T20 World Cup: ಇಂಗ್ಲೆಂಡ್ ಎದುರಿನ ಸೆಮೀಸ್‌ಗೆ ಭಾರತ ಸಂಭಾವ್ಯ ತಂಡ..! ಡಿಕೆ/ಪಂತ್ ಯಾರಿಗೆ ಸಿಗುತ್ತೆ ಸ್ಥಾನ?
ಅಡಿಲೇಡ್(ನ.10): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಸೆಣಸಾಡಲು ಸಜ್ಜಾಗಿದ್ದು, ಈ ಹೈವೋಲ್ಟೇಜ್ ಪಂದ್ಯ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಇಂಗ್ಲೆಂಡ್ ಮಣಿಸಿ ಸೆಮೀಸ್‌ಗೇರುವ ಲೆಕ್ಕಾಚಾರದಲ್ಲಿದೆ. ಇಂಗ್ಲೆಂಡ್ ಎದುರಿನ ಮಹತ್ವದ ಸೆಮೀಸ್ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಹೀಗಿದೆ ನೋಡಿ.
1. ಕೆ ಎಲ್ ರಾಹುಲ್: ಆರಂಭಿಕ ಬ್ಯಾಟರ್ ಕೆ ಎಲ್ ರಾಹುಲ್, ಟೂರ್ನಿ ಮಹತ್ವದ ಘಟ್ಟ ತಲುಪುತ್ತಿದ್ದಂತೆಯೇ ಫಾರ್ಮ್‌ಗೆ ಮರಳುವಲ್ಲಿ ಯಶಸ್ವಿಯಾಗಿದ್ದು, ಇಂದು ಇಂಗ್ಲೆಂಡ್ ಎದುರು ಮತ್ತೊಂದು ಸ್ಪೋಟಕ ಇನಿಂಗ್ಸ್ ಆಡುವ ನಿರೀಕ್ಷೆಯಲ್ಲಿದ್ದಾರೆ.
2. ರೋಹಿತ್ ಶರ್ಮಾ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಚುಟುಕು ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ದೊಡ್ಡ ಇನಿಂಗ್ಸ್ ಆಡಲು ವಿಫಲವಾಗಿದ್ದಾರೆ. ಇದೀಗ ಮಹತ್ತರ ಪಂದ್ಯದಲ್ಲಿ ದೊಡ್ಡ ಕಟ್ಟುವ ಮೂಲಕ ತಂಡಕ್ಕೆ ಆಸರೆಯಾಗುವ ಸಾಧ್ಯತೆಯಿದೆ.
3. ವಿರಾಟ್ ಕೊಹ್ಲಿ: ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ, ಅದ್ಭುತ ಫಾರ್ಮ್‌ನಲ್ಲಿದ್ದು, ಇಂಗ್ಲೆಂಡ್ ಎದುರು ಸಿಡಿಯುವ ಸಾಧ್ಯತೆಯಿದೆ. ಅಡಿಲೇಡ್ ಓವಲ್ ವಿರಾಟ್ ಕೊಹ್ಲಿ ಪಾಲಿನ ಅದೃಷ್ಟದ ಮೈದಾನವಾಗಿದ್ದು, ತಂಡವು ಹೆಚ್ಚಾಗಿ ವಿರಾಟ್ ಅವರನ್ನು ನೆಚ್ಚಿಕೊಂಡಿದೆ.
4. ಸೂರ್ಯಕುಮಾರ್ ಯಾದವ್: ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬೆನ್ನೆಲುಬು ಎನಿಸಿಕೊಂಡಿದ್ದು, ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಳ್ಳುವ ನಿಟ್ಟಿನಲ್ಲಿ ವಿರಾಟ್ ಕೊಹ್ಲಿ ಜತೆ ಜಿದ್ದಾಜಿದ್ದಿನ ಪೈಪೋಟಿ ನಡೆಸುತ್ತಿದ್ದಾರೆ. ಸೂರ್ಯರನ್ನು ಕಟ್ಟಿಹಾಕುವುದು ಇಂಗ್ಲೆಂಡ್‌ಗೆ ಸವಾಲಾಗುವ ಸಾಧ್ಯತೆಯಿದೆ.
5. ರಿಷಭ್ ಪಂತ್: ವಿಕೆಟ್ ಕೀಪರ್ ಸ್ಥಾನಕ್ಕೆ ದಿನೇಶ್ ಕಾರ್ತಿಕ್ ಹಾಗೂ ರಿಷಭ್ ಪಂತ್ ಇಬ್ಬರ ನಡುವೆ ಸಾಕಷ್ಟು ಪೈಪೋಟಿಯಿದೆಯಾದರೂ, ಇಂಗ್ಲೆಂಡ್ ಎದುರು ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಎಡಗೈ ಬ್ಯಾಟರ್ ರಿಷಭ್ ಪಂತ್‌ಗೆ ಇಂದು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ದೊರೆಯುವ ಸಾಧ್ಯತೆಯಿದೆ.
6. ಹಾರ್ದಿಕ್ ಪಾಂಡ್ಯ: ಟೀಂ ಇಂಡಿಯಾ ತಾರಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ತಂಡಕ್ಕೆ ಆಸರೆಯಾಗುವ ಕ್ಷಮತೆ ಹೊಂದಿದ್ದಾರೆ. ಇದೀಗ ಸೆಮಿಫೈನಲ್‌ನಲ್ಲಿ ಸ್ಪೋಟಕ ಆಟವಾಡುವ ವಿಶ್ವಾಸದಲ್ಲಿದ್ದಾರೆ ಕುಂಗ್ ಫೂ ಪಾಂಡ್ಯ.
7. ಅಕ್ಷರ್ ಪಟೇಲ್: ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಚುಟುಕು ಕ್ರಿಕೆಟ್ ವಿಶ್ವಕಪ್‌ನಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದ್ದಾರೆ. ಹೀಗಿದ್ದೂ ಅಗತ್ಯ ಬಿದ್ದರೆ ಬ್ಯಾಟಿಂಗ್‌ನಲ್ಲೂ ರನ್ ಕಾಣಿಕೆ ನೀಡುವ ಸಾಮರ್ಥ್ಯವಿರುವ ಅಕ್ಷರ್ ಪಟೇಲ್‌ಗೆ ಇಂದು ಅವಕಾಶ ದೊರೆಯುವ ಸಾಧ್ಯತೆಯಿದೆ.
8. ರವಿಚಂದ್ರನ್ ಅಶ್ವಿನ್: ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಒತ್ತಡದ ಸಂದರ್ಭದಲ್ಲೂ ಸಮಚಿತ್ತದಿಂದ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು, ನಾಯಕ ರೋಹಿತ್ ಶರ್ಮಾ, ಅಶ್ವಿನ್ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
9. ಭುವನೇಶ್ವರ್ ಕುಮಾರ್: ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಇಂಗ್ಲೆಂಡ್ ವಿರುದ್ದ ಅದರಲ್ಲೂ ಜೋಸ್ ಬಟ್ಲರ್ ಎದುರು ಹೆಚ್ಚು ಯಶಸ್ಸು ಗಳಿಸಿದ್ದಾರೆ. ಹೀಗಾಗಿ ಭುವಿ ಮತ್ತೊಮ್ಮೆ ಸ್ವಿಂಗ್ ಬೌಲಿಂಗ್ ಮೂಲಕ ಮಿಂಚುವ ವಿಶ್ವಾಸದಲ್ಲಿದ್ದಾರೆ.
10. ಮೊಹಮ್ಮದ್ ಶಮಿ: ಟೀಂ ಇಂಡಿಯಾ ಅನುಭವಿ ವೇಗಿ ಶಮಿ, ತಮ್ಮ ಕರಾರುವಕ್ಕಾದ ದಾಳಿ ನಡೆಸುವ ಮೂಲಕ ಎದುರಾಳಿ ಬ್ಯಾಟರ್‌ಗಳ ನಿದ್ದೆಗೆಡಿಸುತ್ತಿದ್ದು, ಇಂದು ಇಂಗ್ಲೆಂಡ್ ಎದುರು ಮಿಂಚುಲು ತುದಿಗಾಲಿನಲ್ಲಿ ನಿಂತಿದ್ದಾರೆ.
11. ಆರ್ಶದೀಪ್ ಸಿಂಗ್: ಟೀಂ ಇಂಡಿಯಾ ಯುವ ಎಡಗೈ ವೇಗಿ ಆರ್ಶದೀಪ್ ಸಿಂಗ್ ಟೂರ್ನಿಯಲ್ಲಿ ಈಗಾಗಲೇ 10 ವಿಕೆಟ್ ಕಬಳಿಸಿ ಆತ್ಮವಿಶ್ವಾಸದಿಂದ ಬೀಗುತ್ತಿದ್ದು, ಇದೇ ಲಯ ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದ್ದಾರೆ.