Ind vs SA: ದಕ್ಷಿಣ ಆಫ್ರಿಕಾ ಎದುರಿನ 2ನೇ ಟಿ20 ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಒಂದು ಬದಲಾವಣೆ?
ಕಟಕ್: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ 5 ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಜೂನ್ 12ರಂದು ಇಲ್ಲಿನ ಬಾರಬತಿ ಸ್ಟೇಡಿಯಂನಲ್ಲಿ ಎರಡು ಬಲಾಢ್ಯ ತಂಡಗಳು ಸೆಣಸಾಟ ನಡೆಸಲಿವೆ. ಈಗಾಗಲೇ ಮೊದಲ ಪಂದ್ಯದಲ್ಲಿ ಆಘಾತಕಾರಿ ಸೋಲು ಕಂಡಿರುವ ರಿಷಭ್ ಪಂತ್ ನೇತೃತ್ವದ ಟೀಂ ಇಂಡಿಯಾ, ಎರಡನೇ ಪಂದ್ಯದಲ್ಲಿ ಒಂದು ಮಹತ್ವದ ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಕಟಕ್‌ನಲ್ಲಿ ನಡೆಯಲಿರುವ ಹರಿಣಗಳೆದುರಿನ ಎರಡನೇ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಹೀಗಿದೆ ನೋಡಿ...
Image credit: PTI
1. ಇಶಾನ್ ಕಿಶನ್
ಜಾರ್ಖಂಡ್ ಮೂಲದ ಎಡಗೈ ಬ್ಯಾಟರ್ ಇಶಾನ್ ಕಿಶನ್, ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಬಾರಿಸುವ ಮೂಲಕ ಭಾರತಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟಿದ್ದರು. ಇದೀಗ ಎರಡನೇ ಪಂದ್ಯದಲ್ಲೂ ತಮ್ಮ ಲಯವನ್ನು ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದ್ದಾರೆ.
Image credit: PTI
2. ಋತುರಾಜ್ ಗಾಯಕ್ವಾಡ್
ಕೆ ಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿರುವ ಮಹಾರಾಷ್ಟ್ರ ಮೂಲದ ಗಾಯಕ್ವಾಡ್ ಮೊದಲ ಪಂದ್ಯದಲ್ಲಿ ಸಿಕ್ಕ ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ವಿಫಲರಾಗಿದ್ದರು. ಎರಡನೇ ಪಂದ್ಯದಲ್ಲಿ ಗಾಯಕ್ವಾಡ್ ಸಿಡಿಯುವ ಸಾಧ್ಯತೆಯಿದೆ.
Image credit: PTI
3. ಶ್ರೇಯಸ್ ಅಯ್ಯರ್
ಅನುಭವಿ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಕೂಡಾ ಮೊದಲ ಟಿ20 ಪಂದ್ಯದಲ್ಲಿ ಉತ್ತಮ ಆರಂಭವನ್ನು ಪಡೆದರಾದರೂ ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ವಿಫಲವಾಗಿದ್ದರು. ಟೀಂ ಇಂಡಿಯಾ ಬೃಹತ್ ಮೊತ್ತ ಕಲೆಹಾಕಬೇಕಿದ್ದರೇ ಅಯ್ಯರ್ ಅವರಿಂದ ಜವಾಬ್ದಾರಿಯುತ ಪ್ರದರ್ಶನ ಮೂಡಿಬರಬೇಕಿದೆ.
Image credit: PTI
4. ರಿಷಭ್ ಪಂತ್
ಟೀಂ ಇಂಡಿಯಾ ಹಂಗಾಮಿ ನಾಯಕ ರಿಷಭ್ ಪಂತ್, ಬ್ಯಾಟಿಂಗ್‌ನಲ್ಲಿ ಯಶಸ್ಸು ಕಂಡರು ಕೂಡಾ ನಾಯಕನಾಗಿ ವೈಫಲ್ಯ ಅನುಭವಿಸಿದ್ದರು. ಹೀಗಾಗಿ ತಂಡವನ್ನು ಗೆಲುವಿನ ಹಳಿಗೆ ತರಬೇಕಿದ್ದರೆ ಪಂತ್ ಅವರಿಂದ ಆಲ್ರೌಂಡ್ ಪ್ರದರ್ಶನ ಮೂಡಿ ಬರಬೇಕಿದೆ.
5. ಹಾರ್ದಿಕ್ ಪಾಂಡ್ಯ
ಸದ್ಯ ಐಪಿಎಲ್‌ನಲ್ಲಿ ಲಭಿಸಿದ ಯಶಸ್ಸನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಮುಂದುವರೆಸಿರುವ ಹಾರ್ದಿಕ್ ಪಾಂಡ್ಯ, ಮೊದಲ ಪಂದ್ಯದಲ್ಲೇ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಪಾಂಡ್ಯ ಸಿಡಿದರೇ ಹರಿಣಗಳಿಗೆ ಅವರನ್ನು ನಿಯಂತ್ರಿಸುವುದು ಸುಲಭದ ಮಾತಲ್ಲ
Dinesh Karthik
6. ದಿನೇಶ್ ಕಾರ್ತಿಕ್
ಅನುಭವಿ ಆಟಗಾರ ದಿನೇಶ್ ಕಾರ್ತಿಕ್, ಅಬ್ಬರಿಸಲು ಮೊದಲ ಪಂದ್ಯದಲ್ಲಿ ಹೆಚ್ಚು ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಎರಡನೇ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಮ್ಯಾಚ್ ಫಿನಿಶರ್ ಪಾತ್ರ ನಿಭಾಯಿಸಲು ಎದುರು ನೋಡುತ್ತಿದ್ದಾರೆ.
Harshal Patel
7. ಹರ್ಷಲ್ ಪಟೇಲ್
ಡೆತ್ ಓವರ್ ಸ್ಪೆಷಲಿಸ್ಟ್ ಆಗಿ ಗುರುತಿಸಿಕೊಂಡಿರುವ ಹರ್ಷಲ್ ಪಟೇಲ್, ಆಫ್ರಿಕಾ ಎದುರಿನ ಮೊದಲ ಪಂದ್ಯದಲ್ಲಿ ಕೊಂಚ ದುಬಾರಿ ಎನಿಸಿಕೊಂಡಿದ್ದರು. ಹೀಗಿದ್ದರೂ ಸಹಾ ಎರಡನೇ ಪಂದ್ಯದಲ್ಲಿ ಪಟೇಲ್‌ಗೆ ಮತ್ತೊಂದು ಅವಕಾಶ ಸಿಗುವ ಸಾಧ್ಯತೆಯಿದೆ.
8. ಭುವನೇಶ್ವರ್ ಕುಮಾರ್
ಟೀಂ ಇಂಡಿಯಾ ಅನುಭವಿ ವೇಗಿ ಭುವನೇಶ್ವರ್ ಕುಮಾರ್, ಪವರ್ ಪ್ಲೇ ನಲ್ಲೇ ತಂಡಕ್ಕೆ ಯಶಸ್ಸು ತಂದುಕೊಟ್ಟಿದ್ದರು. ಆದರೆ ಅದೇ ಲಯವನ್ನು ಮುಂದುವರೆಸಿಕೊಂಡು ಹೋಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಎರಡನೇ ಪಂದ್ಯದಲ್ಲಿ ಭುವಿ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ
9. ಯುಜುವೇಂದ್ರ ಚಹಲ್
ಅನುಭವಿ ಲೆಗ್‌ಸ್ಪಿನ್ನರ್ ಯುಜುವೇಂದ್ರ ಚಹಲ್ ಕೂಡಾ ಕಳೆದ ಪಂದ್ಯದಲ್ಲಿ ಸಾಕಷ್ಟು ದುಬಾರಿಯಾಗಿದ್ದರು. ಆದರೆ ಯಾವುದೇ ಕ್ಷಣದಲ್ಲಾದರೂ ಕಮ್‌ಬ್ಯಾಕ್ ಮಾಡುವ ಸಾಮರ್ಥ್ಯವಿರುವ ಚಹಲ್, ಎರಡನೇ ಪಂದ್ಯದಲ್ಲಿ ಫಾರ್ಮ್‌ಗೆ ಮರಳಲು ಎದುರು ನೋಡುತ್ತಿದ್ದಾರೆ.
10. ಆವೇಶ್ ಖಾನ್
ಯುವ ವೇಗದ ಬೌಲರ್ ಆವೇಶ್ ಖಾನ್ ಕಳೆದ ಪಂದ್ಯದಲ್ಲಿ ಉಳಿದೆಲ್ಲಾ ಬೌಲರ್‌ಗಳಿಗೆ ಹೋಲಿಸಿದರೆ ಒಳ್ಳೆಯ ಎಕಾನಮಿಯಲ್ಲಿ ದಾಳಿ ನಡೆಸಿದ್ದರು. ಹೀಗಾಗಿ ಎರಡನೇ ಟಿ20 ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರುವ ನಿರೀಕ್ಷೆಯಲ್ಲಿದ್ದಾರೆ.
11. ಉಮ್ರಾನ್ ಮಲಿಕ್
ಕಳೆದ ಪಂದ್ಯದಲ್ಲಿ ಅಕ್ಷರ್ ಪಟೇಲ್ ಸಾಕಷ್ಟು ದುಬಾರಿ ಬೌಲರ್ ಎನಿಸಿಕೊಂಡಿದ್ದರು. ಹೀಗಾಗಿ ಎರಡನೇ ಪಂದ್ಯದಲ್ಲಿ ಅಕ್ಷರ್ ಪಟೇಲ್‌ಗೆ ವಿಶ್ರಾಂತಿ ನೀಡಿ ಜಮ್ಮು ಮೂಲದ ಮಾರಕ ವೇಗಿ ಉಮ್ರಾನ್ ಮಲಿಕ್‌ಗೆ ಟೀಂ ಇಂಡಿಯಾ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡುವ ಸಾಧ್ಯತೆಯಿದೆ.