ಒಂದು ವೇಳೆ ಭಾರತ ಎದುರು ಗೆದ್ದರೂ ಪಾಕಿಸ್ತಾನ ಸೂಪರ್ 8ಗೇರೋದು ಡೌಟ್..! ಇಲ್ಲಿದೆ ನೋಡಿ ಲೆಕ್ಕಾಚಾರ
ನ್ಯೂರ್ಯಾಕ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿಂದು ಕ್ರಿಕೆಟ್ ಜಗತ್ತಿನ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಇಂದು ಒಂದು ರೀತಿ ಪಾಕಿಸ್ತಾನ ತಂಡದ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಂಡಿದೆ. ಆದರೆ ಒಂದು ವೇಳೆ ಪಾಕಿಸ್ತಾನ ತಂಡವು ಇಂದು ಭಾರತ ಎದುರು ಗೆದ್ದರೂ ಸೂಪರ್ 8 ಹಂತಕ್ಕೇರೋದು ಅನುಮಾನ. ಅದು ಹೇಗೆ ಅಂತೀರಾ ಈ ಸ್ಟೋರಿ ನೋಡಿ.
ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡವು ತನ್ನ ಪಾಲಿನ ಎರಡನೇ ಪಂದ್ಯದಲ್ಲಿ ಬದ್ದ ಎದುರಾಳಿ ಟೀಂ ಇಂಡಿಯಾವನ್ನು ಎದುರಿಸಲಿದೆ. ಇಂದಿನ ಪಂದ್ಯ ಪಾಕ್ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿದೆ.
ಕಳೆದ ಗುರುವಾರ ನಡೆದ ಆತಿಥೇಯ ಯುಎಸ್‌ಎ ಎದುರು ಪಾಕಿಸ್ತಾನ ತಂಡವು ಆಘಾತಕಾರಿ ಸೋಲು ಕಾಣುವ ಮೂಲಕ ಮುಖಭಂಗ ಅನುಭವಿಸಿದೆ. ಇದೀಗ ಭಾರತದ ಎದುರು ಗೆದ್ದು ಸೂಪರ್ 8ರ ಘಟ್ಟಕ್ಕೆ ಸ್ಥಾನಗಿಟ್ಟಿಸಲು ಪಾಕ್ ಎದುರು ನೋಡುತ್ತಿದೆ.
ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಇದುವರೆಗೂ 8 ಬಾರಿ ಮುಖಾಮುಖಿಯಾಗಿದ್ದು ಭಾರತ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೇ, ಪಾಕಿಸ್ತಾನ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆಲುವಿನ ರುಚಿ ಕಂಡಿದೆ.
ಒಂದು ವೇಳೆ ಇಂದು ಭಾರತ ಎದುರು ಪಾಕಿಸ್ತಾನ ಮುಗ್ಗರಿಸಿದರೇ, ಬಹುತೇಕ ಗ್ರೂಪ್ ಹಂತದಲ್ಲೇ ಪಾಕಿಸ್ತಾನ ಹೊರಬೀಳಲಿದೆ. ಹಾಗಂತ ಒಂದು ವೇಳೆ ಭಾರತದ ಎದುರು ಪಾಕಿಸ್ತಾನ ಗೆದ್ದರೂ, ಬಾಬರ್ ಅಜಂ ಪಡೆಯ ಸೂಪರ್ 8ರ ಹಾದಿ ಗ್ಯಾರಂಟಿ ಇಲ್ಲ. ಅದು ಹೇಗೆ ನೋಡೋಣ ಬನ್ನಿ
ಭಾರತ, ಪಾಕಿಸ್ತಾನ, ಐರ್ಲೆಂಡ್, ಯುಎಸ್‌ಎ ಹಾಗೂ ಕೆನಡಾ ತಂಡಗಳು 'ಎ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಸದ್ಯ ಯುಎಸ್‌ಎ ತಂಡವು ಆಡಿದ ಎರಡು ಪಂದ್ಯ ಗೆದ್ದು 4 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಯುಎಸ್‌ಎ ತಂಡದ ನೆಟ್ ರನ್‌ರೇಟ್ +0.626 ಆಗಿದೆ.
ಇನ್ನು ಭಾರತ ಹಾಗೂ ಕೆನಡಾ ತಲಾ ಒಂದೊಂದು ಪಂದ್ಯ ಜಯಿಸಿದ್ದು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ. ಇನ್ನು ಪಾಕಿಸ್ತಾನ ಒಂದು ಪಂದ್ಯ ಸೋತಿದ್ದರೇ, ಐರ್ಲೆಂಡ್ ಪಂದ್ಯ ಸೋತು ಕ್ರಮವಾಗಿ ಅಂಕಪಟ್ಟಿಯಲ್ಲಿ 4 ಹಾಗೂ 5ನೇ ಸ್ಥಾನ ಪಡೆದಿವೆ.
ಪಾಕಿಸ್ತಾನ ತಂಡವು ಇನ್ನುಳಿದ ತನ್ನ ಪಾಲಿನ ಎಲ್ಲಾ ಪಂದ್ಯ ಜಯಿಸಿದರೂ ಸೂಪರ್ 8 ಹಂತಕ್ಕೇರುವ ಹಾದಿ ಸುಲಭವಿಲ್ಲ. ಒಂದು ವೇಳೆ ಭಾರತದ ಎದುರು ಪಾಕಿಸ್ತಾನ ಇಂದಿನ ಪಂದ್ಯ ಜಯಿಸಿದರೆ, ಭಾರತ, ಯುಎಸ್‌ಎ ಹಾಗೂ ಪಾಕಿಸ್ತಾನ ತಂಡಗಳು ತಲಾ 6 ಅಂಕ ಹೊಂದಲಿವೆ. ಆಗ ನೆಟ್ ರನ್‌ರೇಟ್ ಉತ್ತಮವಾಗಿರುವ ಎರಡು ತಂಡಗಳು ಸೂಪರ 8ಕ್ಕೆ ಎಂಟ್ರಿಕೊಡಲಿವೆ.
ಸದ್ಯ ಪಾಕಿಸ್ತಾನದ ನೆಟ್ ರನ್‌ರೇಟ್ ಯುಎಸ್‌ಎ ಹಾಗೂ ಭಾರತ ತಂಡದ ನೆಟ್ ರನ್‌ರೇಟ್‌ಗಿಂತ ಕಳಪೆಯಾಗಿದೆ. ಇಂದು ಪಾಕಿಸ್ತಾನ ಭಾರತದ ಎದುರು ಕೇವಲ ಗೆಲುವು ದಾಖಲಿಸಿದರಷ್ಟೇ ಸಾಲದು, ಬದಲಾಗಿ ಇನ್ನುಳಿದ ಎಲ್ಲಾ ಪಂದ್ಯಗಳಲ್ಲೂ ದೊಡ್ಡ ಅಂತರದ ಗೆಲುವು ಸಾಧಿಸಬೇಕಿದೆ.