IPL Awards 2022: ಉಮ್ರಾನ್ ಮಲಿಕ್ ಉದಯೋನ್ಮುಖ ಆಟಗಾರ, ಮತ್ಯಾರಿಗೆ ಸಿಕ್ತು ಯಾವೆಲ್ಲಾ ಅವಾರ್ಡ್?
ಬೆಂಗಳೂರು: 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ (Rajasthan Royals) ತಂಡವನ್ನು ಮಣಿಸಿದ ಹಾರ್ದಿಕ್ ಪಾಂಡ್ಯ (Hardik Pandya) ನೇತೃತ್ವದ ಗುಜರಾತ್ ಟೈಟಾನ್ಸ್ (Gujarat Titans) ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಚೊಚ್ಚಲ ಪ್ರಯತ್ನದಲ್ಲೇ ಹಾರ್ದಿಕ್ ಪಾಂಡ್ಯ ಐಪಿಎಲ್‌ನಲ್ಲಿ ತಮ್ಮ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಫೈನಲ್‌ನಲ್ಲಿ ನಾಯಕನ ಆಟವನ್ನು ಪ್ರದರ್ಶಿಸಿದ ಹಾರ್ದಿಕ್ ಪಾಂಡ್ಯ, ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.ಕಳೆದೆರಡು ತಿಂಗಳು ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದ್ದ ಐಪಿಎಲ್ ಟೂರ್ನಿಗೆ ಅಧಿಕೃತ ತೆರೆ ಬಿದ್ದಿದೆ. ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿದ ಆಟಗಾರರು ಹಾಗೂ ತಂಡಗಳು ಕೆಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಯಾವ ಆಟಗಾರರು ಯಾವೆಲ್ಲಾ ಪ್ರಶಸ್ತಿಗಳನ್ನು ಚಾಚಿಕೊಂಡರು ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ಉದಯೋನ್ಮುಖ ಆಟಗಾರ ಪ್ರಶಸ್ತಿ: ಉಮ್ರಾನ್ ಮಲಿಕ್
ಜಮ್ಮು-ಕಾಶ್ಮೀರ ಮೂಲದ ಯುವ ವೇಗಿ ಉಮ್ರಾನ್ ಮಲಿಕ್, ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಮಾರಕ ದಾಳಿ ನಡೆಸುವ ಮೂಲಕ ಗಮನ ಸೆಳೆದಿದ್ದು, 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಉದಯೋನ್ಮುಖ ಆಟಗಾರ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಉಮ್ರಾನ್ ಮಲಿಕ್ 22 ವಿಕೆಟ್ ಕಬಳಿಸಿ ಮಿಂಚಿದ್ದರು. ಉಮ್ರಾನ್ ಮಲಿಕ್ 10 ಲಕ್ಷ ರುಪಾಯಿ ನಗದು ಬಹುಮಾನ ಪಡೆದರು.
ಆರೆಂಜ್ ಕ್ಯಾಪ್ ಜಯಿಸಿದ ಜೋಸ್ ಬಟ್ಲರ್
15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಭರ್ಜರಿ 4 ಶತಕ ಸಹಿತ ಒಟ್ಟಾರೆ 863 ರನ್ ಸಿಡಿಸುವ ಮೂಲಕ ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು.
(photo source- iplt20.com)
ಯುಜುವೇಂದ್ರ ಚಹಲ್ ತೆಕ್ಕೆಗೆ ಸೇರಿದ ಪರ್ಪಲ್ ಕ್ಯಾಪ್
ರಾಜಸ್ಥಾನ ರಾಯಲ್ಸ್ ತಂಡದ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಲ್ 17 ಪಂದ್ಯಗಳನ್ನಾಡಿ 27 ವಿಕೆಟ್ ಕಬಳಿಸುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮುವುದರೊಂದಿಗೆ ಪರ್ಪಲ್ ಕ್ಯಾಪ್ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
(photo source- iplt20.com)
ಫೇರ್ ಪ್ಲೇ ಅವಾರ್ಡ್ ಹಂಚಿಕೊಂಡ ರಾಜಸ್ಥಾನ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್
ಐಪಿಎಲ್ ಟೂರ್ನಿಯಲ್ಲಿ ಕ್ರೀಡಾಸ್ಪೂರ್ತಿಯನ್ನು ಎತ್ತಿಹಿಡಿದಿದ್ದಕ್ಕೆ ನೀಡಲಾಗುವ ಫೇರ್ ಪ್ಲೇ ಪ್ರಶಸ್ತಿಗೆ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಹಾಗೂ ರನ್ನರ್ ಅಪ್ ರಾಜಸ್ಥಾನ ರಾಯಲ್ಸ್ ಜಂಟಿಯಾಗಿ ಹಂಚಿಕೊಂಡಿವೆ.
Image credit: PTI
ಮೋಸ್ಟ್ ವ್ಯಾಲ್ಯೂಯೇಬಲ್ ಆಟಗಾರ ಜೋಸ್ ಬಟ್ಲರ್
ಇಂಗ್ಲೆಂಡ್ ಮೂಲದ ಜೋಸ್ ಬಟ್ಲರ್ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಫೈನಲ್‌ಗೇರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು. ಅದರಲ್ಲೂ ಆರ್‌ಸಿಬಿ ಎದುರಿನ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸಮಯೋಚಿತ ಶತಕ ಸಿಡಿಸುವ ಮೂಲಕ ರಾಯಲ್ಸ್ ತಂಡವನ್ನು ಪ್ರಶಸ್ತಿ ಸುತ್ತಿಗೆ ಲಗ್ಗೆಯಿಡುವಂತೆ ಮಾಡಿದ್ದರು. ಇದೀಗ ಬಟ್ಲರ್ ಈ ಬಾರಿಯ ಐಪಿಎಲ್ ಟೂರ್ನಿಯ ಅತ್ಯಂತ ಅಮೂಲ್ಯ ಆಟಗಾರನಾಗಿ ಹೊರಹೊಮ್ಮಿದ್ದಾರೆ.
Image credit: PTI
ಸೂಪರ್ ಸ್ಟ್ರೈಕರ್ ಆಫ್ ದ ಸೀಸನ್: ಟಾಟಾ ಪಂಚ್ ಕಾರು ಗೆದ್ದ ದಿನೇಶ್ ಕಾರ್ತಿಕ್
15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ 183.33ರ ಬ್ಯಾಟಿಂಗ್ ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸುವ ಮೂಲಕ ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್ ಪ್ರಶಸ್ತಿಗೆ ಪಾತ್ರರಾದರು. ಇದರೊಂದಿಗೆ ಟಾಟಾ ಪಂಚ್ ಕಾರು ದಿನೇಶ್ ಕಾರ್ತಿಕ್ ಪಾಲಾಯಿತು.