IPL 2023: ಡೆಲ್ಲಿ ಕ್ಯಾಪಿಟಲ್ಸ್‌ಗೆ ನೂತನ ನಾಯಕ ನೇಮಕ..! ಅಕ್ಷರ್ ಪಟೇಲ್ ವೈಸ್ ಕ್ಯಾಪ್ಟನ್
ನವದೆಹಲಿ(ಮಾ.16): ಬಹುನಿರೀಕ್ಷಿತ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಹೀಗಿರುವಾಗಲೇ ಎಲ್ಲಾ ತಂಡಗಳು ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಗೆ ಸಜ್ಜಾಗುತ್ತಿವೆ. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ತನ್ನ ತಂಡದ ನೂತನ ನಾಯಕನ ಹೆಸರನ್ನು ಘೋಷಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಇದೇ ಮಾರ್ಚ್ 31ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ.
ಇನ್ನು ಕಳೆದ ವರ್ಷದ ಕೊನೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್, ಭೀಕರ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಮನೆಯಲ್ಲಿಯೇ ಚೇತರಿಸಿಕೊಳ್ಳುತ್ತಿದ್ದು, 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಹೀಗಾಗಿ ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾದ ಸ್ಪೋಟಕ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್, 2023ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ನಾಯಕನಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
2022ರ ಐಪಿಎಲ್ ಟೂರ್ನಿಗೂ ಮುನ್ನ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ತೊರೆದಿದ್ದ ವಾರ್ನರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇದೀಗ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಪ್ಟನ್ ಆಗಿ ನೇಮಕವಾಗಿದ್ದಾರೆ.
ಇನ್ನು ಡೇವಿಡ್ ವಾರ್ನರ್, ಡೆಲ್ಲಿ ತಂಡದ ನಾಯಕರಾಗಿ ನೇಮಕವಾಗಿದ್ದರೆ, ಅನುಭವಿ ಆಲ್ರೌಂಡರ್ ಅಕ್ಷರ್ ಪಟೇಲ್, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಉಪನಾಯಕರಾಗಿ ನೇಮಕವಾಗಿದ್ದಾರೆ. ಅಕ್ಷರ್ ಪಟೇಲ್ ಕಳೆದ ಆವೃತ್ತಿಯಲ್ಲೂ ಉಪನಾಯಕರಾಗಿದ್ದರು.
ಡೇವಿಡ್ ವಾರ್ನರ್, ಈ ಮೊದಲು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. 2016ರಲ್ಲಿ ನಾಯಕರಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು.
ಐಪಿಎಲ್‌ನಲ್ಲಿ ನಾಯಕನಾಗಿ ಡೇವಿಡ್ ವಾರ್ನರ್ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ಐಪಿಎಲ್‌ನಲ್ಲಿ ವಾರ್ನರ್, ಒಟ್ಟು 69 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿ 35 ಗೆಲುವು, 32 ಸೋಲು ಹಾಗೂ 2 ಪಂದ್ಯಗಳನ್ನು ಟೈ ಮಾಡಿದ್ದಾರೆ.
ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪ್ಲೇ ಆಫ್‌ಗೇರಲು ವಿಫಲವಾಗಿತ್ತು. ಆದರೆ ಡೇವಿಡ್ ವಾರ್ನರ್, ಡೆಲ್ಲಿ ತಂಡದ ಪರ 5 ಅರ್ಧಶತಕ ಸಹಿತ 48ರ ಸರಾಸರಿಯಲ್ಲಿ 432 ರನ್ ಬಾರಿಸುವ ಮೂಲಕ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದರು.
ಡೆಲ್ಲಿ ಫ್ರಾಂಚೈಸಿ ಮೂಲಕವೇ ಐಪಿಎಲ್‌ಗೆ ಎಂಟ್ರಿಕೊಟ್ಟಿದ್ದ ಡೇವಿಡ್ ವಾರ್ನರ್, ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನಾಯಕನಾಗಿ ಚೊಚ್ಚಲ ಟ್ರೋಫಿ ಗೆದ್ದು ಕೊಡುತ್ತಾರಾ ಎನ್ನುವುದಕ್ಕೆ ಕಾಲವೇ ಉತ್ತರ ನೀಡಬೇಕಿದೆ.