IPL 2022: DRS, ಸೂಪರ್ ಓವರ್ ಸೇರಿದಂತೆ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಮಹತ್ವದ ಬದಲಾವಣೆ..!
ಬೆಂಗಳೂರು: ಬಹುನಿರೀಕ್ಷಿತ 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಎನಿಸಿರುವ ಐಪಿಎಲ್ ಟೂರ್ನಿಯನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಹೀಗಿರುವಾಗಲೇ ಮುಂಬರುವ ಐಪಿಎಲ್ ಟೂರ್ನಿಯ ಕುರಿತಂತೆ ಬಿಸಿಸಿಐ (BCCI) ಮಹತ್ವದ ಬದಲಾವಣೆ ಮಾಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ನಿಯಮಾವಳಿಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲು ಮುಂದಾಗಿದೆ. ನಿಯಮಗಳ ಬದಲಾವಣೆಯಿಂದ ಕ್ರಿಕೆಟ್ ಮತ್ತಷ್ಟು ರೋಚಕತೆಯಿಂದ ಕೂಡಿರುವ ಸಾಧ್ಯತೆಯಿದೆ.
KKR vs CSK
2022ನೇ ಸಾಲಿನ ಐಪಿಎಲ್ ಟೂರ್ನಿಯು ಮಾರ್ಚ್ 26ರಿಂದ ಆರಂಭವಾಗಲಿದ್ದು, ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರನ್ನರ್ ಅಪ್ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿವೆ.
ಈ ಬಾರಿಯ ಐಪಿಎಲ್ ಟೂರ್ನಿಗೆ ಹೊಸದಾಗಿ ಗುಜರಾತ್ ಟೈಟಾನ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಗಳು ಸೇರ್ಪಡೆಯಾಗಿರುವುದರಿಂದ ಒಟ್ಟು ಹತ್ತು ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ. ಈ ಬಾರಿಯ ಟೂರ್ನಿಯಲ್ಲಿ 4 ಪ್ಲೇ ಆಫ್ ಪಂದ್ಯಗಳು ಸೇರಿದಂತೆ ಒಟ್ಟು 74 ಪಂದ್ಯಗಳು ನಡೆಯಲಿವೆ.
ಈ ಬಾರಿಯ ಐಪಿಎಲ್ ಟೂರ್ನಿಯ ಮಹತ್ವದ ಬದಲಾವಣೆಗಳ ಪೈಕಿ ಡಿಆರ್‌ಎಸ್ ನಿಯಮದ ಕುರಿತಂತೆ ಬಿಸಿಸಿಐ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದೆ. ಈ ಮೊದಲು ತಂಡವೊಂದು ಇನಿಂಗ್ಸ್ ಒಂದರಲ್ಲಿ ಕೇವಲ ಒಂದು ಡಿಆರ್‌ಎಸ್ ಪಡೆಯಲು ಅವಕಾಶವಿತ್ತು. ಆದರೆ ಈಗ ಇನಿಂಗ್ಸ್‌ವೊಂದರಲ್ಲಿ ತಂಡಕ್ಕೆ ಎರಡು ಡಿಆರ್‌ಎಸ್ ಪಡೆಯಲು ಬಿಸಿಸಿಐ ಅವಕಾಶ ನೀಡಲು ಮುಂದಾಗಿದೆ.
ಇನ್ನು, ಪಂದ್ಯದ ವೇಳೆ ಬ್ಯಾಟರ್ ಕ್ಯಾಚ್ ನೀಡಿ ಔಟಾದಾಗ ಹೊಸದಾಗಿ ಕ್ರೀಸ್‌ಗಿಳಿಯುವ ಆಟಗಾರನೇ ಸ್ಟ್ರೈಕ್ ಪಡೆಯಬೇಕು. ಓವರ್‌ನ ಕೊನೆ ಎಸೆತವಾಗಿದ್ದರೆ ಮಾತ್ರ ಸ್ಟ್ರೈಕ್ ಬದಲಾವಣೆಗೆ ಅವಕಾಶವಿರಲಿದೆ ಎಂದು ಬಿಸಿಸಿಐ ತಿಳಿಸಿದ್ದಾಗಿ ವರದಿಯಾಗಿದೆ.
ಇನ್ನು ಪ್ಲೇ-ಆಫ್ ಇಲ್ಲವೇ ಫೈನಲ್ ಪಂದ್ಯವು ಟೈ ಆಗಿ ನಿಗದಿತ ಅವಧಿಯೊಳಗೆ ಸೂಪರ್ ಓವರ್‌ನಲ್ಲಿ ಫಲಿತಾಂಶ ಹೊರಬೀಳದಿದ್ದರೆ ಲೀಗ್ ಅಂಕಪಟ್ಟಿಯಲ್ಲಿ ಗಳಿಸಿದ ಸ್ಥಾನಗಳ ಮೇಲೆ ವಿಜೇತರನ್ನು ನಿರ್ಧರಿಸಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ.