ಜಡ್ಡು, ವಿಹಾರಿ ಬಳಿಕ ಟೀಂ ಇಂಡಿಯಾದ ಮತ್ತೋರ್ವ ಸ್ಟಾರ್ ಆಟಗಾರ ಬ್ರಿಸ್ಬೇನ್ ಟೆಸ್ಟ್‌ನಿಂದ ಔಟ್..!
ಸಿಡ್ನಿ: ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸದ ಅಂತಿಮ ಘಟ್ಟ ಪ್ರವೇಶಿಸಿದ್ದು, ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಕೊನೆಯ ಪಂದ್ಯಕ್ಕೂ ಮುನ್ನ ಗಾಯದ ಸಮಸ್ಯೆ ಟೀಂ ಇಂಡಿಯಾವನ್ನು ಬಿಟ್ಟೂ ಬಿಡದಂತೆ ಕಾಡಲಾರಂಭಿಸಿದೆ.
ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಕೆಲವು ಆಟಗಾರರು ಗಾಯಕ್ಕೆ ತುತ್ತಾದರೆ, ಮತ್ತೆ ಕೆಲವು ಆಟಗಾರರು ಸರಣಿ ಆರಂಭವಾದ ಬಳಿಕ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದಿದ್ದಾರೆ. ಟೀಂ ಇಂಡಿಯಾದ ಪ್ರಮುಖ ಆಲ್ರೌಂಡರ್ ರವೀಂದ್ರ ಜಡೇಜಾ ಹಾಗೂ ಹನುಮ ವಿಹಾರಿ ಬಳಿಕ ಇದೀಗ ತಂಡದ ಮತ್ತೊಬ್ಬ ಪ್ರಮುಖ ಆಟಗಾರ ತಂಡದಿಂದ ಹೊರಬಿದ್ದಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದ ಅಂತಿಮ ಘಟ್ಟದಲ್ಲಿರುವ ಟೀಂ ಇಂಡಿಯಾಗೆ ಗಾಯದ ಸಮಸ್ಯೆ ಇನ್ನಿಲ್ಲದಂತೆ ಕಾಡಲಾರಂಭಿಸಿದೆ.
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಇಶಾಂತ್ ಶರ್ಮಾ ಸಂಪೂರ್ಣ ಹೊರಬಿದ್ದರೆ, ರೋಹಿತ್ ಶರ್ಮಾ ಫಿಟ್ನೆಸ್ ಸಮಸ್ಯೆಯ ಕಾರಣದಿಂದ ಮೊದಲೆರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದರು.
ಇನ್ನು ಟೆಸ್ಟ್ ಸರಣಿ ಆರಂಭವಾದ ಬಳಿಕ ಮೊದಲ ಟೆಸ್ಟ್ ಪಂದ್ಯದ ಬಳಿಕ ಟೀಂ ಇಂಡಿಯಾ ಪ್ರಮುಖ ವೇಗಿ ಮೊಹಮ್ಮದ್ ಶಮಿ ಗಾಯಗೊಂಡು ಹೊರಬಿದ್ದಿದ್ದರು.
ಎರಡನೇ ಟೆಸ್ಟ್ ಪಂದ್ಯದ ಬಳಿಕ ಮತ್ತೋರ್ವ ವೇಗಿ ಉಮೇಶ್ ಯಾದವ್ ಹಾಗೂ ಕೆ.ಎಲ್. ರಾಹುಲ್ ಗಾಯದ ಸಮಸ್ಯೆಯಿಂದಾಗಿ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದರು.
ಇನ್ನು ಸಿಡ್ನಿ ಟೆಸ್ಟ್ ಪಂದ್ಯದ ಮಧ್ಯದಲ್ಲೇ ಟೀಂ ಇಂಡಿಯಾ ಪ್ರಮುಖ ಆಲ್ರೌಂಡರ್ ರವೀಂದ್ರ ಜಡೇಜಾ ಕೈಬೆರಳಿನ ಗಾಯಕ್ಕೆ ತುತ್ತಾಗಿ ತಂಡದಿಂದ ಹೊರಬಿದ್ದರೆ, ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ತಂಡವನ್ನು ಡ್ರಾ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ ಹನುಮ ವಿಹಾರಿ ಕೂಡಾ ಸ್ನಾಯು ಸೆಳೆತಕ್ಕೆ ಒಳಗಾಗಿ ಕೊನೆಯ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ.
ಈ ಎಲ್ಲಾ ಶಾಕ್‌ನಿಂದ ಹೊರಬರುವ ಮುನ್ನವೇ ಟೀಂ ಇಂಡಿಯಾಗೆ ಮತ್ತೊಂದು ಆಘಾತ ಎದುರಾಗಿದ್ದು, ತಂಡದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಸಹಾ ಕೊನೆಯ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ.
ಕಿಬ್ಬೊಟ್ಟೆ ನೋವಿನಿಂದ ಬಳಲುತ್ತಿರುವ ಬುಮ್ರಾ ಜನವರಿ 15ರಿಂದ ಬ್ರಿಸ್ಬೇನ್ ಗಾಬಾ ಮೈದಾನದಲ್ಲಿ ಆರಂಭವಾಗಲಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಕೊನೆಯ ಪಂದ್ಯದಿಂದ ಯಾರ್ಕರ್ ಸ್ಪೆಷಲಿಸ್ಟ್ ಹೊರಬಿದ್ದಿದ್ದಾರೆ.
ಸಿಡ್ನಿ ಟೆಸ್ಟ್ ಪಂದ್ಯದ ವೇಳೆ ಕ್ಷೇತ್ರರಕ್ಷಣೆ ಮಾಡುವಾಗ ಬುಮ್ರಾ ಕಿಬ್ಬೊಟ್ಟೆ ನೋವಿಗೆ ಒಳಗಾಗಿದ್ದಾರೆ. ಹೀಗಾಗಿ ಕೊನೆಯ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದು, ಇಂಗ್ಲೆಂಡ್ ವಿರುದ್ದದ ಸರಣಿ ಆರಂಭಕ್ಕೂ ಮುನ್ನ ತಂಡಕೂಡಿಕೊಳ್ಳುವ ವಿಶ್ವಾಸವಿದೆ ಎಂದು ಬಿಸಿಸಿಐ ಮೂಲಗಳು ಖಚಿತ ಪಡಿಸಿವೆ.
ಇದೀಗ ಬುಮ್ರಾ, ಶಮಿ ಹಾಗೂ ಉಮೇಶ್ ಯಾದವ್ ಅನುಪಸ್ಥಿತಿಯಲ್ಲಿ ಕೊನೆಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ನೇತೃತ್ವದಲ್ಲಿ ನವದೀಪ್ ಸೈನಿ, ಶಾರ್ದೂಲ್ ಠಾಕೂರ್ ಇಲ್ಲವೇ ಟಿ. ನಟರಾಜನ್ ವೇಗದ ದಾಳಿಯನ್ನು ನಡೆಸಬೇಕಿದೆ.
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳನ್ನು ಕ್ರಮವಾಗಿ ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳು ಗೆಲ್ಲುವ ಮೂಲಕ 1-1ರಲ್ಲಿ ಸರಣಿ ಸಮಬಲ ಸಾಧಿಸಿದೆ.
ಇನ್ನು ಸಿಡ್ನಿ ಟೆಸ್ಟ್ ಪಂದ್ಯ ಡ್ರಾ ಆಗಿದ್ದು, ಬ್ರಿಸ್ಬೇನ್ ಟೆಸ್ಟ್ ಪಂದ್ಯದಲ್ಲಿ ಗೆಲುವು ದಾಖಲಿಸಿದ ತಂಡ ಟೆಸ್ಟ್ ಸರಣಿಯನ್ನು ಕೈವಶ ಮಾಡಿಕೊಳ್ಳಲಿದೆ.