ಏಕದಿನ ವಿಶ್ವಕಪ್‌ಗೆ ಈ ನಾಲ್ವರ ಪೈಕಿ ಯಾರಾಗಲಿದ್ದಾರೆ ಟೀಂ ಇಂಡಿಯಾ ವಿಕೆಟ್ ಕೀಪರ್?
ಬೆಂಗಳೂರು: ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಕಳೆದೊಂದ ದಶಕದಿಂದ ಪ್ರಶಸ್ತಿ ಬರ ಅನುಭವಿಸುತ್ತಾ ಬಂದಿರುವ ಟೀಂ ಇಂಡಿಯಾ, ಶತಾಯಗತಾಯ ಈ ಬಾರಿ ವಿಶ್ವಕಪ್ ಗೆಲ್ಲಲು ಎದುರು ನೋಡುತ್ತಿದೆ. ಹೀಗಿರುವಾಗಲೇ ಟೀಂ ಇಂಡಿಯಾ ವಿಕೆಟ್ ಕೀಪರ್ ಯಾರಾಗಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ.
ವಿಶ್ವಕಪ್‌ಗೆ ಸಜ್ಜಾಗುತ್ತಿದೆ ಟೀಂ ಇಂಡಿಯಾ
ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಸದ್ಯ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದು, ಮುಂಬರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಈ ಸರಣಿಯನ್ನು ಅಭ್ಯಾಸಕ್ಕಾಗಿ ಬಳಸಿಕೊಳ್ಳುತ್ತಿದೆ.
ವಿಶ್ವಕಪ್‌ಗೆ ವಿಕೆಟ್ ಕೀಪರ್ ಯಾರು?
ವಿಶ್ವಕಪ್‌ಗೆ ಸಜ್ಜಾಗುತ್ತಿರುವ ಹೊತ್ತಿನಲ್ಲೇ ಟೀಂ ಇಂಡಿಯಾಗೆ ಇದೀಗ ದೊಡ್ಡ ತಲೆನೋವು ಶುರುವಾಗಿದ್ದು, ಪ್ರತಿಷ್ಠಿತ ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ವಿಕೆಟ್ ಕೀಪರ್ ಯಾರಾಗಬೇಕು ಎನ್ನುವ ಗೊಂದಲ ಆರಂಭವಾಗಿದೆ.
ಗಾಯದ ತಲೆಬಿಸಿ..!
ಸದ್ಯ ಭಾರತ ತಂಡದಲ್ಲಿ ನಾಲ್ವರು ಕ್ರಿಕೆಟಿಗರು ವಿಕೆಟ್ ಕೀಪರ್ ಬ್ಯಾಟರ್‌ಗಳಿದ್ದಾರೆ. ಆದರೆ ಈ ಪೈಕಿ ಇಬ್ಬರು ಆಟಗಾರರು ಗಾಯದ ಸಮಸ್ಯೆ ಎದುರಿಸುತ್ತಿದ್ದರೆ, ಇನ್ನಿಬ್ಬರು ಕ್ರಿಕೆಟಿಗರು ತಂಡದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಪರದಾಡುತ್ತಿದ್ದಾರೆ.
ಹೀಗಾಗಿ ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಯಾರಾಗಬಹುದು ಎನ್ನುವ ಚರ್ಚೆ ದಿನದಂದ ದಿನಕ್ಕೆ ಕುತೂಹಲ ಕೆರಳಿಸುವಂತೆ ಮಾಡಿದೆ. ಈ ಸಂದರ್ಭದಲ್ಲಿ ವಿಶ್ವಕಪ್ ಟೂರ್ನಿಗೆ ಭಾರತದ ಮೊದಲ ಆಯ್ಕೆಯ ವಿಕೆಟ್ ಕೀಪರ್ ಯಾರಾಗಬಹುದು ಎನ್ನುವುದನ್ನು ನೋಡೋಣ ಬನ್ನಿ.
1. ರಿಷಭ್ ಪಂತ್
ಕಳೆದ ವರ್ಷದ ಕೊನೆಯಲ್ಲಿ ರಸ್ತೆ ಅಫಘಾತಕ್ಕೊಳಗಾಗಿದ್ದ ರಿಷಭ್ ಪಂತ್, ಎಲ್ಲರೂ ಅಚ್ಚರಿ ಪಡುವ ರೀತಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಅಕ್ಟೋಬರ್ 05ರಿಂದ ಆರಂಭವಾಗಲಿರುವ ವಿಶ್ವಕಪ್ ಟೂರ್ನಿಯ ವೇಳೆಗೆ ಸಂಪೂರ್ಣ ಫಿಟ್ ಆಗಿರಲಿದ್ದಾರೆಯೇ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಒಂದು ವೇಳೆ ಪಂತ್ ಫಿಟ್ ಆಗಿದ್ದರೂ ನೇರವಾಗಿ 2023ರ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡದೊಳಗೆ ಮಣೆಹಾಕುವುದು ಅನುಮಾನ ಎನಿಸಿದೆ.
2. ಕೆ ಎಲ್ ರಾಹುಲ್
ತೊಡೆಸಂದು ನೋವಿಗೊಳಗಾಗಿ ಐಪಿಎಲ್‌ನ ಅರ್ಧಭಾಗ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಿಂದ ಹೊರಬಿದ್ದಿರುವ ಕೆ ಎಲ್ ರಾಹುಲ್, ಇದೀಗ ಚೇತರಿಸಿಕೊಳ್ಳುತ್ತಿದ್ದು, ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದಾರೆ. ಕೆ ಎಲ್ ರಾಹುಲ್, ವಿಶ್ವಕಪ್‌ಗೆ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗುವ ಸಾಧ್ಯತೆಯಿದೆ.
3. ಸಂಜು ಸ್ಯಾಮ್ಸನ್:
ಕೇರಳ ಮೂಲದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್, ಏಕದಿನ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ತೋರಿದ್ದಾರೆ. ಹೀಗಿದ್ದೂ ಸೂಕ್ತ ಅವಕಾಶ ಅವರಿಗೆ ಸಿಗುತ್ತಿಲ್ಲ. ಮುಂಬರುವ ದಿನಗಳಲ್ಲಿ ಸಂಜು ಮತ್ತಷ್ಟು ಉತ್ತಮ ಪ್ರದರ್ಶನ ತೋರಿದರೆ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಸ್ಥಾನ ಪಡೆಯಬಹುದು.
4. ಇಶಾನ್ ಕಿಶನ್:
ವೆಸ್ಟ್ ಇಂಡೀಸ್ ಎದುರಿನ ಸರಣಿಯಲ್ಲಿ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಇಶಾನ್ ಕಿಶನ್ ದಿಟ್ಟ ಹೆಜ್ಜೆಯಿಟ್ಟಿದ್ದಾರೆ. ಅಗ್ರಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸುವುದರ ಜತೆಗೆ ಚತುರ ವಿಕೆಟ್ ಕೀಪರ್ ಆಗಿಯೂ ಸೈ ಎನಿಸಿಕೊಂಡಿರುವ ಇಶಾನ್ ಕಿಶನ್, ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದರೂ ಅಚ್ಚರಿಯಿಲ್ಲ.