ಈ ಹಿಂದೆ ಹರಾಜಿನಲ್ಲಿ ಮಾಡಿದ ಈ 6 ತಪ್ಪು RCB ಮಾಡದಿರಲಿ..! ನಿಮಗೆ ನೆನಪಿವೆಯಾ ಆರ್‌ಸಿಬಿ ಫ್ರಾಂಚೈಸಿ ಎಡವಟ್ಟುಗಳು?
ಬೆಂಗಳೂರು: ಬಹುನಿರೀಕ್ಷಿತ 2024ರ ಐಪಿಎಲ್ ಆಟಗಾರರ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ಡಿಸೆಂಬರ್ 19ರಂದು ಐಪಿಎಲ್ ಆಟಗಾರರ ಹರಾಜು ನಡೆಯಲಿದೆ. ಈ ಹರಾಜಿನಲ್ಲಿ ಎಲ್ಲಾ 10 ತಂಡಗಳು ಪಾಲ್ಗೊಳ್ಳಲು ರಣತಂತ್ರ ಹೆಣೆಯುತ್ತಿವೆ. ಹೀಗಿರುವಾಗಲೇ ಆರ್‌ಸಿಬಿ ಈ ಹಿಂದೆ ಹರಾಜಿನಲ್ಲಿ ಮಾಡಿದ ಆರು ಎಡವಟ್ಟುಗಳನ್ನು ನಾವಿಂದು ನೆನಪು ಮಾಡಿಕೊಳ್ಳೋಣ ಬನ್ನಿ.
1. ಕೈಲ್ ಜೇಮಿಸನ್:
2021ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿಯು ನ್ಯೂಜಿಲೆಂಡ್‌ನ ನೀಳಕಾಯದ ವೇಗಿ ಕೈಲ್ ಜೇಮಿಸನ್ ಅವರನ್ನು ಬರೋಬ್ಬರಿ 15 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಅದು ಆ ಹರಾಜಿನಲ್ಲಿ ಆರ್‌ಸಿಬಿ ಖರೀದಿಸಿದ ದುಬಾರಿ ಮೊತ್ತ ಎನಿಸಿಕೊಂಡಿತ್ತು.
ಆದರೆ ಕೈಲ್ ಜೇಮಿಸನ್ ಅವರ ಖರೀದಿ ಆರ್‌ಸಿಬಿ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಆ ಐಪಿಎಲ್‌ನಲ್ಲಿ ಜೇಮಿಸನ್ 9 ಪಂದ್ಯಗಳನ್ನಾಡಿ ಕೇವಲ 9 ವಿಕೆಟ್ ಕಬಳಿಸಲಷ್ಟೇ ಶಕ್ತರಾಗಿದ್ದಾರೆ.
2. ಯುವರಾಜ್ ಸಿಂಗ್:
ಆರ್‌ಸಿಬಿ ಫ್ರಾಂಚೈಸಿಯು 2014ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಸ್ಟಾರ್ ಆಲ್ರೌಂಡರ್ ಯುವರಾಜ್ ಸಿಂಗ್ ಅವರಿಗೆ ಬರೋಬ್ಬರಿ 14 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಇದು ಆರ್‌ಸಿಬಿ ಮಾಡಿದ ಎಡವಟ್ಟುಗಳಲ್ಲಿ ಒಂದು ಎನಿಸಿತು.
ಯುವರಾಜ್ ಸಿಂಗ್ ಅವರ ಅಸ್ಥಿರ ಪ್ರದರ್ಶನ ಆರ್‌ಸಿಬಿ ಫಲಿತಾಂಶದ ಮೇಲೂ ಪರಿಣಾಮ ಬೀರಿತು. ಆರ್‌ಸಿಬಿ ಪರ 14 ಪಂದ್ಯಗಳನ್ನಾಡಿ 376 ರನ್ ಬಾರಿಸಿದ್ದರು. ಇನ್ನು ಬೌಲಿಂಗ್‌ನಲ್ಲಿ 5 ವಿಕೆಟ್ ಕಬಳಿಸಿದ್ದರು. ಹೀಗಾಗಿ ಒಂದೇ ವರ್ಷಕ್ಕೆ ಆರ್‌ಸಿಬಿ ಯುವಿಯನ್ನು ಕೈಬಿಟ್ಟಿತು.
3. ಶೇನ್ ವಾಟ್ಸನ್:
2017ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿಯು ಶೇನ್ ವಾಟ್ಸನ್ ಬರೋಬ್ಬರಿ 9.7 ಕೋಟಿ ರುಪಾಯಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಈ ತೀರ್ಮಾನ ಕೂಡಾ ಆರ್‌ಸಿಬಿ ಪಾಲಿಗೆ ದುಬಾರಿ ಎನಿಸಿಕೊಂಡಿತು.
ಆದರೆ ಶೇನ್ ವಾಟ್ಸನ್ 2017ರ ಐಪಿಎಲ್‌ನಲ್ಲಿ ಆರ್‌ಸಿಬಿ ಪರ 8 ಪಂದ್ಯಗಳನ್ನಾಡಿ ಕೇವಲ 71 ರನ್ ಗಳಿಸಲಷ್ಟೇ ಶಕ್ತರಾದರು. ಇನ್ನು ಬೌಲಿಂಗ್‌ನಲ್ಲಿ ವಾಟ್ಸನ್ ಕಬಳಿಸಿದ್ದು ಕೇವಲ 5 ವಿಕೆಟ್ ಮಾತ್ರ.
4. ಟೈಮಲ್ ಮಿಲ್ಸ್
ಇನ್ನು ಶೇನ್ ವಾಟ್ಸನ್ ಅವರಂತೆ 2017ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿಯು ಇಂಗ್ಲೆಂಡ್ ವೇಗಿ ಟೈಮಲ್ ಮಿಲ್ಸ್‌ಗೆ ಬರೋಬ್ಬರಿ 12 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿದ್ದು ಕೂಡಾ ದುಬಾರಿ ಖರೀದಿ ಎನಿಸಿಕೊಂಡಿತು.
Tymal Mills
2017ರ ಐಪಿಎಲ್‌ನಲ್ಲಿ ಟೈಮಲ್ ಮಿಲ್ಸ್, ಆರ್‌ಸಿಬಿ ಪರ ಕೇವಲ 5 ಪಂದ್ಯಗಳನ್ನಾಡಿ 5 ವಿಕೆಟ್‌ಗಳನ್ನಷ್ಟೇ ಕಬಳಿಸಲು ಯಶಸ್ವಿಯಾಗಿದ್ದರು. ಈ ಮೂಲಕ ಮಿಲ್ಸ್ ಖರೀದಿ ಕೂಡಾ ದುಬಾರಿ ಎನಿಸಿಕೊಂಡಿತು.
5. ಕೆವಿನ್ ಪೀಟರ್‌ಸನ್
2009ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿಯು ಇಂಗ್ಲೆಂಡ್ ಸ್ಟೈಲೀಷ್ ಕ್ರಿಕೆಟಿಗ ಕೆವಿನ್ ಪೀಟರ್‌ಸನ್ ಅವರನ್ನು ಖರೀದಿಸಿತ್ತು. ಆ ಹರಾಜಿನಲ್ಲಿ ಪೀಟರ್‌ಸನ್ ಜಂಟಿ ದುಬಾರಿ ಆಟಗಾರ ಎನಿಸಿಕೊಂಡಿದ್ದರು.
ಆರ್‌ಸಿಬಿ ಫ್ರಾಂಚೈಸಿಯು ಪೀಟರ್‌ಸನ್‌ಗೆ ತಂಡದ ನಾಯಕ ಪಟ್ಟ ಕೂಡಾ ಕಟ್ಟಿತು. ಹೀಗಿದ್ದೂ ಪೀಟರ್‌ಸನ್ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ. ಆರ್‌ಸಿಬಿ ಪರ ಕೇವಲ 6 ಪಂದ್ಯಗಳನ್ನು ಆಡಿ 93 ರನ್ ಗಳಿಸಿ ಟೂರ್ನಿಯ ಅರ್ಧದಲ್ಲೇ ತಂಡವನ್ನು ತೊರೆದರು. ಇದು ಆರ್‌ಸಿಬಿ ಪಾಲಿಗೆ ಹಿನ್ನಡೆಯಾಗಿ ಪರಿಣಮಿಸಿತು.
6. ಪವನ್ ನೇಗಿ:
2016ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿಯು ಆಲ್ರೌಂಡರ್ ಪವನ್ ನೇಗಿ ಅವರನ್ನು 8.5 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಆದರೆ ನೇಗಿ ಆರ್‌ಸಿಬಿ ಪರ 8 ಪಂದ್ಯಗಳನ್ನಾಡಿ 57 ರನ್ ಗಳಿಸಿದರೆ, ಬೌಲಿಂಗ್‌ನಲ್ಲಿ ಉರುಳಿಸಿದ್ದು ಕೇವಲ ಒಂದು ವಿಕೆಟ್ ಮಾತ್ರ.