T20 World Cup: ಪಾಕ್ ಎದುರಿನ ಸೋಲಿನ ಬೆನ್ನಲ್ಲೇ ಕಿವೀಸ್‌ಗೆ ಮತ್ತೊಂದು ಶಾಕ್..?
ಶಾರ್ಜಾ: ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ಕ್ರಿಕೆಟ್ ತಂಡವು (New Zealand Cricket) ಪಾಕಿಸ್ತಾನ ಎದುರು 5 ವಿಕೆಟ್‌ಗಳ ಅಂತರದ ಆಘಾತಕಾರಿ ಸೋಲು ಕಂಡಿದೆ. ಈ ಸೋಲಿನ ಶಾಕ್‌ನಿಂದ ಹೊರಬರುವ ಮುನ್ನವೇ ಗಾಯದ ಮೇಲೆ ಬರೆ ಎನ್ನುವಂತೆ ಮತ್ತೊಂದು ಆಘಾತ ಸನ್ನಿಹಿತವಾಗಿದೆ. ಭಾರತ ಎದುರಿನ ಪಂದ್ಯಕ್ಕೂ ಮುನ್ನ ಕಿವೀಸ್ ಪಾಳಯದಲ್ಲಿ ಆತಂಕ ಮನೆ ಮಾಡಿದೆ. ಅಷ್ಟಕ್ಕೂ ಕಿವೀಸ್ ತಂಡದಲ್ಲಿ ಏನಾಯ್ತು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

Lockie Ferguson
ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ಪಂದ್ಯಕ್ಕೂ ಮುನ್ನ ಸ್ಟಾರ್ ವೇಗಿ ಲಾಕಿ ಫರ್ಗ್ಯೂಸನ್ ಗಾಯದ ಸಮಸ್ಯೆಯಿಂದಾಗಿ ಚುಟುಕು ಕ್ರಿಕೆಟ್ ವಿಶ್ವಕಪ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಪಾಕಿಸ್ತಾನ ವಿರುದ್ದ ನಡೆದ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ಕ್ರಿಕೆಟ್ ತಂಡವು 5 ವಿಕೆಟ್‌ಗಳ ಅಂತರದ ಆಘಾತಕಾರಿ ಸೋಲು ಕಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಹ್ಯಾರಿಸ್ ರೌಫ್ ಮಾರಕ ದಾಳಿಗೆ ತತ್ತರಿಸಿ 8 ವಿಕೆಟ್ ಕಳೆದುಕೊಂಡು ಕೇವಲ 134 ರನ್ ಕಲೆಹಾಕಿತು. ರೌಫ್ 22 ರನ್ ನೀಡಿ 4 ವಿಕೆಟ್ ಕಬಳಿಸಿದರು.
ಇನ್ನು ಸಾಧಾರಣ ಗುರಿ ಬೆನ್ನತ್ತಿದ ಪಾಕಿಸ್ತಾನ ಕ್ರಿಕೆಟ್ ತಂಡವು 18.4 ಓವರ್‌ನಲ್ಲಿ ಕೇವಲ 5 ವಿಕೆಟ್ ಕಳೆದುಕೊಂಡು ಸುಲಭ ಜಯ ದಾಖಲಿಸಿತು. ಆಸಿಫ್ ಅಲಿ ಹಾಗೂ ಸೋಯೆಬ್ ಮಲಿಕ್ ಪಾಕ್ ತಂಡವನ್ನು ಗೆಲುವಿನ ದಡ ಸೇರಿಸಿದರು.
ಸೋಲಿನೊಂದಿಗೆ ಟೂರ್ನಿ ಆರಂಭಿಸಿದ ನ್ಯೂಜಿಲೆಂಡ್ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಬಲಿಷ್ಠ ಟೀಂ ಇಂಡಿಯಾವನ್ನು ಎದುರಿಸಲಿದೆ. ಅಕ್ಟೋಬರ್ 31ರಂದು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿರುವ ಪಂದ್ಯವು ಉಭಯ ತಂಡಗಳ ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಿದೆ.
ಹೀಗಿರುವಾಗಲೇ ನ್ಯೂಜಿಲೆಂಡ್ ಪಾಳಯದಲ್ಲಿ ಆತಂಕ ಮನೆ ಮಾಡಿದ್ದು, ತಂಡದ ಸ್ಟಾರ್ ಆರಂಭಿಕ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್, ಟೀಂ ಇಂಡಿಯಾ ಎದುರಿನ ಪಂದ್ಯದ ವೇಳೆ ಕಿವೀಸ್ ತಂಡದಿಂದ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ.
ಹೌದು, ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ಮಾರ್ಟಿನ್ ಗಪ್ಟಿಲ್ ಬ್ಯಾಟಿಂಗ್ ಮಾಡುವ ವೇಳೆ ಹ್ಯಾರಿಸ್ ರೌಫ್ ಎಸೆದ ಚೆಂಡು ನೇರವಾಗಿ ಗಪ್ಟಿಲ್ ಕಾಲ್ಬೆರಳಿಗೆ ಅಪ್ಪಳಿಸಿದೆ. ಗಪ್ಟಿಲ್ ಸಂಪೂರ್ಣ ಫಿಟ್ ಆಗಿರುವ ಕುರಿತಂತೆ ಸದ್ಯಕ್ಕೆ ಯಾವುದೇ ಮಾಹಿತಿಯಿಲ್ಲ.
ಮುಂದಿನ 24ರಿಂದ 48 ಗಂಟೆಗಳ ಕಾಲ ಗಪ್ಟಿಲ್ ಕಾಲು ನೋವಿನ ಪ್ರಮಾಣ ಹೇಗಿರಲಿದೆ ಎನ್ನುವುದನ್ನು ಅವಲೋಕಿಸುತ್ತೇನೆ. ಪಂದ್ಯದ ಕೊನೆಯಲ್ಲಿ ಅವರು ಕೊಂಚ ಆಯಾಸಗೊಂಡಂತೆ ಕಂಡು ಬಂದರು. ಈ ಕುರಿತಂತೆ ಈಗಲೇ ಏನು ಹೇಳಲೂ ಸಾಧ್ಯವಿಲ್ಲ ಎಂದು ಕಿವೀಸ್ ತಂಡದ ಕೋಚ್ ಗ್ಯಾರಿ ಸ್ಟೆಡ್ ಅಭಿಪ್ರಾಯಪಟ್ಟಿದ್ದಾರೆ.
ಮಾರ್ಟಿನ್ ಗಪ್ಟಿಲ್ ಟಿ20 ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ಪರ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಗಪ್ಟಿಲ್ ಕಿವೀಸ್ ಪರ 32.13ರ ಬ್ಯಾಟಿಂಗ್ ಸರಾಸರಿಯಲ್ಲಿ 2,956 ರನ್ ಬಾರಿಸಿದ್ದಾರೆ.
Martin guptil
ಸಾಕಷ್ಟು ಅನುಭವಿ ಬ್ಯಾಟರ್ ಆಗಿರುವ ಮಾರ್ಟಿನ್ ಗಪ್ಟಿಲ್ ಟಿ20 ಕ್ರಿಕೆಟ್ ಮಾದರಿಯಲ್ಲಿ 2 ಶತಕ ಹಾಗೂ 17 ಅರ್ಧಶತಕ ಸಿಡಿಸಿದ್ದಾರೆ. ಭಾರತದೆದುರಿನ ಮಹತ್ವದ ಪಂದ್ಯದಲ್ಲಿ ಗಪ್ಟಿಲ್ ಒಂದು ವೇಳೆ ಅಲಭ್ಯರಾದರೇ, ಕಿವೀಸ್ ಪಡೆಗೆ ಕೊಂಚ ಹಿನ್ನೆಡೆಯಾಗುವ ಸಾಧ್ಯತೆಯಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.