IPL 2022 Tickets: ಮೈದಾನದಲ್ಲಿ ಪಂದ್ಯ ವೀಕ್ಷಿಸಲು ಟಿಕೆಟ್ ಖರೀದಿ ಮಾಡುವುದು ಎಲ್ಲಿ..? ಬೆಲೆ ಎಷ್ಟು..?
ಬೆಂಗಳೂರು: ಬಹುನಿರೀಕ್ಷಿತ 2022ನೇ ಐಪಿಎಲ್ (IPL 2022) ಟೂರ್ನಿಗೆ ಕ್ಷಣಗಣನೆ ಆರಂಭವಾಗಿದ್ದು, ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. 2019ರ ಬಳಿಕ ಇದೇ ಮೊದಲ ಬಾರಿಗೆ ಪ್ರೇಕ್ಷಕರು ಮೈದಾನದಲ್ಲಿ ಪಂದ್ಯ ವೀಕ್ಷಿಸಲು ಬಿಸಿಸಿಐ (BCCI) ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಮೈದಾನಕ್ಕೆ ತೆರಳಿ ಪಂದ್ಯ ವೀಕ್ಷಿಸಬೇಕಾದರೆ ಟಿಕೆಟ್ ಎಲ್ಲಿ ಸಿಗುತ್ತದೆ? ಟಿಕೆಟ್ ಬೆಲೆ ಎಷ್ಟು ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
KKR vs CSK
15ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮಾರ್ಚ್ 26ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಸೆಣಸಾಡಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಮುಂಬೈನ ವಾಂಖೆಡೆ ಮೈದಾನ ಆತಿಥ್ಯವನ್ನು ವಹಿಸಲಿದೆ.
ಮುಂಬೈನಲ್ಲಿ ಲೀಗ್ ಪಂದ್ಯಗಳು
ದೇಶದಲ್ಲಿ ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ, ಈ ಬಾರಿ ಮುಂಬೈ ಹಾಗೂ ಪುಣೆಯ ಒಟ್ಟು 4 ಸ್ಟೇಡಿಯಂಗಳಲ್ಲಿ ಐಪಿಎಲ್ ಲೀಗ್ ಹಂತದ ಪಂದ್ಯಗಳನ್ನು ಆಯೋಜಿಸಿದೆ. ಇದರ ಜತೆಗೆ 2019ರ ಬಳಿಕ ಮೊದಲ ಬಾರಿಗೆ ಪ್ರೇಕ್ಷಕರು ಮೈದಾನ ಪ್ರವೇಶಕ್ಕೆ ಬಿಸಿಸಿಐ ಅನುವು ಮಾಡಿಕೊಟ್ಟಿದೆ.
4 ಸ್ಟೇಡಿಯಂನಲ್ಲಿ ಲೀಗ್ ಪಂದ್ಯಗಳು
ಈ ಬಾರಿಯ ಐಪಿಎಲ್ ಲೀಗ್ ಹಂತದ ಪಂದ್ಯಗಳು ಮುಂಬೈನ ವಾಂಖೆಡೆ ಸ್ಟೇಡಿಯಂ, ಬ್ರಾಬೋರ್ನ್ ಸ್ಟೇಡಿಯಂ, ಡಿ.ವೈ. ಪಾಟೀಲ್ ಸ್ಟೇಡಿಯಂ ಹಾಗೂ ಪುಣೆಯಲ್ಲಿರುವ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಸ್ಟೇಡಿಯಂನಲ್ಲಿ ಪಂದ್ಯಗಳು ಜರುಗಲಿವೆ.
25% ಪ್ರೇಕ್ಷಕರಿಗೆ ಅವಕಾಶ
ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯಗಳಿಗೆ 25% ಪ್ರೇಕ್ಷಕರು ಮೈದಾನ ಪ್ರವೇಶಿಸಲು ಮಹಾರಾಷ್ಟ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಮಹಾರಾಷ್ಟ್ರದಲ್ಲಿ ಕೋವಿಡ್ ಪರಿಸ್ಥಿತಿಯನ್ನು ಆದರಿಸಿ ಸೀಟ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರವು ಚಿಂತನೆ ನಡೆಸಿದೆ.
bookmyshow.com ಮೂಲಕ ಟಿಕೆಟ್ ಖರೀದಿ
ಟಿಕೆಟ್ ಖರೀದಿ ಹೇಗೆ..?
ಐಪಿಎಲ್ ಕ್ರಿಕೆಟ್ ಅಭಿಮಾನಿಗಳು ಮೈದಾನಕ್ಕೆ ತೆರಳಿ ಪಂದ್ಯ ವೀಕ್ಷಿಸಬೇಕಿದ್ದರೇ, ಆನ್‌ಲೈನ್‌ನಲ್ಲಿ bookmyshow.com ಮೂಲಕ ಟಿಕೆಟ್ ಖರೀದಿಸಬಹುದಾಗಿದೆ. ಒಬ್ಬರು ಒಂದು ಪಂದ್ಯಕ್ಕೆ ಒಂದು ಟಿಕೆಟ್ ಮಾತ್ರ ಖರೀದಿಸಬಹುದಾಗಿದೆ.
ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರ
ಇನ್ನು 18 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರವನ್ನು ಸ್ಟೇಡಿಯಂ ಪ್ರವೇಶಿಸುವ ಮುನ್ನ ಸಿಬ್ಬಂದಿಗಳಿಗೆ ತೋರಿಸಬೇಕು. ಹಾಗೂ ಎರಡು ವರ್ಷ ಮೇಲ್ಪಟ್ಟ ಮಕ್ಕಳು ಟಿಕೆಟ್ ಖರೀದಿಸಿ ಮೈದಾನಕ್ಕೆ ಪ್ರವೇಶ ಪಡೆಯಬೇಕು.
ಮಧ್ಯಾಹ್ನದ ಪಂದ್ಯಗಳು 3.30ರಿಂದ ಆರಂಭ
ಐಪಿಎಲ್ ಪಂದ್ಯಗಳು ಆರಂಭಕ್ಕೂ ಎರಡರಿಂದ ಎರಡೂವರೆ ಗಂಟೆ ಮುಂಚಿತವಾಗಿಯೇ ಮೈದಾನದಲ್ಲಿ ಗೇಟ್ ಓಪನ್ ಆಗಿರಲಿವೆ. ಮಧ್ಯಾಹ್ನದ ಪಂದ್ಯಗಳು 3.30ರಿಂದ ಆರಂಭವಾದರೆ, ಸಂಜೆಯ ಪಂದ್ಯಗಳು ಭಾರತೀಯ ಕಾಲಮಾನ 7.30ರಿಂದ ಆರಂಭವಾಗಲಿವೆ.
ಒಂದೊಂದು ರೀತಿಯ ಟಿಕೆಟ್ ದರ
ಇನ್ನು ಐಪಿಎಲ್ ಪಂದ್ಯಗಳ ವೀಕ್ಷಣೆಗೆ ಒಂದೊಂದು ಸ್ಟೇಡಿಯಂಗೆ ಒಂದೊಂದು ರೀತಿಯ ಟಿಕೆಟ್ ದರ ನಿಗದಿಯಾಗಿದ್ದು, ಮುಂಬೈನ ವಾಂಖಡೆ ಸ್ಟೇಡಿಯಂನಲ್ಲಿ 2,500 ರಿಂದ 4,000 ರುಪಾಯಿಗಳ ವರೆಗಿನ ಟಿಕೆಟ್‌ಗಳು ಲಭ್ಯವಿವೆ. ಇನ್ನು ಬ್ರಾಬೋರ್ನ್ ಸ್ಟೇಡಿಯಂನಲ್ಲಿ ಟಿಕೆಟ್ ಬೆಲೆ 3000 ರುಪಾಯಿಗಳಿಂದ 3,500 ರುಪಾಯಿ.
ಡಿ.ವೈ. ಪಾಟೀಲ್ ಸ್ಟೇಡಿಯಂನಲ್ಲಿ 800 ರುಪಾಯಿಗಳಿಂದ 2,500 ರುಪಾಯಿಗಳ ವರೆಗಿನ ಟಿಕೆಟ್‌ಗಳು ಲಭ್ಯ
ನವಿ ಮುಂಬೈನಲ್ಲಿರುವ ಡಿ.ವೈ. ಪಾಟೀಲ್ ಸ್ಟೇಡಿಯಂನಲ್ಲಿ 800 ರುಪಾಯಿಗಳಿಂದ 2,500 ರುಪಾಯಿಗಳ ವರೆಗಿನ ಟಿಕೆಟ್‌ಗಳು ಲಭ್ಯವಿದ್ದರೆ, ಪುಣೆಯಲ್ಲಿನ ಎಂಸಿಎ ಸ್ಟೇಡಿಯಂನಲ್ಲಿ 1,000 ರುಪಾಯಿಗಳಿಂದ 8,000 ರುಪಾಯಿಗಳವರೆಗಿನ ಟಿಕೆಟ್‌ಗಳು ಲಭ್ಯವಿವೆ.