IPL 2024 ಆರಂಭ ಯಾವಾಗ..? ಇಲ್ಲಿದೆ ನೋಡಿ ಐಪಿಎಲ್ ಚೇರ್‌ಮನ್ ಕೊಟ್ಟ ಅಧಿಕೃತ ಅಪ್‌ಡೇಟ್
ಬೆಂಗಳೂರು: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಯಾವಾಗಿನಿಂದ ಆರಂಭವಾಗುತ್ತದೆ ಎಂದು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಾ ನಿಂತಿದ್ದಾರೆ. ಈ ಕುರಿತಂತೆ ಐಪಿಎಲ್ ಚೇರ್‌ಮನ್ ಅರುಣ್ ಧುಮಾಲ್ ಅಧಿಕೃತ ಮಾಹಿತಿ ನೀಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಜಗತ್ತಿನ ಅತ್ಯಂತ ಶ್ರೀಮಂತ ಟಿ20 ಲೀಗ್ ಹಾಗೂ ಜನಪ್ರಿಯ ಚುಟುಕು ಕ್ರಿಕೆಟ್ ಟೂರ್ನಿ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ 16 ಯಶಸ್ವಿ ಆವೃತ್ತಿಗಳನ್ನು ಮುಗಿಸಿ 17ನೇ ಆವೃತ್ತಿಗೆ ಸಜ್ಜಾಗಿದೆ.
ಈಗಾಗಲೇ 2024ರ ಐಪಿಎಲ್ ಟೂರ್ನಿಗೂ ಮುನ್ನ ಆಟಗಾರರ ಹರಾಜು ಕೂಡಾ ಮುಕ್ತಾಯವಾಗಿದ್ದು, ಎಲ್ಲಾ 10 ಫ್ರಾಂಚೈಸಿಗಳು ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಕಪ್ ಗೆಲ್ಲಲು ರಣತಂತ್ರ ಹೆಣೆಯುತ್ತಿವೆ.
ಹೀಗಿರುವಾಗಲೇ 2024ರ ಐಪಿಎಲ್ ಟೂರ್ನಿ ಯಾವಾಗಿನಿಂದ ಆರಂಭವಾಗುತ್ತದೆ ಎನ್ನುವ ಕುತೂಹಲಕ್ಕೆ ಐಪಿಎಲ್ ಚೇರ್‌ಮನ್ ಅರುಣ್ ಧುಮಾಲ್ ತೆರೆ ಎಳೆದಿದ್ದಾರೆ. ಮಾರ್ಚ್ 22ರಿಂದ ಐಪಿಎಲ್ ಟೂರ್ನಿಗೆ ಚಾಲನೆ ಸಿಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಇದೇ ವೇಳೆ ಭಾರತದಲ್ಲಿ ಲೋಕಸಭಾ ಚುನಾವಣೆ ಕೂಡಾ ನಡೆಯುವ ಸಾಧ್ಯತೆಯಿದೆ. ಇದರ ಹೊರತಾಗಿಯೂ ಸಂಪೂರ್ಣ ಐಪಿಎಲ್ ಟೂರ್ನಿಯನ್ನು ಭಾರತದಲ್ಲೇ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ನಾವು ಮುಂಬರುವ ಮಾರ್ಚ್ 22ರಿಂದ ಐಪಿಎಲ್ ಟೂರ್ನಿಯನ್ನು ಆಯೋಜಿಸಲು ಎದುರು ನೋಡುತ್ತಿದ್ದೇವೆ. ನಾವು ಸರ್ಕಾರದ ಏಜೆನ್ಸಿಗಳ ಜತೆಯಾಗಿಯೇ ಸಾಗುತ್ತಿದ್ದೇವೆ. ನಾವು ಮೊದಲಿಗೆ ಆರಂಭಿಕ ಹಂತದ ಐಪಿಎಲ್ ಟೂರ್ನಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಿದ್ದೇವೆ ಎಂದು ಪಿಟಿಐಗೆ ನೀಡಿದ ಪ್ರತಿಕ್ರಿಯೆಯಲ್ಲಿ ಅರುಣ್ ಧುಮಾಲ್ ತಿಳಿಸಿದ್ದಾರೆ.
ನಾವು ಐಪಿಎಲ್ ಟೂರ್ನಿಯ ಮೊದಲ 15 ದಿನದ ವೇಳಾಪಟ್ಟಿಯನ್ನು ರಿಲೀಸ್ ಮಾಡಲಿದ್ದೇವೆ. ಇದಾದ ಬಳಿಕ ಲೋಕಸಭಾ ಚುನಾವಣೆಯ ಘೋಷಣೆಯ ಬಳಿಕ ಇನ್ನುಳಿದ ಐಪಿಎಲ್ ವೇಳಾಪಟ್ಟಿ ರಿಲೀಸ್ ಮಾಡುತ್ತೇವೆ ಎಂದು ಅರುಣ್ ಧುಮಾಲ್ ಖಚಿತಪಡಿಸಿದ್ದಾರೆ.
ಇನ್ನು ಇದೇ ವೇಳೆ ಭಾರತದಲ್ಲಿ ಲೋಕಸಭಾ ಚುನಾವಣೆ ಕೂಡಾ ನಡೆಯುವ ಸಾಧ್ಯತೆಯಿದೆ. ಇದರ ಹೊರತಾಗಿಯೂ ಸಂಪೂರ್ಣ ಐಪಿಎಲ್ ಟೂರ್ನಿಯನ್ನು ಭಾರತದಲ್ಲೇ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಮೊದಲು 2009ರಲ್ಲಿ ಮಾತ್ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಂಪೂರ್ಣ ಐಪಿಎಲ್ ಟೂರ್ನಿಯು ಭಾರತದಾಚೆ ಅಂದರೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿತ್ತು.
ಇನ್ನು 2014ರ ಐಪಿಎಲ್ ಟೂರ್ನಿಯು ಲೋಕಸಭಾ ಚುನಾವಣೆಯ ಹೊರತಾಗಿಯೂ ಅರ್ಧಭಾಗ ಮಾತ್ರ ದುಬೈನಲ್ಲಿ ನಡೆದಿತ್ತು. ಇನ್ನರ್ಧ ಭಾಗ ಭಾರತವೇ ಆತಿಥ್ಯ ವಹಿಸಿತ್ತು.
ಐಪಿಎಲ್ ಮುಕ್ತಾಯದ ಬೆನ್ನಲ್ಲೇ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಆಯೋಜನೆಗೊಳ್ಳುವ ಹಿನ್ನೆಲೆಯಲ್ಲಿ ಐಪಿಎಲ್ ಫೈನಲ್ ಪಂದ್ಯವು ಮೇ 26ರಂದು ನಡೆಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.