T20 World Cup ಪಟ್ಟಕ್ಕೆ 12 ತಂಡ ಕಾದಾಟ..! ಯಾವ ತಂಡ ಎಷ್ಟು ಸ್ಟ್ರಾಂಗ್...?
ಮೆಲ್ಬರ್ನ್(ಅ.22): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಪ್ರಧಾನ ಸುತ್ತು ಇಂದಿನಿಂದ ಆರಂಭವಾಗಲಿದ್ದು, ಒಟ್ಟು 12 ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಈ ಮೊದಲು ಸೂಪರ್ 12 ಹಂತಕ್ಕೆ ನೇರವಾಗಿ 8 ತಂಡಗಳು ಅರ್ಹತೆ ಪಡೆದಿದ್ದವು. ಇನ್ನುಳಿದ 4 ತಂಡಗಳು ಅರ್ಹತಾ ಸುತ್ತಿನಲ್ಲಿ ಗೆದ್ದು ಸೂಪರ್ 12 ಹಂತಕ್ಕೆ ಲಗ್ಗೆಯಿಟ್ಟಿವೆ. ಇದೀಗ ತಲಾ 6 ತಂಡಗಳ ಎರಡು ಗುಂಪುಗಳನ್ನಾಗಿ ವಿಂಗಡಿಸಿದ್ದು, ಪ್ರತಿ ಗುಂಪಿನಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಸೆಮೀಸ್ ಪ್ರವೇಶಿಸಲಿದ್ದು, ಫೈನಲ್ ಪಂದ್ಯವು ನವೆಂಬರ್ 13ರಂದು ನಡೆಯಲಿವೆ. ಸೂಪರ್ 12 ಹಂತದ ಪಂದ್ಯಕ್ಕೂ ಮುನ್ನ 12 ತಂಡಗಳ ಬಲಾಬಲ ಹೇಗಿದೆ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ
1. ಭಾರತ, ರ‍್ಯಾಂಕಿಂಗ್: 01
ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಈ ಬಾರಿ ಪ್ರಶಸ್ತಿ ಗೆಲ್ಲಬಲ್ಲ ನೆಚ್ಚಿನ ತಂಡಗಳಲ್ಲಿ ಒಂದು ಎನಿಸಿದೆ. ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರೋಹಿತ್ ಶರ್ಮ, ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಟ್ರಂಪ್ ಕಾರ್ಡ್. ಬೌಲಿಂಗ್‌ನಲ್ಲಿ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿ ತಂಡಗವನ್ನು ಕಾಡುವ ಸಾಧ್ಯತೆಯಿದೆ.
ಶ್ರೇಷ್ಠ ಪ್ರದರ್ಶನ: 2007ರಲ್ಲಿ ಚಾಂಪಿಯನ್
2. ಇಂಗ್ಲೆಂಡ್, ರ‍್ಯಾಂಕಿಂಗ್: 02
ತಂಡ ಉತ್ತಮ ಟಿ20 ತಜ್ಞ ಬ್ಯಾಟರ್‌ಗಳನ್ನು ಹೊಂದಿದೆ. ಏಕಾಂಗಿಯಾಗಿ ಪಂದ್ಯ ಗೆಲ್ಲಿಸಬಲ್ಲ ಅನೇಕರಿದ್ದಾರೆ. ಸ್ಟೋಕ್ಸ್, ಕರ್ರನ್, ಅಲಿ ಆಲ್ರೌಂಡ್ ಆಟ ತಂಡಕ್ಕಿರುವ ದೊಡ್ಡ ಬಲ. ಬೇರ್‌ಸ್ಟೋವ್, ಆರ್ಚರ್ ಅನುಪಸ್ಥಿತಿ ಕಾಡಬಹುದು.
ಶ್ರೇಷ್ಠ ಪ್ರದರ್ಶನ: 2010ರಲ್ಲಿ ಚಾಂಪಿಯನ್
3. ಪಾಕಿಸ್ತಾನ, ರ‍್ಯಾಂಕಿಂಗ್: 03
ಕಳೆದ 2 ವರ್ಷದಲ್ಲಿ ಅತಿಹೆಚ್ಚು ಟಿ20 ಪಂದ್ಯಗಳನ್ನು ಆಡಿರುವ ತಂಡ. ವಿಶ್ವ ಶ್ರೇಷ್ಠ ವೇಗಿಗಳ ಬಲ ತಂಡಕ್ಕಿದೆ. ರಿಜ್ವಾನ್, ಬಾಬರ್ ಉತ್ಕೃಷ್ಟ ಲಯದಲ್ಲಿದ್ದಾರೆ. ಅನುಭವಿ ಫಿನಿಶರ್‌ಗಳ ಕೊರತೆ ಕಾಣುತ್ತಿದ್ದು, ಸಮಸ್ಯೆಯಾಗಬಹುದು.
ಶ್ರೇಷ್ಠ ಪ್ರದರ್ಶನ: 2009ರಲ್ಲಿ ಚಾಂಪಿಯನ್
4. ದಕ್ಷಿಣ ಆಫ್ರಿಕಾ, ರ‍್ಯಾಂಕಿಂಗ್: 04
ಉತ್ತಮ ಸಾಮರ್ಥ್ಯವಿರುವ ತಂಡ. ಗುಣಮಟ್ಟದ ವೇಗಿಗಳಿದ್ದಾರೆ. ಆದರೆ ವಿಶ್ವಕಪ್‌ಗಳಲ್ಲಿ ಉತ್ತಮ ದಾಖಲೆ ಹೊಂದಿಲ್ಲ. ಇತ್ತೀಚೆಗೆ ಸ್ಥಿರತೆ ಕಾಯ್ದುಕೊಳ್ಳುವಲ್ಲಿ ವಿಫಲವಾಗಿದೆ. ಕೆಲ ಆಟಗಾರರು ಲಯದಲ್ಲಿಲ್ಲ.
ಶ್ರೇಷ್ಠ ಪ್ರದರ್ಶನ: 2009, 14ರಲ್ಲಿ ಸೆಮೀಸ್
5. ನ್ಯೂಜಿಲೆಂಡ್, ರ‍್ಯಾಂಕಿಂಗ್: 05
2022ರಲ್ಲಿ 15 ಪಂದ್ಯಗಳಲ್ಲಿ ಕೇವಲ 3ರಲ್ಲಿ ಸೋತಿದೆ. ಕಳೆದ ಬಾರಿ ರನ್ನರ್-ಅಪ್ ಆಗಿದ್ದ ಕಿವೀಸ್ ಈ ವರ್ಷವೂ ಸೆಮೀಸ್‌ಗೇರುವ ನೆಚ್ಚಿನ ತಂಡಗಳಲ್ಲಿ ಒಂದು. ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಸಮತೋಲನವಿದೆ.
ಶ್ರೇಷ್ಠ ಪ್ರದರ್ಶನ: 2021ರಲ್ಲಿ ರನ್ನರ್-ಅಪ್
6. ಆಸ್ಪ್ರೇಲಿಯಾ, ರ‍್ಯಾಂಕಿಂಗ್: 06
ಹಾಲಿ ವಿಶ್ವ ಚಾಂಪಿಯನ್ ಆಸ್ಪ್ರೇಲಿಯಾಗೆ ತವರಿನ ಲಾಭ ಸಿಗಲಿದೆ. ಉತ್ತಮ ತಂಡವನ್ನೂ ಹೊಂದಿದೆ. ಆದರೆ ಈ ವರ್ಷ ಸ್ಥಿರ ಪ್ರದರ್ಶನ ತೋರಿಲ್ಲ. ಇತ್ತೀಚೆಗೆ ತವರಲ್ಲಿ ಇಂಗ್ಲೆಂಡ್ ವಿರುದ್ಧ ಸರಣಿ ಸೋತಿತ್ತು.
ಶ್ರೇಷ್ಠ ಪ್ರದರ್ಶನ: 2021ರಲ್ಲಿ ಚಾಂಪಿಯನ್
7. ಶ್ರೀಲಂಕಾ, ರ‍್ಯಾಂಕಿಂಗ್: 08
ಹಾಲಿ ಏಷ್ಯಾ ಚಾಂಪಿಯನ್. ಅರ್ಹತಾ ಸುತ್ತಿನಲ್ಲಿ ಆರಂಭಿಕ ಆಘಾತದ ಎದುರು ಪುಟಿದೆದ್ದಿದೆ. ಪ್ರತಿಭಾನ್ವಿತ ಆಟಗಾರರಿದ್ದಾರೆ. ಶಾನಕ ತಂಡ ನಿರ್ವಹಣೆಯಲ್ಲಿ ಪ್ರಬುದ್ಧತೆ ತೋರಿದ್ದಾರೆ. ಅಪಾಯಕಾರಿ ತಂಡಗಳಲ್ಲೊಂದು.
ಶ್ರೇಷ್ಠ ಪ್ರದರ್ಶನ: 2014ರಲ್ಲಿ ಚಾಂಪಿಯನ್
8. ಬಾಂಗ್ಲಾದೇಶ, ರ‍್ಯಾಂಕಿಂಗ್: 09
ತಂಡದಲ್ಲಿ ಆಂತರಿಕ ಗೊಂದಲಗಳಿವೆ. ಹಲವು ಹೊಸ ಆಟಗಾರರಿದ್ದು ಅನುಭವದ ಕೊರತೆ ಇದೆ. ಈ ವರ್ಷ 15ರಲ್ಲಿ 11 ಪಂದ್ಯ ಸೋತಿದೆ. ಶಕೀಬ್, ಮುಸ್ತಾಫಿಜುರ್, ಸರ್ಕಾರ್, ಲಿಟನ್ ಹೆಚ್ಚು ಜವಾಬ್ದಾರಿ ವಹಿಸಬೇಕಿದೆ.
ಶ್ರೇಷ್ಠ ಪ್ರದರ್ಶನ: 2007ರಲ್ಲಿ ಸೂಪರ್-8
9. ಆಫ್ಘಾನಿಸ್ತಾನ, ರ‍್ಯಾಂಕಿಂಗ್: 10
ಟಿ20ಗೆ ತಕ್ಕ ಮನಸ್ಥಿತಿಯೊಂದಿಗೆ ಆಡುವ ಪಡೆ. ಆಕ್ರಮಣಕಾರಿ ಆಟ ತಂಡದ ಬಲ. ರಶೀದ್, ಮುಜೀಬ್, ನಬಿಯಂತಹ ವಿಶ್ವಶ್ರೇಷ್ಠ ಸ್ಪಿನ್ನರ್‌ಗಳಿದ್ದಾರೆ. ಸ್ಫೋಟಕ ಬ್ಯಾಟರ್‌ಗಳ ದಂಡೇ ಇದೆ. ಅಚ್ಚರಿ ಫಲಿತಾಂಶಗಳಿಗೆ ಹೆಸರುವಾಸಿ.
ಶ್ರೇಷ್ಠ ಪ್ರದರ್ಶನ: 2016ರಲ್ಲಿ ಸೂಪರ್-10
10. ಜಿಂಬಾಬ್ವೆ, ರ‍್ಯಾಂಕಿಂಗ್: 11
ಅರ್ಹತಾ ಸುತ್ತಿನಲ್ಲಿ ಗಮನಾರ್ಹ ಪ್ರದರ್ಶನ ನೀಡಿದೆ. ಆಲ್ರೌಂಡರ್ ಸಿಕಂದರ್ ರಾಜಾ ತಂಡದ ಟ್ರಂಪ್ ಕಾರ್ಡ್. ನಾಯಕ ಕ್ರೇಗ್ ಎರ್ವಿನ್ ಜೊತೆ ರಾಜಾ ಉತ್ತಮ ಪ್ರದರ್ಶನ ಮುಂದುವರಿಸಿದರಷ್ಟೇ ತಂಡಕ್ಕೆ ಯಶಸ್ಸು.
ಶ್ರೇಷ್ಠ ಪ್ರದರ್ಶನ: 2022ರಲ್ಲಿ ಸೂಪರ್-12
11. ಐರ್ಲೆಂಡ್, ರ‍್ಯಾಂಕಿಂಗ್: 12
ಸ್ಫೋಟಕ ಬ್ಯಾಟರ್‌ಗಳ ಪಡೆ ಇದೆ. ಸ್ಟಿರ್ಲಿಂಗ್, ಬಾಲ್ಬರ್ನಿ ಉತ್ತಮ ಲಯದಲ್ಲಿದ್ದಾರೆ. ಕ್ಯಾಂಫರ್ ಆಲ್ರೌಂಡ್ ಆಟ ತಂಡದ ಬಲ. ಉತ್ತಮ ವೇಗಿಗಳು, ಗೆರಾತ್ ಡ್ಯಾನ್ಲಿಯಂತಹ ಉತ್ತಮ ಸ್ಪಿನ್ನರ್ ಬಲವೂ ತಂಡಕ್ಕಿದೆ.
ಶ್ರೇಷ್ಠ ಪ್ರದರ್ಶನ: 2009ರಲ್ಲಿ ಸೂಪರ್-8
12. ನೆದರ್‌ಲೆಂಡ್ಸ್, ರ‍್ಯಾಂಕಿಂಗ್: 17
ಅರ್ಹತಾ ಸುತ್ತಿನಲ್ಲಿ ಉತ್ತಮ ಪ್ರದರ್ಶನ ತೋರಿದರೂ ಸ್ಥಿರತೆ ಉಳಿಸಿಕೊಳ್ಳುವಲ್ಲಿ ಹಿಂದೆ ಬಿದ್ದಿದೆ. ಕೆಲ ಅನುಭವಿ ಟಿ20 ಆಟಗಾರರಿದ್ದು, ಅವರ ಮೇಲೆ ತಂಡ ಹೆಚ್ಚು ಅವಲಂಬಿತಗೊಂಡಿದೆ.
ಶ್ರೇಷ್ಠ ಪ್ರದರ್ಶನ: 2014ರಲ್ಲಿ ಸೂಪರ್-10