- Home
- Sports
- Cricket
- ವೈಭವ್ ಸೂರ್ಯವಂಶಿ ಅಂದ್ರೆ ಸುಮ್ನೆನಾ? ಆರ್‌ಸಿಬಿ ಬೌಲರ್‌ಗಳಿಗೆ ಬೆವರಿಳಿಸಿ ಹೊಸ ದಾಖಲೆ ಬರೆದ 15ರ ಪೋರ!
ವೈಭವ್ ಸೂರ್ಯವಂಶಿ ಅಂದ್ರೆ ಸುಮ್ನೆನಾ? ಆರ್‌ಸಿಬಿ ಬೌಲರ್‌ಗಳಿಗೆ ಬೆವರಿಳಿಸಿ ಹೊಸ ದಾಖಲೆ ಬರೆದ 15ರ ಪೋರ!
ಐಪಿಎಲ್ 2026ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಯುವ ಓಪನರ್ ವೈಭವ್ ಸೂರ್ಯವಂಶಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ತಮ್ಮ ಸ್ಪೋಟಕ ಬ್ಯಾಟಿಂಗ್ನಿಂದ ಅಬ್ಬರಿಸುತ್ತಿರುವ ಇವರು, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.

ವೈಭವ್ ಸೂರ್ಯವಂಶಿ ವಿಸ್ಪೋಟಕ ಬ್ಯಾಟಿಂಗ್
ವೈಭವ್ ಸೂರ್ಯವಂಶಿ. ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಇದೊಂದು ಹೊಸ ಸೆನ್ಸೇಷನ್. ಐಪಿಎಲ್ 2026ರ 16ನೇ ಪಂದ್ಯ ಗುವಾಹಟಿಯ ಬರ್ಸಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಯುವ ಓಪನರ್ ವೈಭವ್ ಸೂರ್ಯವಂಶಿ ಅಕ್ಷರಶಃ ಅಬ್ಬರಿಸಿದರು.
26 ಎಸೆತಗಳಲ್ಲಿ 78 ರನ್ ಚಚ್ಚಿದ ವೈಭವ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ನೀಡಿದ 202 ರನ್‌ಗಳ ಗುರಿ ಬೆನ್ನಟ್ಟುವಾಗ ವೈಭವ್ ಆಡಿದ ಆಟ ಇಡೀ ಸ್ಟೇಡಿಯಂ ಅನ್ನೇ ಹುಚ್ಚೆಬ್ಬಿಸಿತು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಈ ಯುವ ಆಟಗಾರ, ಕೇವಲ 26 ಎಸೆತಗಳಲ್ಲಿ 78 ರನ್ ಗಳಿಸಿ ಎಲ್ಲರನ್ನೂ ಬೆರಗುಗೊಳಿಸಿದರು. ಅವರ ಈ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಮತ್ತು 7 ಆಕರ್ಷಕ ಸಿಕ್ಸರ್‌ಗಳು ಸೇರಿದ್ದವು.
20ಕ್ಕಿಂತ ಕಡಿಮೆ ಎಸೆತದಲ್ಲಿ 3 ಬಾರಿ 50+ ಸ್ಕೋರ್ ದಾಖಲಿಸಿದ ವೈಭವ್
ಜೋಶ್ ಹೇಜಲ್‌ವುಡ್‌ಗೂ ಬಿಸಿ ಮುಟ್ಟಿಸಿದ ವೈಭವ್
ಜೋಶ್ ಹೇಜಲ್‌ವುಡ್ ಬೌಲ್ ಮಾಡಿದ ಇನ್ನಿಂಗ್ಸ್‌ನ 4ನೇ ಓವರ್‌ನಲ್ಲಿ ವೈಭವ್ ಬರೋಬ್ಬರಿ 19 ರನ್ ಕಲೆಹಾಕಿದರು. ಆ ಓವರ್‌ನಲ್ಲಿ ಸತತವಾಗಿ 4, 4, 4, 6 ಬಾರಿಸಿ ಹೇಜಲ್‌ವುಡ್‌ಗೆ ಬಿಸಿ ಮುಟ್ಟಿಸಿದರು. ಕೇವಲ ಹೇಜಲ್‌ವುಡ್ ಮಾತ್ರವಲ್ಲ, ಭುವನೇಶ್ವರ್ ಕುಮಾರ್ ಎಸೆದ 5ನೇ ಓವರ್‌ನಲ್ಲಿ ಎರಡು ಸತತ ಸಿಕ್ಸರ್‌ಗಳನ್ನು ಬಾರಿಸಿ ತಮ್ಮ ಅರ್ಧಶತಕ ಪೂರೈಸಿದ ರೀತಿ ಅದ್ಭುತವಾಗಿತ್ತು. ಪವರ್‌ಪ್ಲೇ ಮುಗಿಯುವ ಹೊತ್ತಿಗೆ ವೈಭವ, ರಾಜಸ್ಥಾನ್ ತಂಡದ ಸ್ಕೋರ್ ಅನ್ನು 97 ರನ್‌ಗಳಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಸ್ಕೋರ್ ಕಾರ್ಡ್ ವೇಗ ಹೆಚ್ಚಿಸಿದ ವೈಭವ್-ಜುರೆಲ್
ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಬೇಗನೆ ಪೆವಿಲಿಯನ್‌ಗೆ ಮರಳಿದರೂ, ವೈಭವ್ ತಮ್ಮ ಆಟದ ವೇಗವನ್ನು ಕಡಿಮೆ ಮಾಡಲಿಲ್ಲ. ಅವರು ಧ್ರುವ್ ಜುರೆಲ್ ಜೊತೆಗೂಡಿ ಎರಡನೇ ವಿಕೆಟ್‌ಗೆ ಕೇವಲ 37 ಎಸೆತಗಳಲ್ಲಿ 108 ರನ್‌ಗಳ ಜೊತೆಯಾಟವನ್ನು ಕಟ್ಟಿದರು. ಈ ಜೋಡಿ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ರೇಟ್ (17.51) ನೊಂದಿಗೆ 100ಕ್ಕೂ ಹೆಚ್ಚು ರನ್‌ಗಳ ಜೊತೆಯಾಟವಾಡಿದ ದಾಖಲೆ ಬರೆಯಿತು. ಅದರಲ್ಲೂ ಟಿಮ್ ಡೇವಿಡ್ ಎಸೆದ 8ನೇ ಓವರ್‌ನಲ್ಲಿ ವೈಭವ್ ಸತತ ಎರಡು ಬಾರಿ ಸಿಕ್ಸರ್‌ಗಳನ್ನು ಬಾರಿಸಿ ಸ್ಕೋರ್ ಬೋರ್ಡ್‌ಗೆ ವೇಗ ನೀಡಿದರು.
ರಾಜಸ್ಥಾನ ರಾಯಲ್ಸ್ ಗೆಲ್ಲಿಸಿದ ವೈಭವ್ ಸೂರ್ಯವಂಶಿ
ಅದ್ಭುತ ಫಾರ್ಮ್‌ನಲ್ಲಿದ್ದು ಶತಕದತ್ತ ಸಾಗುತ್ತಿದ್ದ ವೈಭವ್, ಕೃನಾಲ್ ಪಾಂಡ್ಯ ಎಸೆದ 9ನೇ ಓವರ್‌ನ ಮೊದಲ ಎಸೆತದಲ್ಲೇ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿ ಔಟಾದರು. ಶತಕವನ್ನು ತಪ್ಪಿಸಿಕೊಂಡರೂ, ಅವರು ಗಳಿಸಿದ 78 ರನ್‌ಗಳ ಸ್ಪೋಟಕ ಆಟದಿಂದ ರಾಜಸ್ಥಾನ ತಂಡಕ್ಕೆ ಗೆಲುವು ಸುಲಭವಾಯಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

