ಪಾಕಿಸ್ತಾನ ವಿಶ್ವಕಪ್‌ನಿಂದ ಔಟ್ ಖಚಿತ , ಮುಂಬೈನಲ್ಲಿ ಭಾರತ-ನ್ಯೂಜಿಲೆಂಡ್ ಮೊದಲ ಸೆಮಿಫೈನಲ್!
ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸುವ ಪಾಕಿಸ್ತಾನ ತಂಡದ ಕೊನೆಯ ಆಸೆಗೆ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ತಣ್ಮೀರೆರಚಿದ್ದಾರೆ. ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಾಗಲೇ ಪಾಕಿಸ್ತಾನ ತಂಡ ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ. ಪಂದ್ಯದ ಫಲಿತಾಂಶ ಬರುವ ಮೊದಲೇ ಪಾಕ್ ಟೂರ್ನಿಯಿಂದ ಹೊರಬಿದ್ದಿದ್ದು ಹೇಗೆ?
ಐಸಿಸಿ ವಿಶ್ವಕಪ್ ಟೂರ್ನಿ ಲೀಗ್ ಪಂದ್ಯದ 45 ಪಂದ್ಯದ ಪೈಕಿ 44ನೇ ಪಂದ್ಯದ ವರೆಗೆ ಸೆಮಿಫೈನಲ್ ಕುತೂಹಲ ಬಾಕಿ ಉಳಿದಿತ್ತು. ಆದರೆ ಇಂಗ್ಲೆಂಡ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡುತ್ತಿದ್ದಂತೆ ಪಾಕಿಸ್ತಾನ ತಂಡ ಅಖಾಡಕ್ಕಿಳಿಯುವ ಮೊದಲೇ ಟೂರ್ನಿಯಿಂದ ಹೊರಬಿದ್ದಿದೆ.
ಕಾರಣ, ಪಾಕಿಸ್ತಾನ ತಂಡ ಸೆಮಿಫೈನಲ್ ಪ್ರವೇಶ ಪಡೆಯಲು ಇಂಗ್ಲೆಂಡ್ ನೀಡುವ ಟಾರ್ಗೆಟನ್ನು ಸರಿಸುಮಾರು 2.3 ಓವರ್‌ಗಳಲ್ಲಿ ಚೇಸ್ ಮಾಡಬೇಕು ಹೀಗಾದರೆ ಮಾತ್ರ ಸೆಮೀಸ್ ಎಂಟ್ರಿ ಪಡೆದುಕೊಳ್ಳಲಿದೆ.
ಪಾಕಿಸ್ತಾನ ತಂಡ ಮೊದಲು ಬ್ಯಾಟಿಂಗ್ ಮಾಡಿದ್ದರೆ 287 ರನ್ ಅಂತರದ ಗೆಲುವು ಸಾಧಿಸಬೇಕಿತ್ತು. ಹೀಗಾಗಿ ಇಂಗ್ಲೆಂಡ್ ವಿರುದ್ದ ಪಾಕಿಸ್ತಾನ ಗೆದ್ದರೂ ಸೆಮಿಫೈನಲ್ ಪ್ರವೇಶಿಸುವ ಸಾಧ್ಯತೆ ಇಲ್ಲ.
ಪಾಕಿಸ್ತಾನ ತಂಡ ಐಸಿಸಿ ವಿಶ್ವಕಪ್ 2023ರ ಟೂರ್ನಿಯಿಂದ ಹೊರಬಿದ್ದಿರುವುದು ಬಹುತೇಕ ಖಚಿತಗೊಂಡಿದೆ. ಹೀಗಾಗಿ ನ್ಯೂಜಿಲೆಂಡ್ ನಾಲ್ಕನೇ ತಂಡವಾಗಿ ಸ್ಥಾನ ಬಹುತೇಕ ಖಚಿಪಡಿಸಿಕೊಂಡಿದೆ.
ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ ಹಾಗೂ 4ನೇ ಸ್ಥಾನ ಪಡೆಯಲಿರುವ ನ್ಯೂಜಿಲೆಂಡ್ ಹೋರಾಟ ನಡೆಸಲಿದೆ.
ನವೆಂಬರ್ 15 ರಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ಮೊದಲ ಸೆಮಿಫೈನಲ್ ಪಂದ್ಯ ನಡೆಯಲಿದೆ. ಲೀಗ್ ಹಂತದಲ್ಲಿ ನ್ಯೂಜಿಲೆಂಡ್ ತಂಡವನ್ನು ರೋಹಿತ್ ಪಡೆ ಮಣಿಸಿದೆ.
ಟೀಂ ಇಂಡಿಯಾ ಅಂತಿಮ ಲೀಗ್ ಪಂದ್ಯವನ್ನು ನೆದರ್ಲೆಂಡ್ ವಿರುದ್ಧ ಆಡಲಿದೆ. ಈ ಪಂದ್ಯದ ಫಲಿತಾಂಶ ಅಂಕಪಟ್ಟಿಯಲ್ಲಿ ಮಹತ್ವದ ಸ್ಥಾನಪಲ್ಲಟ ಮಾಡುವುದಿಲ್ಲ. ಕೇವಲ ನೆದರ್ಲೆಂಡ್ ಗೆದ್ದರೆ ಮಾತ್ರ ಕೊನೆಯ ಸ್ಥಾನದಿಂದ 7ನೇ ಸ್ಥಾನಕ್ಕೆ ಲಗ್ಗೆ ಇಡಲಿದೆ.
ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಹೋರಾಟ ನಡೆಸಲಿದೆ. ಈ ಪಂದ್ಯ ನವೆಂಬರ್ 16 ರಂದು ಕೋಲ್ಕತ್ತಾದಲ್ಲಿ ನಡೆಯಲಿದೆ.