ಬೆಂಗ್ಳೂರಲ್ಲಿ ಮತ್ತೊಂದು ಕ್ರಿಕೆಟ್ ಸ್ಟೇಡಿಯಂ ಲೋಕಾರ್ಪಣೆ
ಬೆಂಗಳೂರು(ಫೆ.10): ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ಕುಂಬಳಗೋಡು ಬಳಿ ಇರುವ ನಿತ್ಯಾನಂದನಗರದ ಬಿಜಿಎಸ್ ನಾಲೆಜ್ ಸಿಟಿಯಲ್ಲಿ ಬಿಜಿಎಸ್ ಅಂತಾರಾಷ್ಟ್ರೀಯ ಅಕಾಡೆಮಿ ಶಾಲೆ ಸ್ಕೂಲ್ ಕಟ್ಟಡವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದ್ದಾರೆ. 80 ಯಾರ್ಡ್ ವಿಸ್ತೀರ್ಣವುಳ್ಳ ಸುಸಜ್ಜಿತ ’ಬಿಜಿಎಸ್ ಕ್ರಿಕೆಟ್ ಕ್ರೀಡಾಂಗಣ’ವನ್ನು ಖ್ಯಾತ ಕ್ರಿಕೆಟಿಗ, ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ರಾಹುಲ್ ದ್ರಾವಿಡ್ ಲೋಕಾರ್ಪಣೆ ಮಾಡಿದ್ದಾರೆ.
ಕ್ರೀಡೆಗೆ ಹೆಚ್ಚಿನ ಒತ್ತನ್ನು ನೀಡಬೇಕು. ಈ ನಿಟ್ಟಿನಲ್ಲಿ ಬಿಜಿಎಸ್ ಉತ್ತಮ ಕ್ರೀಡಾಂಗಣವನ್ನು ನಿರ್ಮಿಸಿದೆ. ಇಂತಹ ಕ್ರಿಡಾಂಗಣವನ್ನು ಉದ್ಘಾಟಿಸಲು ನನಗೆ ಸಂತೋಷವಾಗುತ್ತಿದೆ ಎಂದು ಹೇಳಿದ ಸಿಎಂ ಯಡಿಯೂರಪ್ಪ
ನಾನು ಹಲವಾರು ಬಾರಿ ಬಾಲಗಂಗಾಧರನಾಥ ಸ್ವಾಮೀಜಿ ಅವರನ್ನು ಭೇಟಿಯಾಗಿ ಮಾರ್ಗದರ್ಶನ ಪಡೆದಿದ್ದೆ. ಸಂಕಷ್ಟದ ಸಂದರ್ಭದಲ್ಲಿ ನನಗೆ ಮಾರ್ಗದರ್ಶನ ನೀಡಿ ನಾನು ಈ ಮಟ್ಟದಲ್ಲಿ ಬೆಳೆಯುವಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ ಅವರ ಕೊಡುಗೆ ದೊಡ್ಡದಿದೆ. ಮಹಾಸಂಸ್ಥಾನದ ಚಟುವಟಿಕೆಗಳಿಗೆ ಸರ್ಕಾರದ ಬೆಂಬಲ ಸದಾ ಸಿಗಲಿದ್ದು ಶಿಕ್ಷಣ ಚಟುವಟಿಕೆಗಳು ಹೀಗೆ ಮುಂದುವರಿಯಲಿ ಎಂದು ಮುಖ್ಯಮಂತ್ರಿಗಳು ಆಶಿಸಿದರು.
ಬಿಜಿಎಸ್ ಒಳ್ಳೆಯ ಕ್ರಿಕೆಟ್ ಕ್ರಿಡಾಂಗಣವನ್ನು ನಿರ್ಮಿಸಿದ್ದು ಇಲ್ಲಿಂದ ಹೆಚ್ಚು ಹೆಚ್ಚು ಕ್ರಿಕೆಟ್ ಪ್ರತಿಭೆಗಳು ಹೊರ ಹೊಮ್ಮಲಿ. ಒಳ್ಳೆಯ ಕ್ರಿಕೆಟ್ ಪಂದ್ಯಗಳು ನಡೆಯಲಿ. ಮುಂದೊಂದು ದಿನ ನಾನೂ, ರಾಹುಲ್ ದ್ರಾವಿಡ್ ಈ ಕ್ರೀಡಾಂಗಣಕ್ಕೆ ಬಂದು ಆಟ ಆಡುವ ಸಂದರ್ಭ ಬರಲಿ ಎಂದು ಖ್ಯಾತ ನಟ ಸುದೀಪ್ ಹಾರೈಸಿದರು.
ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ನ ರವಿಶಂಕರ ಗುರೂಜಿ, ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ಸಚಿವ ಎಸ್.ಟಿ.ಸೋಮಶೇಖರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹಿಂದಿನ ಪೀಠಾಧ್ಯಕ್ಷರಾಗಿದ್ದ ಬಾಲಗಂಗಾಧರನಾಥ ಸ್ವಾಮೀಜಿ ಅವರ 76ನೇ ಜನ್ಮ ದಿನಗದ ಅಂಗವಾಗಿ ಈ ಎರಡು ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣವನ್ನು ಈ ಶಾಲೆಯಲ್ಲಿ ನೀಡಲಾಗುತ್ತದೆ. ಹಾಗೆಯೇ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪಂದ್ಯಗಳನ್ನು ಆಯೋಜಿಸಲು ಆರ್ಹವಾದ ಕ್ರಿಕೆಟ್ ಮೈದಾನವನ್ನು ನಿರ್ಮಿಸಲಾಗಿದೆ.