ಐಪಿಎಲ್ ಹರಾಜಿನಿಂದ ಕೊನೆ ಕ್ಷಣದಲ್ಲಿ ಹಿಂದೆ ಸರಿದ ಇಂಗ್ಲೆಂಡ್ ಸ್ಟಾರ್ ಕ್ರಿಕೆಟಿಗ..!
ಚೆನ್ನೈ: ಬಹುನಿರೀಕ್ಷಿತ 14ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ಚೆನ್ನೈನಲ್ಲಿ ಫೆಬ್ರವರಿ 18ರ ಮಧ್ಯಾಹ್ನ 3 ಗಂಟೆಗೆ ಆಟಗಾರರ ಹರಾಜು ನಡೆಯಲಿದೆ. ಬಿಸಿಸಿಐ ಒಟ್ಟು 292 ಆಟಗಾರರ ಹೆಸರನ್ನು ಹರಾಜಿಗೆ ಶಾರ್ಟ್ ಲಿಸ್ಟ್ ಮಾಡಿತ್ತು.
ಆದರೆ ಐಪಿಎಲ್ ಆಟಗಾರರ ಹರಾಜು ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಇಂಗ್ಲೆಂಡ್ ತಂಡದ ಮಾರಕ ವೇಗಿ ಹರಾಜಿನಿಂದ ಹಿಂದೆ ಸರಿದಿದ್ದಾರೆ. ಯಾರು ಆ ವೇಗಿ? ಹರಾಜಿನಿಂದ ಹಿಂದೆ ಸರಿಯಲು ಕಾರಣವೇನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಮಿಲಿಯನ್ ಡಾಲರ್ ಟೂರ್ನಿ ಎನಿಸಿಕೊಂಡಿರುವ ಐಪಿಎಲ್ ಆಟಗಾರರ ಹರಾಜಿಗೆ ಎಲ್ಲಾ 8 ಫ್ರಾಂಚೈಸಿಗಳು ಸಜ್ಜಾಗಿವೆ.
ಈ ಬಾರಿಯ ಹರಾಜಿನಲ್ಲಿ 1114 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿದ್ದರು. ಈ ಪೈಕಿ 164 ಭಾರತೀಯ ಆಟಗಾರರು ಹಾಗೂ 125 ವಿದೇಶಿ ಆಟಗಾರರ ಹೆಸರನ್ನು ಬಿಸಿಸಿಐ ಶಾರ್ಟ್ ಲಿಸ್ಟ್ ಮಾಡಿತ್ತು.
ಚೆನ್ನೈನಲ್ಲಿ ಫೆಬ್ರವರಿ 18ರ ಮಧ್ಯಾಹ್ನ 3 ಗಂಟೆಯಿಂದ ಆರಂಭವಾಗಲಿರುವ ಆಟಗಾರರ ಹರಾಜಿಗೆ ಕೆಲವೇ ಗಂಟೆಗಳ ಬಾಕಿ ಇರುವಾಗಲೇ ಇಂಗ್ಲೆಂಡ್ ಮಾರಕ ವೇಗಿ ಮಾರ್ಕ್ ವುಡ್ ಹರಾಜಿನಿಂದ ಹಿಂದೆ ಸರಿಯುವ ತೀರ್ಮಾನ ತೆಗೆದುಕೊಂಡಿದ್ದಾರೆ.
ಇಂಗ್ಲೆಂಡ್ ಬಲಗೈ ವೇಗದ ಬೌಲರ್ ಮಾರ್ಕ್ ವುಡ್ ಇಂಗ್ಲೆಂಡ್ ಪರ 18 ಟೆಸ್ಟ್, 53 ಏಕದಿನ ಹಾಗೂ 11 ಟಿ20 ಪಂದ್ಯಗಳನ್ನಾಡಿದ್ದಾರೆ. ಮಾರ್ಕ್ ವುಡ್‌ಗೆ ಈ ಬಾರಿಯ ಹರಾಜಿನಲ್ಲಿ 2 ಕೋಟಿ ರುಪಾಯಿ ಮೂಲ ಬೆಲೆ ನಿಗಧಿಪಡಿಸಲಾಗಿತ್ತು.
ಮಾರ್ಕ್ ವುಡ್ 2018ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕೇವಲ ಒಂದು ಪಂದ್ಯವನ್ನಾಡಿದ್ದರು. ಇದೀಗ ವೈಯುಕ್ತಿಕ ಕಾರಣ ನೀಡಿ ಇಂಗ್ಲೆಂಡ್ ವೇಗಿ ಮಿಲಿಯನ್ ಡಾಲರ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.
ಸದ್ಯ ಹರಾಜಿನಲ್ಲಿ ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಮೋಯಿನ್ ಅಲಿ, ಶಕೀಬ್ ಅಲ್ ಹಸನ್ ಸೇರಿದಂತೆ ಸಾಕಷ್ಟು ಸ್ಟಾರ್ ಆಟಗಾರರು ಪಾಲ್ಗೊಳ್ಳುತ್ತಿದ್ದು, ಯಾವ ಆಟಗಾರರು ಯಾವ ತಂಡ ಕೂಡಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ.
2021ರ ಐಪಿಎಲ್ ಆಟಗಾರರ ಹರಾಜಿನ ಪ್ರತಿಕ್ಷಣದ ಮಾಹಿತಿಯನ್ನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂ ತನ್ನ ಲೈವ ಬ್ಲಾಗ್, ಫೇಸ್‌ಬುಕ್ ಪೇಜ್, ಟ್ವಿಟರ್, ಇನ್‌ಸ್ಟಾಗ್ರಾಂ ಮೂಲಕ ನಿಮ್ಮನ್ನು ತಲುಪಲಿದೆ.