ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಆರ್‌ಸಿಬಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಎರಡು ರನ್‌ಗಳಿಂದ ಗೆಲುವು ಸಾಧಿಸಿದೆ. ಯಶ್ ದಯಾಳ್ ಅವರ ಅಮೋಘ ಬೌಲಿಂಗ್‌ನಿಂದಾಗಿ ಚೆನ್ನೈ ತಂಡ ಕೊನೆಯ ಓವರ್‌ನಲ್ಲಿ 15 ರನ್‌ಗಳ ಗುರಿ ತಲುಪಲು ವಿಫಲವಾಯಿತು.

ಬೆಂಗಳೂರು (ಮೇ.3): ಉದ್ಯಾನನಗರಿಯ ಚಿನ್ನಸ್ವಾಮಿ ಸ್ಟೇಡಿಯಂ ಲಾಸ್ಟ್‌ ಬಾಲ್‌ ಕ್ಲಾಸಿಕ್‌ಗೆ ಸಾಕ್ಷಿಯಾಗಿದೆ. ಕೊನೇ ಓವರ್‌ನಲ್ಲಿ 15 ರನ್‌ಗಳನ್ನು ರಕ್ಷಣೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾದ ವೇಗಿ ಯಶ್‌ ದಯಾಳ್‌, ಸಾಂಪ್ರದಾಯಿಕ ಎದುರಾಳಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ದ ಆರ್‌ಸಿಬಿಗೆ ಎರಡು ರನ್‌ಗಳ ರೋಚಕ ಗೆಲುವು ನೀಡಿದ್ದಾರೆ. ಅದರೊಂದಿಗೆ ಹಾಲಿ ಸೀಸನ್‌ನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್‌ ವಿರುದ್ಧ ಆಡಿದ ಎರಡೂ ಪಂದ್ಯಗಳಲ್ಲಿ ಆರ್‌ಸಿಬಿ ಗೆದ್ದಂತಾಗಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ತಂಡ 5 ವಿಕೆಟ್‌ಗೆ 213 ರನ್‌ ಪೇರಿಸಿದರೆ, ಕೊನೆಯ ಬಾಲ್‌ವರೆಗೂ ಗೆಲ್ಲುವ ಲಕ್ಷಣದಲ್ಲಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 5 ವಿಕೆಟ್‌ಗೆ 211 ರನ್‌ ಬಾರಿಸಲಷ್ಟೇ ಶಕ್ತವಾಗಿ ವೀರೋಚಿತ ಸೋಲು ಕಂಡಿತು. ಕೊನೇ ಓವರ್‌ನಲ್ಲಿ ಚೆನ್ನೈಗೆ 15 ರನ್‌ ಬೇಕಿದ್ದರೆ, 12 ರನ್‌ ಮಾತ್ರವೇ ನೀಡಿದ ಯಶ್‌ ದಯಾಳ್‌ ಆರ್‌ಸಿಬಿ ಪಾಲಿನ ಹೀರೋ ಎನಿಸಿದರು,

ಇಡೀ ಪಂದ್ಯದಲ್ಲಿ ಆರ್‌ಸಿಬಿ ಪಾಲಿಗೆ ಹೀರೋ ಆದವರು ಬ್ಯಾಟಿಂಗ್‌ನಲ್ಲಿ ರೊಮಾರಿಯೋ ಶೆಫರ್ಡ್‌ ಹಾಗೂ ಬೌಲಿಂಗ್‌ನಲ್ಲಿ ಸುಯಾಶ್‌ ಶರ್ಮ ಹಾಗೂ ಯಶ್‌ ದಯಾಳ್‌. ಬ್ಯಾಟಿಂಗ್‌ ವೇಳೆ ಗಯಾನಾದ ಬ್ಯಾಟ್ಸ್‌ಮನ್‌ ಶೆಫರ್ಡ್‌ ಆಡಿದ ಇನ್ನಿಂಗ್ಸ್‌ ಗೆಲುವಿನಲ್ಲಿ ಪ್ರಮುಖವಾಯಿತು.ಕೇವಲ 14 ಎಸೆತ ಎದುರಿಸಿದ ಶೆಫರ್ಡ್‌ 6 ಸಿಕ್ಸರ್‌, 4 ಬೌಂಡರಿಯಿಂದ 53 ರನ್‌ ಚಚ್ಚಿದ್ದರು.

ಬಳಿಕ ಬೌಲಿಂಗ್‌ನಲ್ಲಿ ಆರ್‌ಸಿಬಿ ಆರಂಭದಿಂದಲೂ ಚೆನ್ನೈ ಬ್ಯಾಟ್ಸ್‌ಮನ್‌ಗಳಿಂದ ಒತ್ತಡ ಎದುರಿಸಿದರೂ, ಸುಯಾಶ್‌ ಶರ್ಮ ಎಸೆದ 18ನೇ ಓವರ್‌ ಆರ್‌ಸಿಬಿ ಪಾಲಿಗೆ ಪ್ರಮುಖ ಎನಿಸಿತು. ಕೊನೆಯಲ್ಲಿ ಯಶ್‌ ದಯಾಳ್‌ ಸತತ 2ನೇ ವರ್ಷ ಕೊನೇ ಓವರ್‌ನಲ್ಲಿ ಆರ್‌ಸಿಬಿ ಪಾಲಿನ ಹೀರೋ ಆದರು. ಕೊನೇ ಓವರ್‌ನಲ್ಲಿ ಧೋನಿ ವಿಕೆಟ್‌ ಪಡೆದಿದ್ದು ಮಾತ್ರವಲ್ಲದೆ, ನೋಬಾಲ್‌ನಲ್ಲಿ ಒಂದು ಸಿಕ್ಸರ್‌ ಕೂಡ ಕೊಟ್ಟಿದ್ದರು. ಆದರೂ ಕೊನೇ ಮೂರು ಎಸೆತಗಳನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾದ ಯಶ್‌ ದಯಾಳ್‌ ಆರ್‌ಸಿಬಿಗೆ ಸ್ಮರಣೀಯ ಎನಿಸುವಂಥ ಗೆಲುವು ನೀಡಿದರು. 

ಕೊನೇ ಓವರ್‌ನಲ್ಲಿ ಚೆನ್ನೈ ಗೆಲುವಿಗೆ 15 ರನ್‌ ಬೇಕಿದ್ದವು.ಮೊದಲ ಎಸೆತದಲ್ಲಿ ಧೋನಿ 1 ರನ್‌ ಪಡೆದುಕೊಂಡರೆ, 2ನೇ ಎಸೆತದಲ್ಲಿ ಜಡೇಜಾ 1 ರನ್‌ಪಡೆದರು. ಮೂರನೇ ಎಸೆತದಲ್ಲಿ ಧೋನಿ ಎಲ್‌ಬಿಯಾಗಿ ಔಟ್‌ ಆಗಿದ್ದರು. ಇದರಿಂದಾಗಿ ಕೊನೇ ಮೂರು ಎಸೆತಗಳಲ್ಲಿ ಚೆನ್ನೈಗೆ 13 ರನ್‌ ಬೇಕಿದ್ದವು. ಹೊಸ ಬ್ಯಾಟ್ಸ್‌ಮನ್‌ ಆಗಿ ಕ್ರೀಸ್‌ಗೆ ಬಂದ ಶಿವಂ ದುಬೇ ಮೊದಲ ಎಸೆತವನ್ನೇ ಸಿಕ್ಸರ್‌ಗಟ್ಟಿದ್ದರು. ಆದರೆ, ಇದು ನೋಬಾಲ್‌ ಆಗಿತ್ತು. ಫ್ರೀ ಹಿಟ್‌ ಆಗಿ ಸಿಕ್ಕ ನಾಲ್ಕನೇ ಎಸೆತದಲ್ಲಿ ದುಬೇ 1 ರನ್‌ಪಡೆದರೆ, ರವೀಂದ್ರ ಜಡೇಜಾ ಮರು ಎಸೆತದಲ್ಲಿ 1 ರನ್‌ ಪಡೆದರು. ಇದರಿಂದಾಗಿ ಕೊನೇ ಎಸೆತದಲ್ಲಿ 4 ರನ್‌ ಬಾರಿಸುವ ಅನಿವಾರ್ಯತೆಗೆ ಚೆನ್ನೈ ಸಿಲುಕಿತ್ತು. ನಿಧಾನಗತಿಯಲ್ಲಿ ಲೋ ಫುಲ್‌ಟಾಸ್‌ ಹಾಗಕಿದ ಎಸೆತವನ್ನು ದುಬೇ ಲಾಂಗ್‌ ಆನ್‌ನಲ್ಲಿ ಡ್ರೈವ್‌ ಮಾಡಿ 1 ರನ್‌ ಪಡೆಯಲಷ್ಟೇ ಯಶಸ್ವಿಯಾದರು. ಇದರ ಬೆನ್ನಲ್ಲಿಯೇ ಆರ್‌ಸಿಬಿ ತಂಡದ ಸಂಭ್ರಮ ಮುಗಿಲುಮುಟ್ಟಿತ್ತು.