T20 World Cup 2024: ಅಯ್ಯೋ.. ಭಾರತ-ಇಂಗ್ಲೆಂಡ್ ಸೆಮಿಫೈನಲ್ ಪಂದ್ಯ ನಡೆಯೋದೇ ಡೌಟ್..!
ಪ್ರಾವಿಡೆನ್ಸ್: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ನಿರ್ಣಾಯಕ ಹಂತ ತಲುಪಿದ್ದು, ಇದೀಗ ಸೆಮಿಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಹೀಗಿರುವಾಗಲೇ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ನಿರಾಸೆಯ ಸುದ್ದಿಯೊಂದು ಹೊರಬಿದ್ದಿದ್ದು, ಸೆಮಿಫೈನಲ್ ಪಂದ್ಯ ನಡೆಯೋದೇ ಡೌಟ್ ಎನಿಸಿದೆ. ಯಾಕೆ ಹೀಗೆ? ಏನಾಯ್ತು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇದೀಗ ಪ್ರಶಸ್ತಿ ರೇಸ್‌ನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್, ಭಾರತ, ದಕ್ಷಿಣ ಆಫ್ರಿಕಾ ಹಾಗೂ ಆಫ್ಘಾನಿಸ್ತಾನ ತಂಡಗಳು ಸೆಮಿಫೈನಲ್ ಕಾದಾಟಕ್ಕೆ ಸಜ್ಜಾಗಿವೆ.
20 ತಂಡಗಳು ಪಾಲ್ಗೊಂಡಿದ್ದ ಈ ಟೂರ್ನಿಯಲ್ಲೀಗ 4 ತಂಡಗಳು ಉಳಿದುಕೊಂಡಿವೆ. ಮೊದಲ ಸೆಮಿಫೈನಲ್‌ನಲ್ಲಿ ಆಫ್ಘಾನಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಕಾದಾಡಿದರೆ, ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಫೈನಲ್ ಟಿಕೆಟ್‌ಗೆ ಹೋರಾಡಲಿವೆ.
ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಜೂನ್ 27ರ ಸಂಜೆ ನಡೆಯಲಿರುವ ಹೈವೋಲ್ಟೇಜ್ ಪಂದ್ಯ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದರು. ಆದರೆ ಇದೀಗ ಅಭಿಮಾನಿಗಳಿಗೆ ನಿರಾಸೆಯಾಗುವ ಸುದ್ದಿಯೊಂದು ಹೊರಬಿದ್ದಿದೆ
ಹೌದು, ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದ್ದು, ಪಂದ್ಯ ನಡೆಯುವುದೇ ಅನುಮಾನ ಎನಿಸಿದೆ. ಆದರೆ ಒಂದು ವೇಳೆ ಪಂದ್ಯ ರದ್ದಾದರೆ ಭಾರತ ಫೈನಲ್ ಪ್ರವೇಶಿಸಲಿದೆ.
ಗುರುವಾರ ಗಯಾನದ ಪ್ರಾವಿಡೆನ್ಸ್‌ನಲ್ಲಿ ಮಳೆಯಾಗುವ ಸಾಧ್ಯತೆ ಶೇ.88ರಷ್ಟಿದ್ದು, ಗುಡುಗು ಸಹಿತ ಭಾರಿ ಮಳೆಯೂ ಸುರಿಯಬಹುದು ಎಂದು ಸ್ಥಳೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಪಂದ್ಯ ಮಳೆಗೆ ಬಲಿಯಾದರೂ ಅಚ್ಚರಿಯಿಲ್ಲ ಎಂದು ಹೇಳಲಾಗುತ್ತಿದೆ.
2ನೇ ಸೆಮಿಫೈನಲ್‌ಗೆ ಮೀಸಲು ದಿನ ನಿಗದಿಯಾಗಿಲ್ಲ. ಇದು ಬೆಳಗ್ಗಿನ ಪಂದ್ಯವಾಗಿರುವ ಕಾರಣ, ಪಂದ್ಯ ಮುಕ್ತಾಯಗೊಳಿಸಲು ಹೆಚ್ಚೂವರಿ 250 ನಿಮಿಷಗಳ ಕಾಲಾವಕಾಶವನ್ನು ಐಸಿಸಿ ಒದಗಿಸಲಿದೆ.
ಒಂದು ವೇಳೆ ಫಲಿತಾಂಶ ಸಾಧ್ಯವಾಗದೆ ಇದ್ದರೆ, ಸೂಪರ್-8 ಹಂತದ ಗುಂಪು-1ರಲ್ಲಿ ಅಗ್ರಸ್ಥಾನ ಪಡೆದ ಭಾರತ ಫೈನಲ್‌ಗೇರಲಿದೆ. ಗುಂಪು-2ರಲ್ಲಿದ್ದ ಇಂಗ್ಲೆಂಡ್ 2ನೇ ಸ್ಥಾನಿಯಾಗಿ ಸೆಮಿಫೈನಲ್ ಪ್ರವೇಶಿಸಿದೆ.
ತಲಾ 10 ಓವರ್ ಕಡ್ಡಾಯ: ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಲ್ಲಿ ಫಲಿತಾಂಶ ಹೊರಬೀಳಬೇಕಿದ್ದರೆ ಎರಡೂ ಇನ್ನಿಂಗ್ಸ್‌ಗಳಲ್ಲಿ ಕನಿಷ್ಠ 10 ಓವರ್ ಆಟ ನಡೆಯಲೇಬೇಕು.
ಗುಂಪು ಹಂತ, ಸೂಪರ್-8 ಹಂತದ ಪಂದ್ಯಗಳಲ್ಲಿ ಕನಿಷ್ಠ 5 ಓವರ್ ನಡೆದಿದ್ದರೆ ಸಾಕಾಗಿತ್ತು. ಆದರೆ ಸೆಮೀಸ್, ಫೈನಲ್ ಪಂದ್ಯಕ್ಕೆ ಐಸಿಸಿ ಪ್ರತ್ಯೇಕ ನಿಯಮ ರೂಪಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.