ಇಶಾನ್ ಕಿಶನ್ ಅಲ್ಲವೇ ಅಲ್ಲ, ಇಂಗ್ಲೆಂಡ್ ಎದುರಿನ 5ನೇ ಟೆಸ್ಟ್‌ಗೆ ಈ ಆಟಗಾರನಿಗೆ ಚಾನ್ಸ್?
ಮ್ಯಾಂಚೆಸ್ಟರ್: ಭಾರತ ಹಾಗೂ ಇಂಗ್ಲೆಂಡ್ ಟೆಸ್ಟ್ ಪಂದ್ಯದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲೇ ಗಾಯಗೊಂಡ ರಿಷಭ್ ಪಂತ್ ಕೊನೆಯ ಟೆಸ್ಟ್ ಆಡೋದು ಡೌಟ್. ಪಂತ್ ತಂಡದಿಂದ ಹೊರಬಿದ್ದರೇ ಅವರ ಸ್ಥಾನಕ್ಕೆ ಆಯ್ಕೆಯಾಗೋರು ಯಾರು ಎನ್ನುವುದನ್ನು ನೋಡೋಣ ಬನ್ನಿ.

4ನೇ ಟೆಸ್ಟ್ ಪಂದ್ಯದ ವೇಳೆ ಪಾದ ಗಾಯಕ್ಕೆ ತುತ್ತಾಗಿರುವ ಭಾರತದ ವಿಕೆಟ್ ಕೀಪರ್ ರಿಷಭ್ ಪಂತ್ ಇಂಗ್ಲೆಂಡ್ ವಿರುದ್ಧ ಕೊನೆ ಪಂದ್ಯದಿಂದ ಹೊರಬೀಳುವುದು ಬಹುತೇಕ ಖಚಿತವಾಗಿದೆ.
ಪಂದ್ಯದ 2ನೇ ದಿನವಾದ ಗುರುವಾರ ರಿಷಭ್ ಬ್ಯಾಟಿಂಗ್‌ಗೆ ಆಗಮಿಸಿದರೂ ಗಾಯದಿಂದ ಚೇತರಿಸಿಕೊಳ್ಳಲು 6 ವಾರ ಬೇಕಾಗಬಹುದು ಎಂದು ವರದಿಯಾಗಿದೆ.
ರಿಷಭ್ ಪಂತ್ ಈ ಸರಣಿಯಲ್ಲಿ ಇದುವರೆಗೆ ನಾಲ್ಕು ಪಂದ್ಯಗಳಿಂದ ಎರಡು ಶತಕ ಮತ್ತು ಮೂರು ಅರ್ಧಶತಕ ಸೇರಿದಂತೆ 68.42 ಸರಾಸರಿಯಲ್ಲಿ 479 ರನ್ ಗಳಿಸಿದ್ದಾರೆ.
ರಿಷಭ್ ಪಂತ್ ಅನುಪಸ್ಥಿತಿ ಭಾರತ ತಂಡವನ್ನು ಕಾಡುವ ಸಾಧ್ಯತೆಯಿದೆ. ಟೀಂ ಇಂಡಿಯಾ ಪರ ಪಂತ್ ಮಧ್ಯಮ ಕ್ರಮಾಂಕದಲ್ಲಿ ಅತ್ಯಂತ ಸ್ಥಿರ ಪ್ರದರ್ಶನದ ಮೂಲಕ ಆಸರೆಯಾಗಿದ್ದರು.
ಇದೀಗ ಜುಲೈ 31ಕ್ಕೆ ಆರಂಭಗೊಳ್ಳಲಿರುವ ಕೊನೆ ಟೆಸ್ಟ್‌ಗೂ ಮುನ್ನ ರಿಷಭ್ ಬದಲಿಗರಾಗಿ ತಮಿಳುನಾಡಿನ ಎನ್.ಜಗದೀಶನ್ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆಯಿದೆ.
52 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ 29 ವರ್ಷದ ಜಗದೀಶನ್ 47.50ರ ಸರಾಸರಿಯಲ್ಲಿ 3373 ರನ್ ಕಲೆಹಾಕಿದ್ದಾರೆ.
ರಿಷಭ್ ಬದಲು ಇಶಾನ್ ಕಿಶನ್ ಆಯ್ಕೆಯಾಗಬಹುದು ಎಂದು ಹೇಳಲಾಗುತ್ತಿತ್ತು. ಆದರೆ ಇಶಾನ್ ಕೂಡಾ ಸದ್ಯ ಗಾಯಗೊಂಡಿದ್ದು, ಆಡಲು ಫಿಟ್ ಆಗಿಲ್ಲ.
ಹೀಗಾಗಿ ಜಗದೀಶನ್‌ಗೆ ಮಣೆ ಹಾಕಲಾಗಿದೆ ಎಂದು ಗೊತ್ತಾಗಿದೆ. ಜಗದೀಶನ್ ತಂಡ ಸೇರ್ಪಡೆಗೊಂಡರೂ, ಧ್ರುವ್ ಜುರೆಲ್ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.