- Home
- Sports
- Cricket
- ICC Women's T20 World Cup: ಆಸೀಸ್ ಎದುರಿನ ಸೆಮೀಸ್‌ಗೂ ಮುನ್ನ ಹರ್ಮನ್‌ಪ್ರೀತ್ ಕೌರ್ ಪಡೆಗೆ ಶಾಕ್..!
ICC Women's T20 World Cup: ಆಸೀಸ್ ಎದುರಿನ ಸೆಮೀಸ್‌ಗೂ ಮುನ್ನ ಹರ್ಮನ್‌ಪ್ರೀತ್ ಕೌರ್ ಪಡೆಗೆ ಶಾಕ್..!
ಕೇಪ್‌ಟೌನ್(ಫೆ.23): ಬಹುನಿರೀಕ್ಷಿತ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗಲೇ, ಭಾರತ ಕ್ರಿಕೆಟ್ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಮೊದಲ ಸೆಮಿಫೈನಲ್‌ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಣಸಾಡಲಿವೆ. ಈ ಪಂದ್ಯಕ್ಕೂ ಮುನ್ನ ಸ್ಟಾರ್ ಆಲ್ರೌಂಡರ್ ಸೆಮೀಸ್‌ನಿಂದ ಹೊರಬಿದ್ದಿದ್ದು, ಸ್ವತಃ ನಾಯಕಿ ಲಭ್ಯತೆಯ ಬಗ್ಗೆ ಅನುಮಾನ ಮೂಡಲಾರಂಭಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ.

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿನ ಮೊದಲ ಸೆಮಿಫೈನಲ್‌ನಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಹಾಗೂ ಬಲಿಷ್ಠ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ.
ಒಂದು ಕಡೆ ಸತತ 4 ಪಂದ್ಯಗಳನ್ನು ಗೆದ್ದು, ಅಜೇಯವಾಗಿಯೇ ಆಸ್ಟ್ರೇಲಿಯಾ ತಂಡವು ಅಂತಿಮ ನಾಲ್ಕರಘಟ್ಟ ಪ್ರವೇಶಿಸಿದೆ. ಇನ್ನೊಂದೆಡೆ ಭಾರತ ತಂಡವು ಆಡಿದ 4 ಪಂದ್ಯಗಳ ಪೈಕಿ 3 ಗೆಲುವು ಹಾಗೂ ಒಂದು ಸೋಲು ಕಂಡು ಸೆಮೀಸ್‌ಗೆ ಲಗ್ಗೆಯಿಟ್ಟಿದೆ.
ಸತತ ಎರಡನೇ ಬಾರಿಗೆ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಫೈನಲ್‌ಗೇರುವ ಕನವರಿಕೆಯಲ್ಲಿರುವ ಭಾರತ ತಂಡಕ್ಕೆ ದೊಡ್ಡ ಶಾಕ್ ಎದುರಾಗಿದ್ದು, ತಂಡದ ಸ್ಟಾರ್ ಆಲ್ರೌಂಡರ್ ಪೂಜಾ ವಸ್ತ್ರಾಕರ್, ಗಂಟಲು ನೋವಿನ ಸಮಸ್ಯೆಯಿಂದಾಗಿ ಸೆಮಿಫೈನಲ್‌ನಿಂದ ಹೊರಬಿದ್ದಿದ್ದಾರೆ.
ಹೀಗಾಗಿ ಪೂಜಾ ವಸ್ತ್ರಾಕರ್ ಬದಲಿಗೆ, ಮೀಸಲು ಆಟಗಾರ್ತಿಯಾಗಿ ತಂಡದಲ್ಲಿ ಸ್ಥಾನ ಪಡೆದಿದ್ದ ಸ್ನೆಹ್ ರಾಣಾ ಅವರು ಬದಲಿ ಆಟಗಾರ್ತಿಯಾಗಿ ಭಾರತ ತಂಡವನ್ನು ಕೂಡಿಕೊಂಡಿದ್ದಾರೆ.
ಕಳೆದ ಸೋಮವಾರದಿಂದ ಪೂಜಾ ವಸ್ತ್ರಾಕರ್ ಹಾಗೂ ಹರ್ಮನ್‌ಪ್ರೀತ್ ಕೌರ್ ಅನಾರೋಗ್ಯದಿಂದ ಬಳಲುತ್ತಿದ್ದು, ಬುಧವಾರ ಸಂಜೆ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಂಡಿದ್ದರು. ಅವರಿಬ್ಬರ ಅನಾರೋಗ್ಯದ ಪ್ರಮಾಣ ಯಾವ ಮಟ್ಟದಲ್ಲಿದೆ ಎನ್ನುವುದು ಇನ್ನಷ್ಟೇ ಬಹಿರಂಗವಾಗಬೇಕಿದೆ.
ಇನ್ನು ನಾಯಕಿ ಹರ್ಮನ್‌ಪ್ರೀತ್ ಕೌರ್, ಆರೋಗ್ಯದ ಬಗ್ಗೆ ಬಿಸಿಸಿಐ ವೈದ್ಯಕೀಯ ಸಿಬ್ಬಂದಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದು, ಮಹತ್ವದ ಸೆಮಿಫೈನಲ್ ಪಂದ್ಯದಲ್ಲಿ ಕೌರ್, ಕಣಕ್ಕಿಳಿಯುತ್ತಾರೆಯೇ ಅಥವಾ ಇಲ್ಲವೇ ಎನ್ನುವುದು ಇನ್ನಷ್ಟೇ ಬಹಿರಂಗವಾಗಬೇಕಿದೆ.
ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹರ್ಮನ್‌ಪ್ರೀತ್ ಕೌರ್ ಅವರ ಪ್ರದರ್ಶನ ಅಷ್ಟೇನು ತೃಪ್ತಿಕರವಾಗಿಲ್ಲ. ಆಡಿದ 4 ಪಂದ್ಯಗಳಿಂದ ಕೌರ್ ಕೇವಲ 66 ರನ್‌ಗಳನ್ನಷ್ಟೇ ಬಾರಿಸಿದ್ದಾರೆ. ಆದರೆ ಆಸ್ಟ್ರೇಲಿಯಾ ಎದುರು ಹರ್ಮನ್‌ಪ್ರೀತ್ ಕೌರ್ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ.
ಒಂದು ವೇಳೆ ಹರ್ಮನ್‌ಪ್ರೀತ್ ಕೌರ್, ಆಡುವ ಹನ್ನೊಂದರ ಬಳಗದಿಂದ ಹೊರಬಿದ್ದರೇ, ಮತ್ತೋರ್ವ ಆಲ್ರೌಂಡರ್ ಹರ್ಲೀನ್ ಡಿಯೋಲ್, ಭಾರತ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.