ಐಪಿಎಲ್ 2025: 20 ಕೋಟಿಗೂ ಹೆಚ್ಚು ಬೆಲೆ ಬಾಳುವ 5 ಆಟಗಾರರು!
ಈ ತಿಂಗಳ ಕೊನೆಯ ವಾರದಲ್ಲಿ ಮೆಗಾ ಹರಾಜು ನಡೆಯಲಿದೆ. ಇದಕ್ಕೂ ಮುನ್ನ, 10 ಐಪಿಎಲ್ ಫ್ರಾಂಚೈಸಿಗಳು ತಮ್ಮ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಮೆಗಾ ಹರಾಜಿನಲ್ಲಿ 20 ಕೋಟಿ ರೂ.ಗಿಂತ ಹೆಚ್ಚು ಮಾರಾಟವಾಗುವ ಐದು ಭಾರತೀಯ ಆಟಗಾರರ ಬಗ್ಗೆ ತಿಳಿದುಕೊಳ್ಳೋಣ.
ರಿಷಭ್ ಪಂತ್
2016ರಿಂದ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ಜೊತೆಗಿದ್ದರು. ಆದರೆ, ಐಪಿಎಲ್ 2025ರ ಮೊದಲು ಡೆಲ್ಲಿ ಫ್ರಾಂಚೈಸಿ ಅವರನ್ನು ಬಿಡುಗಡೆ ಮಾಡಿದೆ. ಮುಂಬರುವ ಐಪಿಎಲ್ ಆವೃತ್ತಿಗೆ ಉಳಿಸಿಕೊಂಡಿಲ್ಲ. ಹೀಗಾಗಿ ಪಂತ್ ಐಪಿಎಲ್ ಹರಾಜಿನಲ್ಲಿ ಭಾಗವಹಿಸಲಿದ್ದಾರೆ.
27 ವರ್ಷದ ಭಾರತೀಯ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಐಪಿಎಲ್ 2025 ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವ ದೊಡ್ಡ ಹೆಸರುಗಳಲ್ಲಿ ಒಬ್ಬರು. ಬ್ಯಾಟಿಂಗ್, ವಿಕೆಟ್ ಕೀಪಿಂಗ್ ಜೊತೆಗೆ ನಾಯಕತ್ವದಲ್ಲೂ ಅನುಭವ ಹೊಂದಿದ್ದಾರೆ. ಹೀಗಾಗಿ ಇತರೆ ತಂಡಗಳಿಗೆ ಉತ್ತಮ ಆಯ್ಕೆಯೂ ಹೌದು. ರಿಷಭ್ ಪಂತ್ ಐಪಿಎಲ್‌ನಲ್ಲಿ 3,284 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ, 18 ಅರ್ಧಶತಕಗಳಿವೆ.
ಅರ್ಶ್‌ದೀಪ್ ಸಿಂಗ್
ಈಗಿನ ಕಾಲದ ಉತ್ತಮ ಟಿ20 ಬೌಲರ್‌ಗಳಲ್ಲಿ ಅರ್ಶ್‌ದೀಪ್ ಸಿಂಗ್ ಒಬ್ಬರು. ಹೊಸ ಚೆಂಡಿನ ಜೊತೆಗೆ ಡೆತ್ ಓವರ್‌ಗಳಲ್ಲೂ ಚೆನ್ನಾಗಿ ಆಡಬಲ್ಲರು. 2024ರ ಟಿ20 ವಿಶ್ವಕಪ್‌ನಲ್ಲಿ ಅರ್ಶ್‌ದೀಪ್ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್.
ಇಲ್ಲಿಯವರೆಗೆ ಆಡಿರುವ ಐಪಿಎಲ್‌ಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಭಾರತ ತಂಡಕ್ಕೆ ಬಂದ ಕಡಿಮೆ ಅವಧಿಯಲ್ಲೇ ಸ್ಟಾರ್ ಬೌಲರ್ ಆಗಿ ಬೆಳೆದಿದ್ದಾರೆ. ಪಂಜಾಬ್ ಕಿಂಗ್ಸ್ ಅರ್ಶ್‌ದೀಪ್ ಸಿಂಗ್ ಅನ್ನು ಬಿಡುಗಡೆ ಮಾಡಿದ್ದರೂ, ಈ ಅಂಕಿಅಂಶಗಳಿಂದ ಅರ್ಶ್‌ದೀಪ್ ಸಿಂಗ್ ಮೇಲೆ ಹಲವು ತಂಡಗಳು ಕಣ್ಣಿಟ್ಟಿವೆ.
ಕೆ.ಎಲ್. ರಾಹುಲ್
ಭಾರತದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಕೂಡ ಮುಂಬರುವ ಐಪಿಎಲ್ 2025ರ ಹರಾಜಿನಲ್ಲಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ (LSG) ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿರುವ ಕೆ.ಎಲ್. ರಾಹುಲ್ ಅವರನ್ನು ಲಕ್ನೋ ಫ್ರಾಂಚೈಸಿ ಐಪಿಎಲ್ 2025ಕ್ಕೆ ಉಳಿಸಿಕೊಂಡಿಲ್ಲ.
ಲಕ್ನೋ ತಂಡ ಬಿಡುಗಡೆ ಮಾಡಿದ್ದರಿಂದ ಕೆ.ಎಲ್. ರಾಹುಲ್ ಹರಾಜಿಗೆ ಬಂದಿದ್ದಾರೆ. 32 ವರ್ಷದ ಟಾಪ್ ಆರ್ಡರ್ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಐಪಿಎಲ್‌ನಲ್ಲಿ 132 ಪಂದ್ಯಗಳನ್ನಾಡಿ 4683 ರನ್ ಗಳಿಸಿದ್ದಾರೆ. ರಾಹುಲ್ ನಾಯಕತ್ವದಲ್ಲಿ ಲಕ್ನೋ ತಂಡ ಉತ್ತಮ ಪ್ರದರ್ಶನ ನೀಡಿದೆ. ಹೀಗಾಗಿ ಅವರ ನಾಯಕತ್ವಕ್ಕೂ ಬೇಡಿಕೆಯಿದೆ.
ಶ್ರೇಯಸ್ ಅಯ್ಯರ್
ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) 2024ರಲ್ಲಿ ಐಪಿಎಲ್ ಗೆದ್ದಿತು. ಆದರೂ ಅಯ್ಯರ್ ಅವರನ್ನು ಕೆಕೆಆರ್ ಉಳಿಸಿಕೊಂಡಿಲ್ಲ. ಎರಡು ಐಪಿಎಲ್ ತಂಡಗಳನ್ನು ಫೈನಲ್‌ಗೆ ಕರೆದೊಯ್ದ ಏಕೈಕ ನಾಯಕ ಅಯ್ಯರ್. ಇದಕ್ಕೂ ಮೊದಲು, ಅವರು ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಫೈನಲ್‌ಗೆ ಕರೆದೊಯ್ದಿದ್ದರು.
ಶ್ರೇಯಸ್ ಅಯ್ಯರ್ ಉತ್ತಮ ಬ್ಯಾಟಿಂಗ್ ಜೊತೆಗೆ ಉತ್ತಮ ನಾಯಕತ್ವದಿಂದಾಗಿ ಅವರಿಗೆ ಬೇಡಿಕೆಯಿದೆ. ಮುಂಬೈ ಮೂಲದ ಬಲಗೈ ಬ್ಯಾಟ್ಸ್‌ಮನ್ ಮಧ್ಯಮ ಕ್ರಮಾಂಕದಲ್ಲಿ ಅದ್ಭುತ ಬ್ಯಾಟಿಂಗ್‌ಗೆ ಹೆಸರುವಾಸಿ. ಐಪಿಎಲ್ ಹರಾಜಿನಲ್ಲಿ ಅವರನ್ನು ಪಡೆಯಲು ತಂಡಗಳು ಪೈಪೋಟಿ ನಡೆಸುವ ಸಾಧ್ಯತೆಯಿದೆ. ಶ್ರೇಯಸ್ ಅಯ್ಯರ್ ಐಪಿಎಲ್‌ನಲ್ಲಿ 3127 ರನ್ ಗಳಿಸಿದ್ದಾರೆ. ಇದರಲ್ಲಿ 21 ಅರ್ಧಶತಕಗಳಿವೆ.
ಇಶಾನ್ ಕಿಶನ್
ಐಪಿಎಲ್ 2025ರ ಮೆಗಾ ಹರಾಜಿಗೆ ಮುನ್ನ ಮುಂಬೈ ಇಂಡಿಯನ್ಸ್ ಬಿಡುಗಡೆ ಮಾಡಿರುವ ಆಟಗಾರರಲ್ಲಿ ಭಾರತದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಕೂಡ ಇದ್ದಾರೆ. ಹೀಗಾಗಿ ಅವರು ಹರಾಜಿಗೆ ಬಂದಿದ್ದಾರೆ. ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯ ಟಾಪ್ ಆರ್ಡರ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಮುಂಬೈಗೆ ಭರ್ಜರಿ ಗೆಲುವುಗಳನ್ನು ತಂದುಕೊಟ್ಟಿದ್ದಾರೆ.
ಕೆಲವು ಎಸೆತಗಳಲ್ಲೇ ಪಂದ್ಯದ ಚಿತ್ರಣ ಬದಲಿಸಬಲ್ಲ ಸಾಮರ್ಥ್ಯವಿರುವ ಆಟಗಾರ. ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ಮುಂಬೈ ಅವರನ್ನು 15.25 ಕೋಟಿ ರೂ.ಗೆ ಖರೀದಿಸಿತ್ತು. ಅವರನ್ನು ಖರೀದಿಸಲು ಹಲವು ತಂಡಗಳು ಪೈಪೋಟಿ ನಡೆಸಿದ್ದವು. ಈಗ ಐಪಿಎಲ್ 2025ಕ್ಕೆ ಮುನ್ನ ಮುಂಬೈ ಇಂಡಿಯನ್ಸ್ ಇಶಾನ್ ಕಿಶನ್ ಅವರನ್ನು ಬಿಡುಗಡೆ ಮಾಡಿರುವುದರಿಂದ, ಅವರಿಗಾಗಿ ಹರಾಜಿನಲ್ಲಿ ಬಹುತೇಕ ಎಲ್ಲಾ ಫ್ರಾಂಚೈಸಿಗಳು ಪೈಪೋಟಿ ನಡೆಸುವ ಸಾಧ್ಯತೆಯಿದೆ. ಕಳೆದ ಋತುವಿನಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ 14 ಪಂದ್ಯಗಳಲ್ಲಿ 320 ರನ್ ಗಳಿಸಿದ್ದರು. ಒಟ್ಟಾರೆಯಾಗಿ ಐಪಿಎಲ್‌ನಲ್ಲಿ ಇಶಾನ್ 2644 ರನ್ ಗಳಿಸಿದ್ದಾರೆ. ಇದರಲ್ಲಿ 16 ಅರ್ಧಶತಕಗಳಿವೆ.