ಕಳಪೆ ದಾಖಲೆ ಅಳಿಸಿ ಹಾಕಿದ್ದಕ್ಕೆ ಖುಷಿಯಿಂದ ಕುಣಿದಾಡಿದ RCB ಫ್ಯಾನ್ಸ್; ಏನದು ರೆಕಾರ್ಡ್?
RCB New Record: 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವು ಸಿಎಸ್‌ಕೆ ವಿರುದ್ಧ ಗೆದ್ದು ಹೊಸ ದಾಖಲೆ ಬರೆದಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಎಸ್‌ಕೆ ತಂಡವು ಆರ್‌ಸಿಬಿ ವಿರುದ್ಧ 6ನೇ ಸೋಲನ್ನು ಅನುಭವಿಸಿದೆ. ರೊಮಾರಿಯೋ ಶೆಫರ್ಡ್ ಅವರು ಆರ್‌ಸಿಬಿ ಪರ ಅತಿ ವೇಗದ ಅರ್ಧಶತಕವನ್ನು ಗಳಿಸಿದರು.

18ನೇ ಆವೃತ್ತಿಯಲ್ಲಿ ಸಿಎಸ್‌ಕೆ ವಿರುದ್ಧ ನಡೆದ 2 ಪಂದ್ಯಗಳಲ್ಲಿಯೂ ಆರ್‌ಸಿಬಿ ಜಯಭೇರಿ ಬಾರಿಸಿ ಹೊಸ ದಾಖಲೆ ಬರೆದಿದೆ. 2008ರ ಐಪಿಎಲ್ ಪ್ರಾರಂಭದಿಂದಲೂ ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಆವೃತ್ತಿವೊಂದರಲ್ಲಿ 2 ಪಂದ್ಯ ಗೆದ್ದಿರಲಿಲ್ಲ. ಅದನ್ನು ಈ ಬಾರಿ ಅಳಿಸಿ ಹಾಕಿದೆ.
ಚಿನ್ನಸ್ವಾಮಿಯಲ್ಲಿ ಚೆನ್ನೈಗೆ 6 ಸೋಲು
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿರುದ್ಧ ಸಿಎಸ್‌ಕೆ 6ನೇ ಸೋಲು ಕಂಡಿದೆ. ಆರ್‌ಸಿಬಿ ವಿರುದ್ಧ ಇಲ್ಲಿ 5 ಪಂದ್ಯಗಳಲ್ಲಿ ಗೆದ್ದಿದೆ. ಈ ಬಾರಿ ಆರಂಭದಿಂದಲೂ ಚೆನ್ನೈ ಕಳಪೆ ಪ್ರದರರ್ಶನದಿಂದ ಅಭಿಮಾನಿಗಳಲ್ಲಿ ನಿರಾಸೆಯನ್ನು ಮೂಡಿಸಿದೆ. 11 ಪಂದ್ಯಗಳಲ್ಲಿ ಕೇವಲ 2ರಲ್ಲಿ ಮಾತ್ರ ಗೆಲುವು ದಾಖಲಿಸಿದೆ
ಆರ್‌ಸಿಬಿ ಪರ ಅತಿ ವೇಗದ ಅರ್ಧಶತಕ
ಚೆನ್ನೈ ವಿರುದ್ಧ ಪಂದ್ಯದಲ್ಲಿ ಆರ್‌ಸಿಬಿಯ ರೊಮಾರಿಯೋ ಶೆಫರ್ಡ್ ಕೇವಲ 14 ಎಸೆತಗಳಲ್ಲೇ ಅರ್ಧಶತಕ ಬಾರಿಸಿದ್ದಾರೆ. ಇದು ಆರ್‌ಸಿಬಿ ಪರ ಅತಿ ವೇಗದ, ಐಪಿಎಲ್‌ನಲ್ಲಿ ಜಂಟಿ 2ನೇ ಅತಿ ವೇಗದ ಅರ್ಧಶತಕ.
ರಾಜಸ್ಥಾನದ ಯಶಸ್ವಿ ಜೈಸ್ವಾಲ್ 13 ಎಸೆತಕ್ಕೆ ಅರ್ಧಶತಕ ಬಾರಿಸಿದ್ದು ಈಗಲೂ ದಾಖಲೆ. ಉಳಿದಂತೆ ಕೆ.ಎಲ್.ರಾಹುಲ್, ಪ್ಯಾಟ್ ಕಮಿನ್ಸ್ ಕೂಡಾ 14 ಎಸೆತಗಳಲ್ಲೇ ಫಿಫ್ಟಿ ಸಿಡಿಸಿದ್ದಾರೆ. ಇನ್ನು, ಆರ್‌ಸಿಬಿ ಪರ ಅತಿ ವೇಗದ ಅರ್ಧಶತಕ ದಾಖಲೆ ಈ ವರೆಗೂ ಕ್ರಿಸ್ ಗೇಲ್ ಹೆಸರಲ್ಲಿತ್ತು. ಅವರು 2013ರಲ್ಲಿ ಪುಣೆ ವಿರುದ್ಧ 17 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು.
ಅಗ್ರಸ್ಥಾನಕ್ಕೆ ಏರಿದ ಆರ್‌ಸಿಬಿ
ಶನಿವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲ್ಲುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದೆ. ಚೆನ್ನೈ ತಂಡ ಕೊನೆಯ ಸ್ಥಾನದಲ್ಲಿದೆ. ಆರ್‌ಸಿಬಿ 11 ಪಂದ್ಯಗಳನ್ನು ಆಡಿದ್ದು 8ರಲ್ಲಿ ಗೆಲುವು ದಾಖಲಿಸಿ 16 ಅಂಕಗಳಿಂದ ಮೊದಲ ಸ್ಥಾನದಲ್ಲಿದೆ.