- Home
- Sports
- Cricket
- ವಿಶ್ವಕಪ್ ಫೈನಲ್‌ಗೂ ಮುನ್ನ ಹರ್ಮನ್‌ಪ್ರೀತ್‌ಗೆ ತೆಂಡೂಲ್ಕರ್ ಕಿವಿ ಮಾತು, ಸಚಿನ್ ಫೋನ್ ಕಾಲ್ ಗುಟ್ಟು ಬಿಚ್ಚಿಟ್ಟ ಕೌರ್!
ವಿಶ್ವಕಪ್ ಫೈನಲ್‌ಗೂ ಮುನ್ನ ಹರ್ಮನ್‌ಪ್ರೀತ್‌ಗೆ ತೆಂಡೂಲ್ಕರ್ ಕಿವಿ ಮಾತು, ಸಚಿನ್ ಫೋನ್ ಕಾಲ್ ಗುಟ್ಟು ಬಿಚ್ಚಿಟ್ಟ ಕೌರ್!
ಬೆಂಗಳೂರು: 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಟೀಂ ಇಂಡಿಯಾ, ಚಾಂಪಿಯನ್ ಆಗಿ ಹೊರಹೊಮ್ಮಿದೆ. ದಕ್ಷಿಣ ಆಫ್ರಿಕಾ ಎದುರಿನ ಫೈನಲ್ ಪಂದ್ಯಕ್ಕೂ ಒಂದು ದಿನ ಮೊದಲು ಸಚಿನ್ ತೆಂಡೂಲ್ಕರ್, ಹರ್ಮನ್‌ಗೆ ಕಾಲ್ ಮಾಡಿ ಹೇಳಿದ್ದೇನು?

ಚೊಚ್ಚಲ ಐಸಿಸಿ ಟ್ರೋಫಿ ಗೆದ್ದ ಭಾರತ
ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು, 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದು ಭಾರತ ಮಹಿಳಾ ಕ್ರಿಕೆಟ್ ತಂಡವು ಜಯಿಸಿದ ಚೊಚ್ಚಲ ಐಸಿಸಿ ಟ್ರೋಫಿ ಎನಿಸಿಕೊಂಡಿದೆ.
ಎರಡು ಬಾರಿ ಫೈನಲ್‌ನಲ್ಲಿ ಮುಗ್ಗರಿಸಿದ್ದ ಭಾರತ
ಈ ಹಿಂದೆ ಎರಡು ಬಾರಿ ಭಾರತ ಮಹಿಳಾ ತಂಡವು ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿ ಮುಗ್ಗರಿಸಿತ್ತು. ಅದರಲ್ಲೂ 2017ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡವು ಇಂಗ್ಲೆಂಡ್ ಎದುರು ಕೂದಲೆಳೆ ಅಂತರದಲ್ಲಿ ವಿಶ್ವಕಪ್ ಗೆಲ್ಲುವ ಅವಕಾಶ ಕೈಚೆಲ್ಲಿ, ನಿರಾಸೆ ಅನುಭವಿಸಿತ್ತು.
ದಕ್ಷಿಣ ಆಫ್ರಿಕಾ ಎದುರು ಫೈನಲ್‌ನಲ್ಲಿ ಭರ್ಜರಿ ಜಯ
ಆದರೆ 2025ರ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಈ ಹಿಂದೆ ಮಾಡಿದ ತಪ್ಪು ಮರುಕಳಿಸಲು 36 ವರ್ಷದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವಕಾಶ ಕೊಡಲಿಲ್ಲ. ದಕ್ಷಿಣ ಆಫ್ರಿಕಾ ಎದುರು ಭಾರತ 52 ರನ್ ಅಂತರದಲ್ಲಿ ಗೆದ್ದು ಚೊಚ್ಚಲ ಐಸಿಸಿ ಟ್ರೋಫಿ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
ಸಚಿನ್ ಕಿವಿಮಾತು
ಇನ್ನು ಈ ಕುರಿತಂತೆ ಮಾತನಾಡಿರುವ ನಾಯಕಿ ಹರ್ಮನ್‌ಪ್ರೀತ್ ಕೌರ್, ವಿಶ್ವಕಪ್ ಫೈನಲ್ ಪಂದ್ಯಕ್ಕೂ ಹಿಂದಿನ ದಿನ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ತಮಗೆ ಕಾಲ್ ಮಾಡಿ ಕಿವಿಮಾತು ಹೇಳಿದ ಘಟನೆಯನ್ನು ಮೆಲುಕು ಹಾಕಿದ್ದಾರೆ.
ಸಚಿನ್ ಕಿವಿಮಾತು ಸ್ಮರಿಸಿದ ಹರ್ಮನ್‌ಪ್ರೀತ್ ಕೌರ್
'ವಿಶ್ವಕಪ್ ಫೈನಲ್‌ಗೂ ಹಿಂದಿನ ರಾತ್ರಿ ಸಚಿನ್ ಸರ್ ತಮಗೆ ಕಾಲ್ ಮಾಡಿದ್ದರು. ಅವರು ತಮ್ಮ ವಿಶ್ವಕಪ್ ಅನುಭವವನ್ನು ಹಂಚಿಕೊಂಡರು. ಇದರ ಜತೆಗೆ ಸಮತೋಲಿತವಾಗಿರುವಂತೆ ಕಿವಿ ಮಾತು ಹೇಳಿದರು. ಪಂದ್ಯ ಚುರುಕಾಗಿ ಸಾಗುತ್ತಿದ್ದರೇ ಅದನ್ನು ಕೊಂಚ ನಿಧಾನವಾಗಿ ಸಾಗುವಂತೆ ನೋಡಿಕೊಳ್ಳಿ ಎಂದು ಸಚಿನ್ ಹೇಳಿದ್ರು ಎಂದು ಹರ್ಮನ್‌ಪ್ರೀತ್ ಕೌರ್ ಹೇಳಿದ್ದಾರೆ.
ಸಚಿನ್ ತೆಂಡೂಲ್ಕರ್ ಕಿವಿಮಾತು
ಸಾಧ್ಯವಾದಷ್ಟು ಪಂದ್ಯವನ್ನು ಕಂಟ್ರೋಲ್ ಮಾಡಿ. ಯಾಕೆಂದ್ರೆ ತುಂಬಾ ಚುರುಕಾಗಿ ಪಂದ್ಯ ಸಾಗಿದ್ರೆ, ನೀವು ಮುಗ್ಗರಿಸುವ ಸಾಧ್ಯತೆ ಇರುತ್ತದೆ. ಅದನ್ನು ನಾವು ತಪ್ಪಿಸಬೇಕು. ಹೀಗಾಗಿ ಪಂದ್ಯವನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ತಾಳ್ಮೆಯಿಂದ ಕೊನೆಯವರೆಗೂ ಮುನ್ನುಗ್ಗಿ ಎಂದು ಮಾಸ್ಟರ್ ಬ್ಲಾಸ್ಟರ್ ಕಿವಿಮಾತು ಹೇಳಿದ್ರು ಎಂದಿದ್ದಾರೆ ಹರ್ಮನ್.
ವಿಶ್ವಕಪ್ ಗೆದ್ದಿದ್ದು ವಿಶೇಷ ಅನುಭವ
ದಕ್ಷಿಣ ಆಫ್ರಿಕಾದ ಕೊನೆಯ ವಿಕೆಟ್ ಬಿದ್ದಾಗ ದಶಕಗಳ ಕನಸು ನನಸಾದಂತೆ ಆಯಿತು. ನಾವು ವಿಶ್ವಕಪ್ ಗೆದ್ದೆವು ಎನ್ನುವುದನ್ನು ನಂಬಲೂ ಈಗಲೂ ಸಾಧ್ಯವಾಗುತ್ತಿಲ್ಲ. ಅದೊಂದು ವಿಶೇಷವಾದ ಅನುಭವ ಎಂದು ಹರ್ಮನ್‌ಪ್ರೀತ್ ಕೌರ್ ಹೇಳಿದ್ದಾರೆ.
ಭಾರತಕ್ಕಾಗಿ ಆಡುವ ಕನಸು ಕಂಡಿದ್ದ ಹರ್ಮನ್
ನನ್ನ ತಂದೆ-ತಾಯಿ ಕೂಡಾ ಸ್ಟೇಡಿಯಂನಲ್ಲಿದ್ದರು. ಅವರ ಎದುರು ವಿಶ್ವಕಪ್ ಎತ್ತಿಹಿಡಿದದ್ದು ನನ್ನ ಪಾಲಿಗೆ ತುಂಬಾ ವಿಶೇಷವಾದ ಕ್ಷಣ. ನಾನು ಚಿಕ್ಕವಳಾಗಿದ್ದಾಗಿನಿಂದಲೂ ಭಾರತಕ್ಕಾಗಿ ಆಡಬೇಕು, ಭಾರತವನ್ನು ಮುನ್ನಡೆಸಬೇಕು, ವಿಶ್ವಕಪ್ ಗೆಲ್ಲಬೇಕು ಅಂದುಕೊಂಡಿದ್ದೆ. ಅದು ಈಗ ಸಾಧ್ಯವಾಗಿದೆ ಎಂದು ಹರ್ಮನ್‌ಪ್ರೀತ್ ಕೌರ್ ಹೇಳಿದ್ದಾರೆ.