T20 World Cup ಇಂಡೋ-ಆಂಗ್ಲೋ ಸೆಮೀಸ್ ಕದನ: ಈ ನಾಲ್ವರ ಹೋರಾಟ ನೋಡಲು ಮಿಸ್ ಮಾಡ್ಕೊಬೇಡಿ..!
ಅಡಿಲೇಡ್(ನ.10): ಬಹು ನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿಂದು ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಅಡಿಲೇಡ್ ಓವಲ್ ಮೈದಾನ ಆತಿಥ್ಯವನ್ನು ವಹಿಸಿದೆ. ಎರಡು ಬಲಿಷ್ಠ ತಂಡಗಳ ನಡುವಿನ ಕಾದಾಟಕ್ಕೆ ಇದೀಗ ವೇದಿಕೆ ಸಜ್ಜಾಗಿದ್ದು, ಇಂದು ನಡೆಯಲಿರುವ ಪಂದ್ಯದಲ್ಲಿ ಈ ಬಹು ನಿರೀಕ್ಷಿತ ತಾರಾ ಆಟಗಾರರ ಪೈಪೋಟಿ ನೋಡಲು ಮಿಸ್ ಮಾಡಿಕೊಳ್ಳಬೇಡಿ..
1. ಭುವನೇಶ್ವರ್ ಕುಮಾರ್ - ಜೋಸ್ ಬಟ್ಲರ್
ಅಂತಾರಾಷ್ಟ್ರೀಯ ಟಿ20ಯಲ್ಲಿ ಜೋಸ್ ಬಟ್ಲರ್‌ನ್ನು ಭುವನೇಶ್ವರ್ ಕುಮಾರ್‌ಗಿಂತ ಹೆಚ್ಚು ಬಾರಿ ಯಾರೂ ಔಟ್ ಮಾಡಿಲ್ಲ. ಭುವಿ ಎದುರು ಬಟ್ಲರ್ 32 ಎಸೆತಗಳಲ್ಲಿ ಕೇವಲ 30 ರನ್ ಗಳಿಸಿ 5 ಬಾರಿ ಔಟಾಗಿದ್ದಾರೆ. ಐದೂ ಬಾರಿ ಮೊದಲ 3 ಓವರ್ ಒಳಗೆ ಬಟ್ಲರ್ ವಿಕೆಟ್ ಕಳೆದುಕೊಂಡಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಯಾರ ಕೈ ಮೇಲಾಗಲಿದೆ ಎನ್ನುವ ಕುತೂಹಲ ಜೋರಾಗಿದೆ.
2. ಸೂರ್ಯಕುಮಾರ್ ಯಾದವ್ - ಮಾರ್ಕ್ ವುಡ್ ಟಕ್ಕರ್
ಮಾರಕ ವೇಗಿ ಮಾರ್ಕ್ ವುಡ್ ಕಣಕ್ಕಿಳಿದರೆ ಅವರನ್ನು ಇಂಗ್ಲೆಂಡ್ ತಂಡವು ಸೂರ್ಯಕುಮಾರ್ ಎದುರು ಪ್ರಮುಖ ಅಸ್ತ್ರವಾಗಿ ಬಳಸಲಿದೆ. ಈ ಟೂರ್ನಿಯಲ್ಲಿ ಸೂರ್ಯಕುಮಾರ್ ಮೊದಲ 10 ಎಸೆತದಲ್ಲಿ 174ರ ಸ್ಟ್ರೈಕ್‌ರೇಟಲ್ಲಿ ರನ್ ಗಳಿಸಿದ್ದಾರೆ. ಸೂರ್ಯ ಅವರನ್ನು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಬಿಟ್ಟರೆ ಇಂಗ್ಲೆಂಡ್‌ಗೆ ಅಪಾಯ ಕಟ್ಟಿಟ್ಟಬುತ್ತಿ.
Image credit: Getty
3. ವಿರಾಟ್ ಕೊಹ್ಲಿ- ಮೋಯಿನ್ ಅಲಿ
ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಪ್ರಸಕ್ತ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಬ್ಯಾಟಿಂಗ್ ನಡೆಸುವ ಮೂಲಕ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಹೀಗಾಗಿ ಇಂಗ್ಲೆಂಡ್ ತಂಡವು ಕೊಹ್ಲಿಯನ್ನು ಕಟ್ಟಿಹಾಕಲು ಸ್ಪಿನ್ ಅಸ್ತ್ರ ಮೋಯಿನ್ ಅಲಿಯನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ. ಮೋಯಿನ್ ಅಲಿ ಎದುರು ವಿರಾಟ್ ಕೊಹ್ಲಿ ಹಲವು ಬಾರಿ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದ್ದಾರೆ.
4. ಸ್ಯಾಮ್ ಕರ್ರನ್-ಹಾರ್ದಿಕ್ ಪಾಂಡ್ಯ
ಸ್ಯಾಮ್ ಕರ್ರನ್ ಇಂಗ್ಲೆಂಡ್‌ನ ಪ್ರಮುಖ ಡೆತ್ ಓವರ್ ಬೌಲರ್. ಇನ್ನು ಹಾರ್ದಿಕ್ ಪಾಂಡ್ಯ ಕೊನೆಯ ಓವರ್‌ಗಳಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಪಂದ್ಯದ ದಿಕ್ಕನೇ ಬದಲಿಸುವ ಕ್ಷಮತೆ ಹೊಂದಿದ್ದಾರೆ. ಹೀಗಾಗಿ ಸ್ಯಾಮ್ ಕರ್ರನ್ ಹಾಗೂ ಹಾರ್ದಿಕ್ ಪಾಂಡ್ಯ ಇವರಿಬ್ಬರ ನಡುವೆ ಮತ್ತೆ ಪೈಪೋಟಿ ನಡೆಯಬಹುದು.