ಲಾರ್ಡ್ಸ್ ಟೆಸ್ಟ್ ಸೋಲಿನ ಬೆನ್ನಲ್ಲೇ ಮೊಹಮ್ಮದ್ ಸಿರಾಜ್‌ಗೆ ಕಠಿಣ ಶಿಕ್ಷೆ ವಿಧಿಸಿದ ಐಸಿಸಿ!
ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಎದುರು ಟೀಂ ಇಂಡಿಯಾ 22 ರನ್ ಅಂತರದ ವಿರೋಚಿತ ಸೋಲು ಅನುಭವಿಸಿದೆ. ಈ ಸೋಲಿನ ಶಾಕ್‌ನಿಂದ ಹೊರಬರುವ ಮುನ್ನವೇ ವೇಗಿ ಮೊಹಮ್ಮದ್ ಸಿರಾಜ್‌ಗೆ ಐಸಿಸಿ ಶಾಕ್ ನೀಡಿದೆ.

ಲಂಡನ್‌ನ ಲಾರ್ಡ್ಸ್‌ನಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ 22 ರನ್ ರೋಚಕ ಸೋಲು ಅನುಭವಿಸಿದೆ. ಈ ಪಂದ್ಯದ ವೇಳೆ ಇಂಗ್ಲೆಂಡ್ ಆಟಗಾರ ಬೆನ್ ಡಕೆಟ್ ವಿಕೆಟ್ ಪಡೆದು ಅತಿಯಾಗಿ ಸಂಭ್ರಮಿಸಿದ ಭಾರತೀಯ ಆಟಗಾರ ಮೊಹಮ್ಮದ್ ಸಿರಾಜ್‌ಗೆ ಐಸಿಸಿ ಪಂದ್ಯ ಶುಲ್ಕದ ಶೇ.15ರಷ್ಟು ದಂಡ ವಿಧಿಸಿದೆ. 4ನೇ ದಿನದಾಟದಲ್ಲಿ ಸಿರಾಜ್, ಬೆನ್ ಡಕೆಟ್ ವಿಕೆಟ್ ಪಡೆದು ಅತಿಯಾಗಿ ಸೆಲಿಬ್ರೇಟ್ ಮಾಡಿದ್ದರು. ಸಿರಾಜ್ ಎಸೆತದಲ್ಲಿ ಪುಲ್ ಶಾಟ್ ಹೊಡೆಯಲು ಯತ್ನಿಸಿದ ಬೆನ್ ಡಕೆಟ್ 12 ರನ್‌ಗಳಿಗೆ ಬುಮ್ರಾಗೆ ಕ್ಯಾಚ್ ನೀಡಿ ಔಟಾದರು.
ವಿಕೆಟ್ ಪಡೆದ ಉತ್ಸಾಹದಲ್ಲಿ ಸಿರಾಜ್, ಡಕೆಟ್ ಮುಖಕ್ಕೆ ಹೋಗಿ ಕೆಲವು ಮಾತುಗಳನ್ನಾಡಿ ಕೂಗಾಡಿದ್ದಲ್ಲದೆ, ಅವರ ಭುಜಕ್ಕೂ ಡಿಕ್ಕಿ ಹೊಡೆದರು. ಡಕೆಟ್ ಏನೂ ಪ್ರತಿಕ್ರಿಯೆ ನೀಡದೆ ಸುಮ್ಮನೆ ಹೋದರು. ಸಿರಾಜ್ ನಡೆ ಟೀಕೆಗೆ ಗುರಿಯಾಯಿತು. ಕ್ರಿಕೆಟ್‌ನಲ್ಲಿ ವಿಕೆಟ್ ಪಡೆದರೆ ಆಕ್ರೋಶದಿಂದ ಆಚರಿಸಬಹುದು. ಆದರೆ ಇತರ ಆಟಗಾರರನ್ನು ಕೆಣಕುವ ರೀತಿ ಸಿರಾಜ್ ವರ್ತಿಸಿದ್ದು ತಪ್ಪು ಎಂದು ಹಲವರು ಹೇಳಿದ್ದಾರೆ.
ಕಳೆದ 24 ತಿಂಗಳಲ್ಲಿ ಸಿರಾಜ್‌ಗೆ ಇದು ಎರಡನೇ ನಿಯಮ ಉಲ್ಲಂಘನೆಯಾಗಿದೆ. ಇದರಿಂದಾಗಿ ಅವರ ಡಿಮೆರಿಟ್ ಪಾಯಿಂಟ್‌ಗಳ ಸಂಖ್ಯೆ ಎರಡಕ್ಕೆ ಏರಿದೆ. 24 ತಿಂಗಳ ಅವಧಿಯಲ್ಲಿ ಒಬ್ಬ ಆಟಗಾರ ನಾಲ್ಕು ಅಥವಾ ಹೆಚ್ಚಿನ ಡಿಮೆರಿಟ್ ಪಾಯಿಂಟ್‌ಗಳನ್ನು ಪಡೆದರೆ ಅದು ಅಮಾನತು ಪಾಯಿಂಟ್‌ಗಳಾಗಿ ಪರಿವರ್ತನೆಯಾಗುತ್ತದೆ. ಇದರ ನಂತರ ಆ ಆಟಗಾರ ಒಂದು ಅಂತಾರಾಷ್ಟ್ರೀಯ ಪಂದ್ಯವನ್ನು ಆಡುವುದನ್ನು ನಿಷೇಧಿಸಲಾಗುತ್ತದೆ.
2024ರ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಆಟಗಾರ ಟ್ರಾವಿಸ್ ಹೆಡ್ ಔಟಾದಾಗಲೂ ಸಿರಾಜ್ ಇದೇ ರೀತಿ ಆಕ್ರಮಣಕಾರಿಯಾಗಿ ವರ್ತಿಸಿದ್ದರಿಂದ ಐಸಿಸಿ ದಂಡ ಮತ್ತು ಒಂದು ಡಿಮೆರಿಟ್ ಪಾಯಿಂಟ್ ನೀಡಿತ್ತು.