IPL 2021 ರೋಚಕ ಗೆಲುವು ಸಾಧಿಸಿದ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್‌ಗೆ ಶಾಕ್..!
ದುಬೈ: ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ 14ನೇ ಆವೃತ್ತಿಯ ಐಪಿಎಲ್(IPL 2021) ಟೂರ್ನಿಯ 32ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್(Punjab Kings) ಎದುರು ರಾಜಸ್ಥಾನ ರಾಯಲ್ಸ್(Rajasthan Royals) ತಂಡವು 2 ರನ್‌ಗಳ ರೋಚಕ ಜಯ ಸಾಧಿಸಿದೆ. ಯುವ ವೇಗಿ ಕಾರ್ತಿಕ್ ತ್ಯಾಗಿ(Kartik Tyagi) ಮಿಂಚಿನ ದಾಳಿಗೆ ತತ್ತರಿಸಿದ ಪಂಜಾಬ್ ಆಘಾತಕಾರಿ ಸೋಲು ಕಂಡಿದೆ. ರೋಚಕ ಗೆಲುವನ್ನು ಸಂಭ್ರಮಿಸಬೇಕಿದ್ದ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್‌ಗೆ ಬಿಗ್ ಶಾಕ್ ಎದುರಾಗಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
A look at the Points Table after Match 32 of #VIVOIPL pic.twitter.com/4rqOhQQhwg
— IndianPremierLeague (@IPL) September 21, 2021
14ನೇ ಆವೃತ್ತಿಯ ಐಪಿಎಲ್ ಟೂರ್ನಿಯ 32ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಹೈವೋಲ್ಟೇಜ್ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಆತಿಥ್ಯವನ್ನು ವಹಿಸಿತ್ತು.
ಮೊದಲು ಬ್ಯಾಟಿಂಗ್ ಮಾಡಿದ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವು 185 ರನ್ ಬಾರಿಸಿ ಸರ್ವಪತನ ಕಾಣುವ ಮೂಲಕ ಪಂಜಾಬ್ ಕಿಂಗ್ಸ್ ತಂಡಕ್ಕೆ ಸ್ಪರ್ಧಾತ್ಮಕ ಗುರಿ ನೀಡಿತ್ತು.
ಈ ಗುರಿ ಬೆನ್ನತ್ತಿದ ಪಂಜಾಬ್ ತಂಡಕ್ಕೆ ನಾಯಕ ರಾಹುಲ್ ಹಾಗೂ ಮಯಾಂಕ್ ಅಗರ್‌ವಾಲ್ ಶತಕದ ಜತೆಯಾಟ ಒದಗಿಸಿಕೊಡುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಹೀಗಿದ್ದು ಪಂಜಾಬ್ 2 ರನ್ ಗಳ ರೋಚಕ ಸೋಲು ಕಂಡಿತು.
ಕೊನೆಯ ಓವರ್‌ನಲ್ಲಿ ಪಂಜಾಬ್ ಗೆಲ್ಲಲು ಕೇವಲ 4 ರನ್‌ಗಳ ಅಗತ್ಯವಿತ್ತು. ಕೊನೆಯ ಓವರ್ ದಾಳಿ ನಡೆಸಿದ ಯುವ ವೇಗಿ ಕಾರ್ತಿಕ್ ತ್ಯಾಗಿ ಕೇವಲ 1 ರನ್ ನೀಡಿ ಎರಡು ವಿಕೆಟ್ ಕಬಳಿಸುವ ಮೂಲಕ ರಾಯಲ್ಸ್ ಪಡೆಗೆ ರೋಚಕ ಗೆಲುವು ತಂದಿಟ್ಟರು.
ಹೀಗಿದ್ದೂ ಸಂಜು ಸ್ಯಾಮ್ಸನ್‌ಗೆ ಐಪಿಎಲ್ ಆಯೋಜಕರು ಬಿಗ್ ಶಾಕ್ ನೀಡಿದ್ದು, ರಾಜಸ್ಥಾನ ರಾಯಲ್ಸ್ ನಿಧಾನಗತಿಯ ಬೌಲಿಂಗ್ ಮಾಡಿದ ತಪ್ಪಿಗೆ ನಾಯಕ ಸಂಜು ಸ್ಯಾಮ್ಸನ್‌ಗೆ 12 ಲಕ್ಷ ರುಪಾಯಿ ದಂಡ ವಿಧಿಸಿದೆ.
ವಿವೋ ಐಪಿಎಲ್ ಟೂರ್ನಿ 2021ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ದದ 32ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದ ತಪ್ಪಿಗೆ ಸಂಜು ಸ್ಯಾಮ್ಸನ್‌ಗೆ 12 ಲಕ್ಷ ರುಪಾಯಿ ದಂಡ ವಿಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ
ಪಂಜಾಬ್ ಎದುರು ರೋಚಕ ಗೆಲುವು ಸಾಧಿಸುವುದರ ಜತೆಗೆ ರಾಜಸ್ಥಾನ ರಾಯಲ್ಸ್ ತಂಡವು ತನ್ನ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಸದ್ಯ ರಾಯಲ್ಸ್ ಪಡೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದು, ಟಾಪ್ 4 ಪಟ್ಟಿಯೊಳಗೆ ಸ್ಥಾನ ಪಡೆಯಲು ಎದುರು ನೋಡುತ್ತಿದೆ.