗು ಜೋರಾಗಿದೆ. ಈಗಾಗಲೇ ಅಂಡರ್-19 ವಿಶ್ವಕಪ್ ಗೆದ್ದು, ಐಪಿಎಲ್‌ನಲ್ಲೂ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.
ವೈಭವ್ ಸೂರ್ಯವಂಶಿ ಟೀಂ ಇಂಡಿಯಾ ಪಾದಾರ್ಪಣೆಗೆ ಹೆಚ್ಚಿದ ಒತ್ತಡ
ಸ್ವತಃ ಸಚಿನ್ ತೆಂಡೂಲ್ಕರ್ ಅವರೇ, ಸೂರ್ಯವಂಶಿ ಟೆಸ್ಟ್ ಕ್ರಿಕೆಟ್ ಆಡುವುದನ್ನು ನೋಡಲು ಕಾಯುತ್ತಿರುವುದಾಗಿ ಹೇಳಿದ್ದಾರೆ. ಸುನಿಲ್ ಗವಾಸ್ಕರ್ ಸೇರಿದಂತೆ ಹಲವು ಮಾಜಿ ಆಟಗಾರರು ಕೂಡ ಇವರ ಪದಾರ್ಪಣೆಗಾಗಿ ಎದುರು ನೋಡುತ್ತಿದ್ದಾರೆ. ಈ ಸೀಸನ್ ಐಪಿಎಲ್‌ನ ಉದಯೋನ್ಮುಖ ಆಟಗಾರನಾಗಿ ವೈಭವ್ ಹೊರಹೊಮ್ಮಿದ್ದಾರೆ.
ಸುಳಿವು ಬಿಟ್ಟುಕೊಟ್ಟ ಬಿಸಿಸಿಐ ಚೀಫ್ ಸೆಲೆಕ್ಟರ್
ಐಪಿಎಲ್ ಫೈನಲ್ ವೇಳೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಾಜಿ ಆಟಗಾರ ಅಜಯ್ ಜಡೇಜಾ, ಈ ಬಗ್ಗೆ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್‌ರನ್ನು ಪ್ರಶ್ನಿಸಿದ್ದರು. ಅಗರ್ಕರ್ ನೀಡಿದ ಉತ್ತರವನ್ನು ಜಡೇಜಾ ಬಹಿರಂಗಪಡಿಸಿದ್ದು, ಸೂರ್ಯವಂಶಿ ಶೀಘ್ರದಲ್ಲೇ ಟೀಂ ಇಂಡಿಯಾಗೆ ಬರಬಹುದು ಎಂಬ ಬಲವಾದ ಸುಳಿವು ಸಿಕ್ಕಿದೆ ಎಂದು ಹೇಳಿದ್ದಾರೆ.
ವೈಭವ್ ಸೆಲೆಕ್ಷನ್ ಬಗ್ಗೆ ಅಜಿತ್ ಅಗರ್ಕರ್ ಮಾತು
ಇಲ್ಲಿಯವರೆಗೆ ಬಿಸಿಸಿಐ, ಸೂರ್ಯವಂಶಿ ಆಯ್ಕೆ ಬಗ್ಗೆ ಮೌನ ವಹಿಸಿತ್ತು. ಕಳೆದ ತಿಂಗಳು ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಮತ್ತು ಏಕದಿನ ಸರಣಿಗೆ ತಂಡ ಪ್ರಕಟಿಸುವಾಗ, 'ಸೂರ್ಯವಂಶಿ ಚೆನ್ನಾಗಿ ಬ್ಯಾಟ್ ಮಾಡುತ್ತಿದ್ದಾರೆ, ಆದರೆ ಸೀನಿಯರ್ ತಂಡದಲ್ಲಿ ಅವಕಾಶಕ್ಕಾಗಿ ಅವರಿಗಿಂತ ಹಿರಿಯ ಆಟಗಾರರು ಸರದಿಯಲ್ಲಿದ್ದಾರೆ' ಎಂದು ಅಗರ್ಕರ್ ಹೇಳಿದ್ದರು.
ಭಾರತ 'ಎ' ತಂಡಕ್ಕೆ ಆಯ್ಕೆಯಾಗಿರುವ ವೈಭವ್
ಯುವ ಆಟಗಾರನಿಗೆ ಇನ್ನಷ್ಟು ಅನುಭವ ನೀಡುವ ಉದ್ದೇಶದಿಂದ, ಬಿಸಿಸಿಐ ಸದ್ಯ ಸೂರ್ಯವಂಶಿಯನ್ನು ಇಂಡಿಯಾ 'ಎ' ತಂಡಕ್ಕೆ ಆಯ್ಕೆ ಮಾಡಿದೆ. ಈ ತಿಂಗಳ ಕೊನೆಯಲ್ಲಿ ಶ್ರೀಲಂಕಾ ವಿರುದ್ಧ ನಡೆಯಲಿರುವ ಏಕದಿನ ಸರಣಿಗೆ ಇಂಡಿಯಾ 'ಎ' ತಂಡದಲ್ಲಿ ಅವರು ಆಡಲಿದ್ದಾರೆ.
ಸದ್ಯದಲ್ಲೇ ವೈಭವ್ ಟೀಂ ಇಂಡಿಯಾಗೆ ಎಂಟ್ರಿ?
ಅಷ್ಟೇ ಅಲ್ಲ, ಐರ್ಲೆಂಡ್ ವಿರುದ್ಧದ ಟಿ20 ಸರಣಿಯ ಸಂಭಾವ್ಯ ಆಟಗಾರರ ಪಟ್ಟಿಯಲ್ಲೂ ಬಿಸಿಸಿಐ ಸೂರ್ಯವಂಶಿ ಹೆಸರನ್ನು ಸೇರಿಸಿದೆ ಎಂದು ವರದಿಗಳು ಹೇಳುತ್ತಿವೆ. ಒಟ್ಟಿನಲ್ಲಿ, ಈ ಹದಿಹರೆಯದ ಪ್ರತಿಭೆ ಟೀಂ ಇಂಡಿಯಾ ಜರ್ಸಿ ತೊಡುವ ದಿನಗಳು ದೂರವಿಲ್ಲ ಅನ್ನೋದು ಸ್ಪಷ್ಟವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
