IPL ಟ್ರೋಫಿ ಗೆದ್ದ ಪಾಕಿಸ್ತಾನ ಕ್ರಿಕೆಟಿಗರಿವರು..! ಈ ಪಟ್ಟಿಯಲ್ಲಿದೆ ನಿಮಗೆ ಗೊತ್ತಿರದ ಇಂಟ್ರೆಸ್ಟಿಂಗ್ ಹೆಸರು
ಬೆಂಗಳೂರು: ಜಗತ್ತಿನ ಶ್ರೀಮಂತ ಟಿ20 ಲೀಗ್ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಜಗತ್ತಿನ ನಾನಾ ದೇಶಗಳ ಆಟಗಾರರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಆದರೆ ಪಾಕಿಸ್ತಾನ ಆಟಗಾರರಿಗೆ ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ. ಆದರೆ ಚೊಚ್ಚಲ ಆವೃತ್ತಿಯ ಐಪಿಎಲ್‌ನಲ್ಲಿ ಪಾಕ್ ಆಟಗಾರರು ಐಪಿಎಲ್ ಆಡಿದ್ದರು. ಈ ಪೈಕಿ ಮೂವರು ಆಟಗಾರರು ಐಪಿಎಲ್ ಚಾಂಪಿಯನ್ ತಂಡದ ಸದಸ್ಯರಾಗಿದ್ದರು. ಅಷ್ಟಕ್ಕೂ ಯಾರು ಆ ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
2008ರಲ್ಲಿ ಚೊಚ್ಚಲ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಭಾರತದಲ್ಲಿ ಚಾಲನೆ ಸಿಕ್ಕಿತು. ಇದೀಗ 16 ಯಶಸ್ವಿ ಆವೃತ್ತಿಗಳನ್ನು ಮುಗಿಸಿ 17ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಸಿದ್ದತೆಗಳು ಆರಂಭವಾಗಿವೆ.
ಚೊಚ್ಚಲ ಆವೃತ್ತಿಯ ಐಪಿಎಲ್‌ನಲ್ಲಿ ಎಲ್ಲಾ ದೇಶಗಳಂತೆ ಪಾಕಿಸ್ತಾನದ ಆಟಗಾರರಿಗೂ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಶಾಹಿದ್ ಅಫ್ರಿದಿ, ಶೋಯೆಬ್ ಅಖ್ತರ್, ಉಮರ್ ಗುಲ್ ಸೇರಿದಂತೆ ಹಲವು ಕ್ರಿಕೆಟಿಗರು ಚೊಚ್ಚಲ ಆವೃತ್ತಿಯ ಐಪಿಎಲ್‌ನಲ್ಲಿ ಪಾಲ್ಗೊಂಡಿದ್ದರು.
ಇನ್ನು 2009ರಲ್ಲಿ ಮುಂಬೈನ ಮೇಲೆ ಪಾಕಿಸ್ತಾನ ಬೆಂಬಲಿತ ಉಗ್ರರು ದಾಳಿ ನಡೆಸಿದ ಬಳಿಕ ಉಭಯ ದೇಶಗಳ ನಡುವಿನ ಬಾಂಧವ್ಯ ಹಳಸಿತು. ಪರಿಣಾಮ 2009ರ ಐಪಿಎಲ್‌ನಿಂದಲೇ ಪಾಕಿಸ್ತಾನ ಆಟಗಾರರನ್ನು ಟೂರ್ನಿಯಿಂದ ಪಾಲ್ಗೊಳ್ಳದಂತೆ ಬ್ಯಾನ್ ಮಾಡಲಾಯಿತು. ಅದೇ ತೀರ್ಮಾನ ಇಲ್ಲಿಯವರೆಗೂ ಮುಂದುವರೆದಿದೆ.
ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯ ಫೈನಲ್‌ನಲ್ಲಿ ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಎದುರು ಶೇನ್ ವಾರ್ನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಚಾಂಪಿಯನ್ ತಂಡದಲ್ಲಿ ಮೂವರು ಪಾಕಿಸ್ತಾನ ಆಟಗಾರರು ಇದ್ದರು ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ.
1. ಕಮ್ರಾನ್ ಅಕ್ಮಲ್:
2008ರಲ್ಲಿ ಆರಂಭವಾದ ಐಪಿಎಲ್ ಟೂರ್ನಿಯ ಸಂದರ್ಭದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿದ್ದ ಕಮ್ರಾನ್ ಅಕ್ಮಲ್ ಪಾಕಿಸ್ತಾನ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದರು. ಹೀಗಾಗಿ 2008ರಲ್ಲಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಅಕ್ಮಲ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು.
ವಿಕೆಟ್ ಕೀಪರ್ ಬ್ಯಾಟರ್ ಅಕ್ಮಲ್, ಪಾಕಿಸ್ತಾನ ತಂಡದ ಪರ 6 ಪಂದ್ಯಗಳನ್ನಾಡಿ ಒಂದು ಅರ್ಧಶತಕ ಸಹಿತ 25.60 ಬ್ಯಾಟಿಂಗ್ ಸರಾಸರಿಯಲ್ಲಿ 128 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.
2. ಸೋಹೆಲ್ ತನ್ವೀರ್
ರಾಜಸ್ಥಾನ ರಾಯಲ್ಸ್ ತಂಡವು ಚಾಂಪಿಯನ್ ಪಟ್ಟಕ್ಕೇರಲು ಪ್ರಮುಖ ಪಾತ್ರವಹಿಸಿದ ಆಟಗಾರರಲ್ಲಿ ಸೋಹೆಲ್ ತನ್ವೀರ್ ಕೂಡಾ ಒಬ್ಬರು. ಪಾಕಿಸ್ತಾನದ ಎಡಗೈ ವೇಗಿ ತನ್ವೀರ್ ಚೊಚ್ಚಲ ಐಪಿಎಲ್‌ನಲ್ಲಿ 21 ವಿಕೆಟ್ ಕಬಳಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು.
ಚೊಚ್ಚಲ ಐಪಿಎಲ್‌ನ ಮೂರನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ತನ್ವೀರ್ ಕೇವಲ 14 ರನ್ ನೀಡಿ 6 ವಿಕೆಟ್ ಕಬಳಿಸಿದ್ದರು. ಇದು ಹಲವು ವರ್ಷಗಳ ಕಾಲ ಐಪಿಎಲ್‌ನಲ್ಲಿ ವೇಗದ ಬೌಲರ್‌ನಿಂದ ಮೂಡಿ ಬಂದ ಶ್ರೇಷ್ಠ ಬೌಲಿಂಗ್ ಪ್ರದರ್ಶನ ಎನಿಸಿಕೊಂಡಿತು. ತನ್ವೀರ್ ಟೂರ್ನಿಯ ಗರಿಷ್ಠ ವಿಕೆಟ್ ಸರದಾರ ಎನಿಸಿಕೊಂಡಿದ್ದರು.
3. ಯೂನಿಸ್ ಖಾನ್
ಪಾಕಿಸ್ತಾನದ ದಿಗ್ಗಜ ಬ್ಯಾಟರ್ ಯೂನಿಸ್ ಖಾನ್ ಕೂಡಾ ಐಪಿಎಲ್ ಟೂರ್ನಿಯನ್ನಾಡಿ ಚಾಂಪಿಯನ್ ತಂಡದ ಸದಸ್ಯರೆನಿಸಿಕೊಂಡಿದ್ದರು ಎನ್ನುವುದು ಬಹುತೇಕ ಮಂದಿಗೆ ನೆನಪಿರಲಿಕ್ಕಿಲ್ಲ. ಯೂನಿಸ್ ಖಾನ್ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಒಂದು ಪಂದ್ಯವನ್ನಾಡಿದ್ದರು.
ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಗ್ರೇಮ್ ಸ್ಮಿತ್, ಡೇಮಿಯನ್ ಮಾರ್ಟಿನ್, ಶೇನ್ ವಾಟ್ಸನ್ ಅವರಂತಹ ಸ್ಪೋಟಕ ಬ್ಯಾಟರ್‌ಗಳಿದ್ದರಿಂದ ಅವರಿಗೆ ಅವಕಾಶ ನೀಡುವ ಉದ್ದೇಶದಿಂದ ಯೂನಿಸ್ ಖಾನ್‌ಗೆ ಹೆಚ್ಚು ಅವಕಾಶ ಸಿಗಲಿಲ್ಲ.