ಪ್ಲೇಆಫ್ ಕನಸಿನ ರೂವಾರಿಗಳು; ಚೇತೇಶ್ವರ, ಬೌಷರ್ ಗಮನ ಸೆಳೆದ ಐವರು IPL ಪ್ರತಿಭೆಗಳು
ಟಾಟಾ ಐಪಿಎಲ್ 2026ರ ಪ್ಲೇಆಫ್ ರೇಸ್ ತೀವ್ರಗೊಂಡಿದ್ದು, ಸಿಎಸ್‌ಕೆ, ಆರ್‌ಸಿಬಿ ಮತ್ತು ಎಸ್‌ಆರ್‌ಎಚ್ ತಂಡಗಳ ಭವಿಷ್ಯವನ್ನು ನಿರ್ಧರಿಸಬಲ್ಲ ಐವರು ಯುವ ಆಟಗಾರರನ್ನು ಕ್ರಿಕೆಟ್ ತಜ್ಞರು ಗುರುತಿಸಿದ್ದಾರೆ.

ಐವರು ಯುವ ಆಟಗಾರರು
ಟಾಟಾ ಐಪಿಎಲ್ 2026ರ ಪ್ಲೇಆಫ್ ರೇಸ್ ಇದೀಗ ರೋಚಕ ಹಂತಕ್ಕೆ ತಲುಪಿದ್ದು, ಎಂಟು ತಂಡಗಳ ನಡುವೆ ನಾಲ್ಕು ಸ್ಥಾನಗಳಿಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಗುಜರಾತ್ ಟೈಟಾನ್ಸ್ ಈಗಾಗಲೇ 16 ಅಂಕಗಳೊಂದಿಗೆ ಮೊದಲ ತಂಡವಾಗಿ ಪ್ಲೇಆಫ್ ಪ್ರವೇಶಿಸಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂಬೈ ಇಂಡಿಯನ್ಸ್ ವಿರುದ್ಧದ ರೋಚಕ ಜಯದೊಂದಿಗೆ ಎರಡನೇ ಸ್ಥಾನಕ್ಕೇರಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ಸತತ ಮೂರು ಜಯಗಳೊಂದಿಗೆ ಮುಂಚೂಣಿಗೆ ಮರಳಿದೆ.
ಈ ಮಹತ್ವದ ಘಟ್ಟದಲ್ಲಿ ಸಿಎಸ್‌ಕೆ, ಆರ್‌ಸಿಬಿ ಮತ್ತು ಎಸ್‌ಆರ್‌ಎಚ್ ತಂಡಗಳ ಪ್ಲೇಆಫ್ ಹಾದಿಯನ್ನು ಸುಗಮಗೊಳಿಸಬಲ್ಲ ಐವರು ಯುವ ಆಟಗಾರರ ಬಗ್ಗೆ ಕ್ರಿಕೆಟ್ ತಜ್ಞರಾದ ಚೇತೇಶ್ವರ ಪೂಜಾರ ಮತ್ತು ಮಾರ್ಕ್ ಬೌಷರ್ ವಿಶ್ಲೇಷಣೆ ನಡೆಸಿದ್ದಾರೆ. ಆ ಐವರು ಆಟಗಾರರ ವಿವರ ಇಲ್ಲಿದೆ:

1. ಅಭಿಷೇಕ್ ಶರ್ಮಾ
ಸನ್‌ರೈಸರ್ಸ್ ಹೈದರಾಬಾದ್‌ನ ಅಪ್ರತಿಮ ಶಕ್ತಿಯಾಗಿರುವ ಇವರು 43.7 ರ ಸರಾಸರಿ ಹಾಗೂ 210 ರ ಸ್ಫೋಟಕ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸುತ್ತಿದ್ದಾರೆ. ದೆಹಲಿ ವಿರುದ್ಧ ಕೇವಲ 68 ಎಸೆತಗಳಲ್ಲಿ ಅಜೇಯ 135* ರನ್ ಗಳಿಸಿರುವುದು ಇವರ ನಿರ್ಭೀತ ಆಟಕ್ಕೆ ಸಾಕ್ಷಿ. ಎಸ್‌ಆರ್‌ಎಚ್ ಅಗ್ರ ಎರಡು ಸ್ಥಾನಕ್ಕೇರಲು ಇವರ ಬ್ಯಾಟಿಂಗ್ ನಿರ್ಣಾಯಕವಾಗಲಿದೆ.
2. ಉರ್ವಿಲ್ ಪಟೇಲ್
ಲಕ್ನೋ ವಿರುದ್ಧ ಕೇವಲ 13 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಐಪಿಎಲ್ ಇತಿಹಾಸದ ಜಂಟಿ ವೇಗದ ದಾಖಲೆಯನ್ನು ಇವರು ಸರಿಗಟ್ಟಿದ್ದಾರೆ. 2019ರ ನಂತರ ಸಿಎಸ್‌ಕೆ ಮೊದಲ ಬಾರಿಗೆ 200ಕ್ಕೂ ಅಧಿಕ ರನ್ ಬೆನ್ನಟ್ಟುವಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು.
3. ಅನ್ಶುಲ್ ಕಾಂಬೋಜ್
ಈ ಬಲಗೈ ವೇಗಿ ಈಗಾಗಲೇ 19 ವಿಕೆಟ್ ಕಬಳಿಸಿ ಪರ್ಪಲ್ ಕ್ಯಾಪ್ ರೇಸ್‌ನಲ್ಲಿದ್ದಾರೆ. ಹೊಸ ಚೆಂಡು ಹಾಗೂ ಡೆತ್ ಓವರ್‌ಗಳಲ್ಲಿ ನಾಯಕ ರುತುರಾಜ್ ಗಾಯಕ್ವಾಡ್ ಅವರ ನಂಬಿಕಸ್ತ ಆಯ್ಕೆಯಾಗಿರುವ ಕಾಂಬೋಜ್, ಸಿಎಸ್‌ಕೆಯ ಪುನರಾಗಮನದ ಕೇಂದ್ರಬಿಂದುವಾಗಿದ್ದಾರೆ.
4. ಸಾಕಿಬ್ ಹುಸೇನ್
ಬಿಹಾರದ ಈ ವೇಗಿ ವೈವಿಧ್ಯಮಯ ಬೌಲಿಂಗ್ ಮೂಲಕ ಎಸ್‌ಆರ್‌ಎಚ್ ತಂಡಕ್ಕೆ ಸಮತೋಲನ ನೀಡಿದ್ದಾರೆ. ಪ್ಯಾಟ್ ಕಮಿನ್ಸ್ ಮತ್ತು ಇಶಾನ್ ಮಾಲಿಂಗ ಅವರೊಂದಿಗೆ ಸೇರಿ ತಂಡದ ಬೌಲಿಂಗ್ ವಿಭಾಗವನ್ನು ಇವರು ಬಲಪಡಿಸಿದ್ದಾರೆ.
5. ರಸಿಕ್ ಸಲಾಮ್ ಧರ್
ಆರ್‌ಸಿಬಿ ವೇಗದ ದಾಳಿಗೆ ಅದ್ಭುತವಾಗಿ ಹೊಂದಿಕೊಂಡಿರುವ ಇವರು, ಲಕ್ನೋ ವಿರುದ್ಧ 4 ವಿಕೆಟ್ ಕಿತ್ತು ಮಿಂಚಿದ್ದರು. ಬೌಲಿಂಗ್ ಮಾತ್ರವಲ್ಲದೆ ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ ಮೂಲಕವೂ ಸಂಯಮದ ಆಟ ಪ್ರದರ್ಶಿಸಿ ಮುಂಬೈ ವಿರುದ್ಧದ ಜಯದಲ್ಲಿ ಪಾತ್ರವಹಿಸಿದ್ದರು.
ನಿರ್ಭೀತ ಯುವ ಪ್ರತಿಭೆಗಳು
ಚೇತೇಶ್ವರ ಪೂಜಾರ ಅವರ ಕುರಿತು ಮಾತನಾಡಿ, ‘ಉರ್ವಿಲ್ ಪಟೇಲ್ ಮತ್ತು ಅನ್ಶುಲ್ ಕಾಂಬೋಜ್ ಸಿಎಸ್‌ಕೆಯ ಪುನರಾಗಮನದಲ್ಲಿ ದೊಡ್ಡ ಪಾತ್ರ ವಹಿಸಿದ್ದಾರೆ. ನಿರ್ಣಾಯಕ ಕ್ಷಣಗಳಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಇಂತಹ ನಿರ್ಭೀತ ಯುವ ಪ್ರತಿಭೆಗಳನ್ನೇ ಚೆನ್ನೈ ತಂಡ ಹೆಚ್ಚು ನಂಬಿಕೊಂಡಿದೆ’ ಎಂದರು.
ಮಾರ್ಕ್ ಬೌಷರ್ ಮಾತನಾಡಿ, ‘ಅಭಿಷೇಕ್ ಶರ್ಮಾ ಹೈದರಾಬಾದ್‌ನ ನಿರ್ಭೀತ ಆಟದ ಶೈಲಿಯನ್ನು ಮುನ್ನಡೆಸುತ್ತಿದ್ದಾರೆ. ಸಾಕಿಬ್ ಹುಸೇನ್ ಮತ್ತು ಆರ್‌ಸಿಬಿಯ ರಸಿಕ್ ಸಲಾಮ್ ಅವರು ತಮ್ಮ ತಂಡಗಳನ್ನು ಅಗ್ರ ಎರಡು ಸ್ಥಾನಗಳಲ್ಲಿ ಉಳಿಸಿಕೊಳ್ಳಲು ಪ್ರಮುಖವಾಗಲಿದ್ದಾರೆ’ ಎಂದರು.
ಟಾಟಾ ಐಪಿಎಲ್ 2026ರ ಪ್ಲೇಆಫ್ ಪಂದ್ಯಗಳನ್ನು ಮೇ 24 ರವರೆಗೆ ಜಿಯೋಹಾಟ್‌ಸ್ಟಾರ್ ಮತ್ತು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

