ಮುಂಬೈ ಇಂಡಿಯನ್ಸ್ ಸೋಲಿಸಿದ ಬೆನ್ನಲ್ಲೇ ಶ್ರೇಯಸ್ ಅಯ್ಯರ್‌ಗೆ ಬಿಸಿಸಿಐನಿಂದ ಬಿಗ್ ಶಾಕ್!
ಅಹಮದಾಬಾದ್: 2025ರ ಐಪಿಎಲ್ ಕ್ವಾಲಿಫೈಯರ್ 2 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸೋಲಿಸಿ ಪಂಜಾಬ್ ಕಿಂಗ್ಸ್ ಫೈನಲ್‌ಗೆ ಲಗ್ಗೆಯಿಟ್ಟಿದೆ. ಇದರ ಬೆನ್ನಲ್ಲೇ ಉಭಯ ತಂಡಗಳ ನಾಯಕರಿಗೆ ಬಿಗ್ ಶಾಕ್ ಎದುರಾಗಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕ್ವಾಲಿಫೈಯರ್ 2 ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವು ಭರ್ಜರಿ ಜಯ ಸಾಧಿಸಿ, ಫೈನಲ್‌ಗೆ ಲಗ್ಗೆಯಿಟ್ಟಿದೆ.
ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಹೈಸ್ಕೋರಿಂಗ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು 5 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಇದೀಗ ಜೂನ್ 03ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಪ್ರಶಸ್ತಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಕಾದಾಡಲಿವೆ.
ಇನ್ನು ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ ಪಂಜಾಬ್ ಕಿಂಗ್ಸ್ ತಂಡವನ್ನು ಫೈನಲ್‌ಗೆ ಕರೆದೊಯ್ದ ನಾಯಕ ಶ್ರೇಯಸ್ ಅಯ್ಯರ್‌ಗೆ ಬಿಸಿಸಿಐ ಬಿಗ್ ಶಾಕ್ ನೀಡಿದ್ದು, ಬರೋಬ್ಬರಿ 25 ಲಕ್ಷ ರುಪಾಯಿ ದಂಡ ವಿಧಿಸಿದೆ.
ಮುಂಬೈ ಇಂಡಿಯನ್ಸ್ ಎದುರಿನ ಕ್ವಾಲಿಫೈಯರ್ 2 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಮಂದಗತಿಯ ಬೌಲಿಂಗ್ ಮಾಡಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿತ್ತು. ಹೀಗಾಗಿ ಶ್ರೇಯಸ್ ಅಯ್ಯರ್‌ಗೆ ಬರೋಬ್ಬರಿ 25 ಲಕ್ಷ ರುಪಾಯಿ ದಂಡ ವಿಧಿಸಲಾಗಿದೆ.
ಇನ್ನು ಪಂಜಾಬ್ ಕಿಂಗ್ಸ್ ತಂಡದ ಆಡಿದ ಹನ್ನೊಂದರ ಬಳಗ ಹಾಗೂ ಇಂಪ್ಯಾಕ್ಟ್ ಆಟಗಾರರಿಗೆ 6 ಲಕ್ಷ ರುಪಾಯಿ ಇಲ್ಲವೇ ಪಂದ್ಯದ ಸಂಭಾವನೆಯ 25% ಈ ಪೈಕಿ ಯಾವುದು ಕಡಿಮೆಯೋ ಅಷ್ಟು ಮೊತ್ತದ ದಂಡ ವಿಧಿಸಲಾಗಿದೆ.
ಇನ್ನು ಕ್ವಾಲಿಫೈಯರ್ 2 ಪಂದ್ಯದಲ್ಲಿ ಪಂಜಾಬ್ ಎದುರು ಮುಗ್ಗರಿಸಿದ ಮುಂಬೈ ಇಂಡಿಯನ್ಸ್ ಕೂಡಾ ಮಂದಗತಿಯಲ್ಲಿ ಬೌಲಿಂಗ್ ಮಾಡುವ ಮೂಲಕ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿತ್ತು.
ಮುಂಬೈ ಇಂಡಿಯನ್ಸ್ 3ನೇ ಬಾರಿಗೆ ನಿಧಾನಗತಿ ಬೌಲಿಂಗ್ ಮಾಡಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದರಿಂದ ನಾಯಕ ಹಾರ್ದಿಕ್ ಪಾಂಡ್ಯಗೆ 30 ಲಕ್ಷ ರುಪಾಯಿ ಹಾಗೂ ಮುಂಬೈ ಇಂಡಿಯನ್ಸ್‌ನ ಇಂಪ್ಯಾಕ್ಟ್ ಆಟಗಾರರು ಸೇರಿದಂತೆ ಉಳಿದ ಆಟಗಾರರಿಗೆ 12 ಲಕ್ಷ ರುಪಾಯಿ ಇಲ್ಲವೇ ಪಂದ್ಯದ ಸಂಭಾವನೆಯ 50% ಈ ಪೈಕಿ ಯಾವುದು ಕಡಿಮೆಯೋ ಅಷ್ಟು ದಂಡ ವಿಧಿಸಲಾಗಿದೆ.
ಮುಂಬೈ ನೀಡಿದ್ದ 204 ರನ್ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡವು ನಾಯಕ ಶ್ರೇಯಸ್ ಅಯ್ಯರ್ ಬಾರಿಸಿದ ಸ್ಪೋಟಕ ಅರ್ಧಶತಕದ ನೆರವಿನಿಂದ ಇನ್ನೂ 6 ಎಸೆತ ಬಾಕಿ ಇರುವಂತೆಯೇ 5 ವಿಕೆಟ್ ಭರ್ಜರಿ ಗೆಲುವು ದಾಖಲಿಸಿತು.