ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಟಗಾರನಿಗೆ ಕೋವಿಡ್ ಶಾಕ್
ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮುಗಿಸಿ ಬಿಡುವಿನ ಸಮಯವನ್ನು ಎಂಜಾಯ್ ಮಾಡುತ್ತಿದ್ದ ಭಾರತ ಕ್ರಿಕೆಟ್ ತಂಡದ ಮೇಲೆ ಕೋವಿಡ್ 19 ತನ್ನ ವಕ್ರದೃಷ್ಠಿ ಬೀರಿದೆ. ಇದೀಗ ಬಂದ ಮಾಹಿತಿಯ ಪ್ರಕಾರ ಟೀಂ ಇಂಡಿಯಾದ ಸದಸ್ಯರೊಬ್ಬರಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ.
ಸೌಥಾಂಪ್ಟನ್‌ನಲ್ಲಿ ನಡೆದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಸುಮಾರು 20 ದಿನಗಳ ಕಾಲ ರಜೆ ಸಿಕ್ಕಿದೆ.
ಇಂಗ್ಲೆಂಡ್ ವಿರುದ್ದದ 5 ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ಟೀಂ ಇಂಡಿಯಾ ಕ್ರಿಕೆಟಿಗರು ಬಿಡುವಿನ ಸಮಯವನ್ನು ತಮ್ಮ ಸ್ನೇಹಿತರು, ಕುಟುಂಬದೊಟ್ಟಿಗೆ ಕಾಲ ಕಳೆಯುತ್ತಿದ್ದಾರೆ.
ಕೆಲವರು ಲಂಡನ್‌ನಲ್ಲೇ ನಡೆದ ವಿಂಬಲ್ಡನ್ ಪಂದ್ಯಾವಳಿಗಳನ್ನು ವೀಕ್ಷಿಸಿದರೆ, ಮತ್ತೆ ಕೆಲವರು ಇಂಗ್ಲೆಂಡ್‌ನ ಆಯ್ದ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿ ಖುಷಿ ಪಟ್ಟಿದ್ದಾರೆ.
ಇದೆಲ್ಲದರ ನಡುವೆ ಟೀಂ ಇಂಡಿಯಾ ಆಟಗಾರನೊಬ್ಬರಿಗೆ ಕೋವಿಡ್ 19 ಸೋಂಕು ದೃಢಪಟ್ಟಿಗೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಬಿಸಿಸಿಐ ಇದುವರೆಗೂ ತುಟಿಬಿಚ್ಚಿಲ್ಲ.
ಕೆಲ ದಿನಗಳ ಹಿಂದಿನಿಂದಲೇ ಟೀಂ ಇಂಡಿಯಾದ ಯುವ ಆಟಗಾರನೊಬ್ಬನಿಗೆ ಕೋವಿಡ್ 19 ಲಕ್ಷಣಗಳು ಕಾಣಿಸಿಕೊಂಡಿದ್ದು, ಟೆಸ್ಟ್‌ಗೆ ಒಳಪಡಿಸಿದಾಗ ಆತನಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ.
ಸದ್ಯ ಆ ಆಟಗಾರರ ಲಂಡನ್‌ನಲ್ಲೇ ಐಸೋಲೇಷನ್‌ಗೆ ಒಳಗಾಗಿದ್ದಾನೆ. ಹೀಗಾಗಿ ಜುಲೈ 20ರಿಂದ ಡುರ್ಹಾಮ್‌ನಲ್ಲಿ ನಡೆಯಲಿರುವ ಆಯ್ದ ಕೌಂಟಿ ಇಲೆವನ್ ವಿರುದ್ದದ ಪಂದ್ಯದಲ್ಲಿ ಈ ಆಟಗಾರ ಪಾಲ್ಗೊಳ್ಳುತ್ತಿಲ್ಲ ಎನ್ನಲಾಗಿದೆ.
ಉಳಿದೆಲ್ಲಾ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗಳ ಕೋವಿಡ್ ಟೆಸ್ಟ್ ರಿಪೋರ್ಟ್ ನೆಗೆಟಿವ್ ಬಂದಿದೆ. ಎಲ್ಲಾ ಆಟಗಾರರು ಪ್ರತ್ಯೇಕವಾಗಿ ಕಾಲ ಕಳೆದಿದ್ದರಿಂದಾಗಿ ಆ ಆಟಗಾರನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದರು ಎನ್ನುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹೀಗಾಗಿ ಭಾರತ ತಂಡದ ಈಗಿನ ಪ್ಲಾನ್‌ನಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಬಿಸಿಸಿಐ ಉನ್ನತ ಮೂಲಗಳು ತಿಳಿಸಿವೆ.
ಇಂಗ್ಲೆಂಡ್‌ನಲ್ಲಿ ಕಳೆದ ವಾರವಷ್ಟೇ ಟೀಂ ಇಂಡಿಯಾ ಕ್ರಿಕೆಟಿಗರು ಎರಡನೇ ಹಂತದ ಕೋವಿಡ್ ಲಸಿಕೆ ಪಡೆದಿದ್ದರು. ಲಸಿಕೆ ಪಡೆದ ನಂತರ ಆ ಆಟಗಾರನಿಗೆ ಕೋವಿಡ್ 19 ಲಕ್ಷಣಗಳು ಕಾಣಿಸಿಕೊಂಡಿತೇ ಎನ್ನುವ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ.
ಕಳೆದ ವಾರ ಪಾಕಿಸ್ತಾನ ವಿರುದ್ದದ ಟೆಸ್ಟ್ ಸರಣಿಗೂ ಮುನ್ನ ಇಂಗ್ಲೆಂಡ್ ಕ್ರಿಕೆಟ್ ತಂಡದಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಇಡೀ ತಂಡವೇ ಐಸೋಲೇಷನ್‌ಗೆ ಒಳಗಾಗಿತ್ತು.
ಇಂಗ್ಲೆಂಡ್ ವಿರುದ್ದದ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ಆಗಸ್ಟ್ 04ರಿಂದ ಆರಂಭವಾಗಲಿದೆ.