ಯಾರಾಗಲಿದ್ದಾರೆ ಟೀಂ ಇಂಡಿಯಾ ಮುಂದಿನ ಟಿ20 ಕ್ಯಾಪ್ಟನ್..?
ದುಬೈ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ, ಉಪ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಚರ್ಚಿಸಿ, ಅವರ ಸಲಹೆ ಪಡೆದು ಟಿ20 ನಾಯಕ ಸ್ಥಾನದಿಂದ ಕೆಳಗಿಳಿಯುವ ಬಗ್ಗೆ ತೀರ್ಮಾನ ಕೈಗೊಂಡಿದ್ದೇನೆ ಎಂದು ವಿರಾಟ್ ಹೇಳಿದ್ದಾರೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಶಾಗೂ ತಮ್ಮ ನಿರ್ಧಾರ ತಿಳಿಸಿರುವುದಾಗಿ ತಿಳಿಸಿದ್ದಾರೆ. ಟೀಂ ಇಂಡಿಯಾ ಮೂವರು ಆಟಗಾರರ ನಡುವೆ ಟಿ20 ನಾಯಕತ್ವಕ್ಕೆ ಸ್ಪರ್ಧೆಯಿದೆ ಎನ್ನಲಾಗುತ್ತಿದೆ. ಇದೀಗ ಟೀಂ ಇಂಡಿಯಾ ಮುಂದಿನ ಟಿ20 ನಾಯಕ ಯಾರಾಗಬಹುದು ಎನ್ನುವ ಚರ್ಚೆಯೂ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಜೋರಾಗಿದೆ.
ವಿರಾಟ್ ಕೊಹ್ಲಿ ನಾಯಕತ್ವ ಸ್ಥಾನದಿಂದ ನಿರ್ಗಮಿಸುತ್ತಿದ್ದಂತೆ ಆ ಸ್ಥಾನಕ್ಕೆ ಸೀಮಿತ ಓವರ್‌ಗಳ ತಂಡದ ಉಪನಾಯಕ ರೋಹಿತ್ ಶರ್ಮಾರನ್ನು ಆಯ್ಕೆ ಮಾಡುವುದು ಬಹುತೇಕ ಖಚಿತವಾಗಿದ್ದು, ಈ ಕುರಿತು ಬಿಸಿಸಿಐನ ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ.
ನಾಯಕನ ಅನುಪಸ್ಥಿತಿಯಲ್ಲಿ ಹಲವು ಬಾರಿ ರೋಹಿತ್ ತಂಡವನ್ನು ಯಶಸ್ವಿಯಾಗಿ ಮುಂದುವರೆಸಿದ್ದಾರೆ. ಜತೆಗೆ ಟಿ20ಯಲ್ಲೂ ರೋಹಿತ್ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. 19 ಪಂದ್ಯಗಳಲ್ಲಿ ಭಾರತವನ್ನು ರೋಹಿತ್ ಮುನ್ನಡೆಸಿದ್ದು, 15ರಲ್ಲಿ ಗೆಲುವು ದಾಖಲಿಸಿದೆ.
ಚುಟುಕು ಕ್ರಿಕೆಟ್‌ನಲ್ಲೂ ರೋಹಿತ್ ಮಿಂಚು ಹರಿಸಿದ್ದು, 4 ಶತಕ ಸಿಡಿಸಿದ್ದಾರೆ. ಇದರಲ್ಲಿ 2 ಶತಕ ನಾಯಕನಾಗಿಯೇ ಇದ್ದಾಗ ರೋಹಿತ್ ಸಿಡಿಸಿದ್ದಾರೆ. ಜೊತೆಗೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಐಪಿಎಲ್ ಟೂರ್ನಿಯಲ್ಲಿ 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಒಂದೊಮ್ಮೆ ರೋಹಿತ್ ಶರ್ಮಾ ಟಿ20 ತಂಡದ ನಾಯಕನಾಗಿ ಆಯ್ಕೆಯಾದರೆ, ಕನ್ನಡಿಗ ಕೆ.ಎಲ್.ರಾಹುಲ್‌ಗೆ ಉಪನಾಯಕ ಸ್ಥಾನ ಒಲಿಯುವ ಸಾಧ್ಯತೆ ದಟ್ಟವಾಗಿದೆ. ಸದ್ಯ ಚುಟುಕು ಕ್ರಿಕೆಟ್‌ನಲ್ಲಿ ರಾಹುಲ್ ಉತ್ತಮ ಫಾರ್ಮ್ ಕಾಯ್ದುಕೊಂಡಿದ್ದಾರೆ. ಜತೆಗೆ ಐಪಿಎಲ್‌ನಲ್ಲಿ ನಾಯಕನಾಗಿ ರಾಹುಲ್ ಗಮನಾರ್ಹ ಪ್ರದರ್ಶನ ನೀಡಿದ್ದಾರೆ.
ಇನ್ನೊಂದು ಮೂಲಗಳ ಪ್ರಕಾರ ಭವಿಷ್ಯದ ದೃಷ್ಠಿಯನ್ನು ಗಮನದಲ್ಲಿಟ್ಟುಕೊಂಡು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಇಲ್ಲವೇ ಕನ್ನಡಿಗ ಕೆ.ಎಲ್. ರಾಹುಲ್‌ಗೆ ಟಿ20 ನಾಯಕತ್ವ ಪಟ್ಟ ಒಲಿದರೂ ಅಚ್ಚರಿಪಡುವಂತಿಲ್ಲ ಎನ್ನಲಾಗುತ್ತಿದೆ.
ಐಪಿಎಲ್‌ನಲ್ಲಿ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಇನ್ನೊಂದೆಡೆ ಕೆ.ಎಲ್. ರಾಹುಲ್ ಕಳೆದ ಕೆಲ ವರ್ಷಗಳಿಂದ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದಾರೆ.