Breaking News: ಟೀಂ ಇಂಡಿಯಾಗೆ ಬಿಗ್ ಶಾಕ್, ಕಿವೀಸ್ ಎದುರಿನ ಪಂದ್ಯದಿಂದ ಸ್ಟಾರ್ ಕ್ರಿಕೆಟಿಗ ಔಟ್..!
ಬೆಂಗಳೂರು: 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿರುವ ಟೀಂ ಇಂಡಿಯಾಗೆ ಬಿಗ್ ಶಾಕ್ ಎದುರಾಗಿದ್ದು, ನ್ಯೂಜಿಲೆಂಡ್ ಎದುರಿನ ಮಹತ್ವದ ಪಂದ್ಯದಿಂದ ಸ್ಟಾರ್ ಕ್ರಿಕೆಟಿಗ ಗಾಯದ ಸಮಸ್ಯೆಯಿಂದ ಹೊರಬಿದ್ದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿದ್ದು, ತಾನಾಡಿದ ಮೊದಲ 4 ಪಂದ್ಯಗಳಲ್ಲೂ ಅನಾಯಾಸವಾಗಿ ಗೆಲುವು ದಾಖಲಿಸುವ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಭದ್ರವಾಗಿದೆ.
ಪುಣೆಯಲ್ಲಿ ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್‌ಗಳ ಸಂಘಟಿತ ಪ್ರದರ್ಶನ ಹಾಗೂ ವಿರಾಟ್ ಕೊಹ್ಲಿ ಬಾರಿಸಿದ ಅಜೇಯ ಶತಕದ ನೆರವಿನಿಂದ 7 ವಿಕೆಟ್‌ಗಳ ಗೆಲುವು ದಾಖಲಿಸಿ ಬೀಗಿದೆ.
ಇದೀಗ ಧರ್ಮಶಾಲಾದಲ್ಲಿ ಅಕ್ಟೋಬರ್ 22ರಂದು ನಡೆಯಲಿರುವ ನ್ಯೂಜಿಲೆಂಡ್ ಎದುರಿನ ಹೈವೋಲ್ಟೇಜ್ ಪಂದ್ಯಕ್ಕೆ ಟೀಂ ಇಂಡಿಯಾ ಸಜ್ಜಾಗಿದೆ. ಕೇನ್ ವಿಲಿಯಮ್ಸನ್ ಅನುಪಸ್ಥಿತಿಯಲ್ಲೂ ನ್ಯೂಜಿಲೆಂಡ್ ತಂಡವು ಆಡಿದ 4 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಭದ್ರವಾಗಿದೆ.
ಹೀಗಾಗಿ ಧರ್ಮಶಾಲಾದಲ್ಲಿ ನಡೆಯಲಿರುವ ಪಂದ್ಯದ ಮೇಲೆ ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಚಿತ್ತ ನೆಟ್ಟಿದೆ. ಹೀಗಿರುವಾಗಲೇ ಟೀಂ ಇಂಡಿಯಾಗೆ ಬಿಗ್ ಶಾಕ್ ಎದುರಾಗಿದ್ದು, ಗಾಯದ ಸಮಸ್ಯೆಯಿಂದಾಗಿ ಹಾರ್ದಿಕ್ ಪಾಂಡ್ಯ, ಕಿವೀಸ್ ಎದುರಿನ ಪಂದ್ಯದಿಂದ ಹೊರಬಿದ್ದಿದ್ದಾರೆ.
ಹೌದು, ಬಾಂಗ್ಲಾದೇಶ ಎದುರಿನ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುವ ಸಂದರ್ಭದಲ್ಲಿ ಪಾದದ ಗಾಯಕ್ಕೆ ಒಳಗಾಗಿ ಮೈದಾನ ತೊರೆದಿದ್ದರು. ಇದಾದ ಬಳಿಕ ಹಾರ್ದಿಕ್ ಪಾಂಡ್ಯ ಮೈದಾನಕ್ಕಿಳಿದಿರಲಿಲ್ಲ.
ಬಳಿಕ ಗಾಯದ ತೀವ್ರತೆ ಅರಿಯಲು ಹಾರ್ದಿಕ್ ಪಾಂಡ್ಯ ಅವರನ್ನು ಸ್ಕ್ಯಾನ್‌ಗೆ ಕಳಿಸಿಕೊಡಲಾಗಿತ್ತು. ಇದೀಗ ಈ ಕುರಿತಂತೆ ಬಿಸಿಸಿಐ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಬಿಸಿಸಿಐ ವೈದ್ಯಕೀಯ ಸಿಬ್ಬಂದಿಯು ಪಾಂಡ್ಯ ಆರೋಗ್ಯದ ಮೇಲೆ ನಿಗಾ ಇಟ್ಟಿದೆ. ವೈದ್ಯರ ಸಲಹೆಯ ಮೇರೆಗೆ ಕಿವೀಸ್ ಎದುರಿನ ಪಂದ್ಯದ ಮಟ್ಟಿಗೆ ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ತಿಳಿಸಿದೆ.
ಹಾರ್ದಿಕ್ ಪಾಂಡ್ಯ ಅವರ ಇಂಜುರಿ ಟೀಂ ಇಂಡಿಯಾ ಪಾಳಯದಲ್ಲಿ ಕೊಂಚ ಆತಂಕಕ್ಕೆ ಈಡು ಮಾಡಿತ್ತು. ಇನ್ನು ಹಾರ್ದಿಕ್ ಪಾಂಡ್ಯ ಅಕ್ಟೋಬರ್ 29ರಂದು ಇಂಗ್ಲೆಂಡ್ ಎದುರು ನಡೆಯಲಿರುವ ಪಂದ್ಯದ ವೇಳೆಗೆ ಟೀಂ ಇಂಡಿಯಾ ಕೂಡಿಕೊಳ್ಳುವ ವಿಶ್ವಾಸವನ್ನು ಬಿಸಿಸಿಐ ಮೂಲಗಳು ವ್ಯಕ್ತಪಡಿಸಿವೆ.