- Home
- Sports
- Cricket
- ಪಥುಮ್ ನಿಸ್ಸಾಂಕ ಶತಕ: ಒಂದೇ ಇನ್ನಿಂಗ್ಸ್‌ನಲ್ಲಿ ಅಪರೂಪದ ದಾಖಲೆ ಪುಡಿಪುಡಿ, ಲಂಕಾ ಸೂಪರ್-8ಗೆ ಎಂಟ್ರಿ!
ಪಥುಮ್ ನಿಸ್ಸಾಂಕ ಶತಕ: ಒಂದೇ ಇನ್ನಿಂಗ್ಸ್‌ನಲ್ಲಿ ಅಪರೂಪದ ದಾಖಲೆ ಪುಡಿಪುಡಿ, ಲಂಕಾ ಸೂಪರ್-8ಗೆ ಎಂಟ್ರಿ!
2026ರ ಟಿ20 ವಿಶ್ವಕಪ್‌ನಲ್ಲಿ ಪಥುಮ್ ನಿಸ್ಸಾಂಕ ಚೊಚ್ಚಲ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಶ್ರೀಲಂಕಾ, ಸೂಪರ್-8 ಹಂತಕ್ಕೆ ಲಗ್ಗೆ ಇಟ್ಟಿದೆ.

ಆಸೀಸ್ ಎದುರು ಶ್ರೀಲಂಕಾ ಭರ್ಜರಿ ಜಯಭೇರಿ, ಸೂಪರ್-8ಗೆ ಲಗ್ಗೆ
2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸತತ ಮೂರು ಪಂದ್ಯಗಳನ್ನು ಗೆದ್ದ ಆತಿಥೇಯ ಶ್ರೀಲಂಕಾ ತಂಡವು ಅಧಿಕೃತವಾಗಿ ಸೂಪರ್-8 ಹಂತ ಪ್ರವೇಶಿಸಿವೆ. ಇನ್ನು ಆಸೀಸ್ ತಂಡವು ಇದೀಗ ಗ್ರೂಪ್ ಹಂತದಲ್ಲೇ ಹೊರಬೀಳುವ ಭೀತಿಗೆ ಸಿಲುಕಿದೆ.
ನಿಸ್ಸಾಂಕ ಗೆಲುವಿನ ರೂವಾರಿ
ಆಸ್ಟ್ರೇಲಿಯಾ ನೀಡಿದ್ದ 182 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಶ್ರೀಲಂಕಾ ಎರಡು ಓವರ್ ಬಾಕಿ ಇರುವಂತೆಯೇ 8 ವಿಕೆಟ್ ಭರ್ಜರಿ ಜಯ ಸಾಧಿಸಿತು. ಆರಂಭಿಕ ಬ್ಯಾಟರ್ ಪಥುಮ್ ನಿಸ್ಸಾಂಕ ಶತಕ ಸಿಡಿಸಿ ಲಂಕಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ನಿಸ್ಸಾಂಕ 52 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ ಅಜೇಯ 100 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಪಥುಮ್ ನಿಸ್ಸಾಂಕ ಅಪರೂಪದ ದಾಖಲೆ
ನಿಸ್ಸಾಂಕ ತಮ್ಮ ಈ ಇನ್ನಿಂಗ್ಸ್‌ನಲ್ಲಿ ಹಲವು ದಾಖಲೆಗಳನ್ನು ಪುಡಿಮಾಡಿದರು. ಟಿ20 ವಿಶ್ವಕಪ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ವಿರುದ್ಧ ಶತಕ ಸಿಡಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. ಇದಕ್ಕೂ ಮುನ್ನ 2014ರಲ್ಲಿ ಉಮರ್ ಅಕ್ಮಲ್ ಗಳಿಸಿದ್ದ 94 ರನ್‌ಗಳೇ ಅತ್ಯಧಿಕವಾಗಿತ್ತು. ಅಲ್ಲದೆ, ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾ ಪರ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಗಳಿಸಿದ್ದ ಮಹೇಲಾ ಜಯವರ್ಧನೆ (100) ಅವರ ದಾಖಲೆಯನ್ನು ನಿಸ್ಸಾಂಕ ಸರಿಗಟ್ಟಿದರು. ಇದು ಅವರ ಎರಡನೇ ಅಂತರಾಷ್ಟ್ರೀಯ ಟಿ20 ಶತಕವಾಗಿದೆ.
ಉತ್ತಮ ಆರಂಭದ ಹೊರತಾಗಿಯೂ 181 ರನ್ ಗಳಿಸಿದ ಆಸೀಸ್
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಆಸ್ಟ್ರೇಲಿಯಾಕ್ಕೆ ಆರಂಭಿಕರಾದ ಮಿಚೆಲ್ ಮಾರ್ಷ್ (54) ಮತ್ತು ಟ್ರಾವಿಸ್ ಹೆಡ್ (56) ಉತ್ತಮ ಆರಂಭ ನೀಡಿದರು. ಇವರಿಬ್ಬರು ಕೇವಲ 8.3 ಓವರ್‌ಗಳಲ್ಲಿ 104 ರನ್ ಜೊತೆಯಾಟವಾಡಿದರು. ಆದರೆ, ಶ್ರೀಲಂಕಾದ ಲೆಗ್ ಸ್ಪಿನ್ನರ್ ದುಶನ್ ಹೇಮಂತ (3/37) ಅದ್ಭುತ ಬೌಲಿಂಗ್ ಮೂಲಕ ಆಸೀಸ್ ಓಟಕ್ಕೆ ಕಡಿವಾಣ ಹಾಕಿದರು. ಒಂದು ಹಂತದಲ್ಲಿ 104/0 ಆಗಿದ್ದ ಆಸ್ಟ್ರೇಲಿಯಾ, ಅಂತಿಮವಾಗಿ 181 ರನ್‌ಗಳಿಗೆ ಆಲೌಟ್ ಆಯಿತು.
ಲಂಕಾ ಸೂಪರ್-8 ಹಂತಕ್ಕೆ ಲಗ್ಗೆ
ಈ ಗೆಲುವಿನೊಂದಿಗೆ ಶ್ರೀಲಂಕಾ 'ಗ್ರೂಪ್-ಬಿ'ಯಿಂದ ಸೂಪರ್-8ಗೆ ಲಗ್ಗೆ ಇಟ್ಟಿದೆ. ಇನ್ನೊಂದೆಡೆ, ಆಸ್ಟ್ರೇಲಿಯಾ ಟೂರ್ನಿಯಿಂದ ಹೊರಬೀಳುವ ಅಪಾಯದಲ್ಲಿದೆ. ಜಿಂಬಾಬ್ವೆ ತನ್ನ ಮುಂದಿನ ಪಂದ್ಯದಲ್ಲಿ ಐರ್ಲೆಂಡ್ ಅನ್ನು ಸೋಲಿಸಿದರೆ, ಆಸ್ಟ್ರೇಲಿಯಾ ಸೂಪರ್-8 ರೇಸ್‌ನಿಂದ ಹೊರಗುಳಿಯಬೇಕಾಗುತ್ತದೆ. ಲಂಕಾ ಪರ ಕುಸಾಲ್ ಮೆಂಡಿಸ್ (51) ಮತ್ತು ಪವನ್ ರತ್ನಾಯಕೆ (28*) ಉತ್ತಮ ಆಟವಾಡಿದರು.
ತಂಡವನ್ನು ಗೆಲ್ಲಿಸಿದಕ್ಕೆ ಸಂತೋಷವಾಗುತ್ತಿದೆ ಎಂದ ನಿಸ್ಸಾಂಕ
ಶ್ರೀಲಂಕಾ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಸೆಣಸಲಿದೆ. ನಂತರ ಸೂಪರ್-8ರ 'ಗ್ರೂಪ್-2'ರಲ್ಲಿ ಇಂಗ್ಲೆಂಡ್, ಪಾಕಿಸ್ತಾನ/ಯುಎಸ್‌ಎ/ನೆದರ್ಲೆಂಡ್ಸ್ ಪೈಕಿ ಒಂದು ತಂಡ, ಹಾಗೂ ನ್ಯೂಜಿಲೆಂಡ್/ಅಫ್ಘಾನಿಸ್ತಾನ/ಯುಎಇ ಪೈಕಿ ಒಂದು ತಂಡದೊಂದಿಗೆ ಶ್ರೀಲಂಕಾ ಮುಖಾಮುಖಿಯಾಗಲಿದೆ. 'ತಂಡವನ್ನು ಗೆಲ್ಲಿಸಿದ್ದಕ್ಕೆ ತುಂಬಾ ಸಂತೋಷವಾಗಿದೆ' ಎಂದು ಪಂದ್ಯಶ್ರೇಷ್ಠ ನಿಸ್ಸಾಂಕ ಹೇಳಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

