ಸುನಿಲ್ ಶೆಟ್ಟಿ ಅಳಿಯನಾದ KLR, ಆಥಿಯಾ ಶೆಟ್ಟಿ ಕೈ ಹಿಡಿದ ಕೆಎಲ್ ರಾಹುಲ್!
ಟೀಮ್ ಇಂಡಿಯಾದ ಸ್ಟಾರ್ ಆರಂಭಿಕ ಆಟಗಾರ ಕರ್ನಾಟಕ ಕೆಎಲ್ ರಾಹುಲ್, ತಮ್ಮ ದೀರ್ಘ ಕಾಲದ ಗೆಳತಿ ಆಥಿಯಾ ಶೆಟ್ಟಿಯ ವಿವಾಹವಾಗಿದ್ದಾರೆ. ಸೋಮವಾರ ಸುನಿಲ್ ಶೆಟ್ಟಿ ಅವರ ಖಂಡಾಲಾ ಫಾರ್ಮ್‌ಹೌಸ್‌ನಲ್ಲಿ ವಿವಾಹ ಸಮಾರಂಭ ನಡೆದಿದೆ.
ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಪುತ್ರಿ ಅಥಿಯಾ ಶೆಟ್ಟಿ ಮತ್ತು ಭಾರತೀಯ ಕ್ರಿಕೆಟಿಗ ಕೆಎಲ್ ರಾಹುಲ್ ಸೋಮವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.ಕುಟುಂಬ ಸದಸ್ಯರು ಮತ್ತು ಆಪ್ತರು ಸೇರಿದಂತೆ 100 ಮಂದಿ ಮಾತ್ರ ಮದುವೆಯಲ್ಲಿ ಪಾಲ್ಗೊಂಡಿದ್ದರು.
ಅಥಿಯಾ ಅವರ ವಿಶೇಷ ಸ್ನೇಹಿತರಾದ ಕೃಷ್ಣ ಶ್ರಾಫ್, ಅಂಶುಲಾ ಕಪೂರ್, ಡಯಾನಾ ಪೆಂಟಿ, ಕ್ರಿಕೆಟಿಗ ಇಶಾಂತ್ ಶರ್ಮಾ, ವರುಣ್ ಆರೋನ್ ಹಾಜರಿದ್ದರು. ಇಲ್ಲಿ ಎಲ್ಲಾ ಅತಿಥಿಗಳ ಕೈಗೆ ಕೆಂಪು ಬ್ಯಾಂಡ್ ಕಟ್ಟಲಾಗಿತ್ತು. ಈ ಬ್ಯಾಂಡ್ ಇದ್ದವರಿಗೆ ಮಾತ್ರವೇ ಸಮಾರಂಭಕ್ಕೆ ಪ್ರವೇಶ ನೀಡಲಾಗಿತ್ತು.
ವಿವಾಹಕ್ಕೆ ಹೋಗುವ ಅತಿಥಿಗಳು ಮೊಬೈಲ್ ಬಳಕೆ ಮಾಡುವಂತಿರಲಿಲ್ಲ. ಹಾಗಾಗಿ ಮದುವೆಯ ಯಾವ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗಿರಲಿಲ್ಲ. ಕೆಎಲ್ ರಾಹುಲ್ ಹಾಗೂ ಆಥಿಯಾ ತಮ್ಮ ಇನ್ಸ್‌ಟಾಗ್ರಾಮ್ ಪುಟದಲ್ಲಿ ಮದುವೆಯ ಚಿತ್ರಗಳನ್ನು ಹಂಚಿಕೊಂಡಿದ್ದರು.
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಸರಣಿ ನಡೆಯುತ್ತಿರುವ ಕಾರಣ, ಕ್ರಿಕೆಟಿಗರು ಮದುವೆ ಸಮಾರಂಭಕ್ಕೆ ಹಾಜರಿರಲು ಸಾಧ್ಯವಾಗಲಿಲ್ಲ. ಐಪಿಎಲ್ ಸಮಯದಲ್ಲಿ ಕ್ರಿಕೆಟಿಗರು ಹಾಗೂ ಸ್ನೇಹಿತರಿಗಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.
ಕೆಎಲ್ ರಾಹುಲ್ ಅವರ ಆಪ್ತ ಸ್ನೇಹಿತ ವಿರಾಟ್ ಕೊಹ್ಲಿ ಕೂಡ ಮದುವೆಗೆ ಹಾಜರಿರಲಿಲ್ಲ. ಇಂದೋರ್‌ನಲ್ಲಿ ವಿರಾಟ್ ಕೊಹ್ಲಿ ಮುಂದಿನ ಪಂದ್ಯಕ್ಕಾಗಿ ಸಿದ್ಧತೆ ನಡೆಸಿದ್ದಾರೆ.
ಸುನೀಲ್ ಶೆಟ್ಟಿ ದಕ್ಷಿಣ ಭಾರತೀಯ ಶೈಲಿಯಲ್ಲಿ ಪಂಚೆ-ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ಅವರೊಂದಗೆ ಪುತ್ರ ಅಹಾನ್ ಶೆಟ್ಟಿ ಕೂಡ ಸಮಾರಂಭದ ಕಾರ್ಯಕ್ರಮ ಹೊರಗೆ ಮಾಧ್ಯಮಗಳ ಎದುರು ಕಾಣಿಸಿಕೊಂಡರು.
ಮದುವೆ ಮುಕ್ತಾಯವಾದ ಬಳಿಕ ಬಾಲಿವುಡ್ ಹಿರಿಯ ನಟ ಸುನೀಲ್ ಶೆಟ್ಟಿ ಹಾಗೂ ಅವರ ಪುತ್ರ ಅಹಾನ್ ಶೆಟ್ಟಿ ಸ್ವತಃ ಮಾಧ್ಯಮಗಳಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಮದುವೆಗೆ ಬಂದ ಅತಿಥಿಗಳಿಗೂ ಕೂಡ ಬಾಳೆ ಎಲೆಯಲ್ಲಿ ದಕ್ಷಿಣ ಭಾರತದ ಶೈಲಿಯಲ್ಲಿ ಊಟ ಬಡಿಸಲಾಗಿದೆ.
ಕೆಎಲ್ ರಾಹುಲ್ ಹಾಗೂ ಆಥಿಯಾ ಶೆಟ್ಟಿ ಅವರ ವಿವಾಹಸ ವಸ್ತ್ರವನ್ನು ಸಬ್ಯಸಾಚಿ ವಿನ್ಯಾಸ ಮಾಡಿದ್ದರು. ಸಾಮಾನ್ಯವಾಗಿ ಕೆಂಪು ಬಣ್ಣದ ವಿವಾಹ ವಸ್ತ್ರ ವಿನ್ಯಾಸ ಮಾಡುವ ಸಬ್ಯಸಾಚಿ, ಆಥಿಯಾಗಾಗಿ ಬಿಳಿ ಹಾಗೂ ಚಿನ್ನದ ಬಣ್ಣದ ಉಡುಪನ್ನು ವಿನ್ಯಾಸ ಮಾಡಿದ್ದರು.