- Home
- Sports
- Cricket
- ಸತತ ಸೋಲಿನಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಹೊಸ ಆಘಾತ..! ಸ್ಟಾರ್ ಆಲ್ರೌಂಡರ್ ಔಟ್, ಶ್ರೀರಾಮನ ಭಕ್ತನ ಸೇರ್ಪಡೆ!
ಸತತ ಸೋಲಿನಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಹೊಸ ಆಘಾತ..! ಸ್ಟಾರ್ ಆಲ್ರೌಂಡರ್ ಔಟ್, ಶ್ರೀರಾಮನ ಭಕ್ತನ ಸೇರ್ಪಡೆ!
ಮುಂಬೈ: 19ನೇ ಸೀಸನ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಟಗಾರರಿಗೆ ಗಾಯದ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದೆ. ಇದೆಲ್ಲರ ನಡುವೆ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌ಗೆ ಬಿಗ್ ಶಾಕ್ ಎದುರಾಗಿದ್ದು, ಮಿಚೆಲ್ ಸ್ಯಾಂಟ್ನರ್ ತಂಡದಿಂದ ಹೊರಬಿದ್ದಿದ್ದು, ರಾಮ ಭಕ್ತನ ಸೇರ್ಪಡೆಯಾಗಿದೆ.

ಮುಂಬೈ ಇಂಡಿಯನ್ಸ್ ತಂಡಕ್ಕೆ ಬಿಗ್ ಶಾಕ್
2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ಗೆ ಗಾಯದ ಸಮಸ್ಯೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಮುಂಬೈಗೆ ಇದೀಗ ಸ್ಟಾರ್ ಆಲ್ರೌಂಡರ್ ಮಿಚೆಲ್ ಸ್ಯಾಂಟ್ನರ್ ಗಾಯಗೊಂಡು ತಂಡದಿಂದ ಹೊರಬಿದ್ದಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ ಮುಂಬೈ ಇಂಡಿಯನ್ಸ್
ಸದ್ಯ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಆಡಿದ ಏಳು ಪಂದ್ಯಗಳ ಪೈಕಿ ಕೇವಲ ಎರಡು ಗೆಲುವು ಹಾಗೂ ಐದು ಸೋಲುಗಳೊಂದಿಗೆ ಕೇವಲ 4 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಪ್ಲೇ ಆಫ್ ಕನಸನ್ನು ಜೀವಂತವಾಗಿಟ್ಟುಕೊಳ್ಳಬೇಕಿದ್ದರೇ ಮುಂಬೈ ತಂಡವು ಲೀಗ್ ಹಂತದ ಇನ್ನುಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಮುಂಬೈ ಇಂಡಿಯನ್ಸ್ ತಂಡದಿಂದ ಮಿಚೆಲ್ ಸ್ಯಾಂಟ್ನರ್
ಹೀಗಿರುವಾಗಾಲೇ ಸ್ಟಾರ್ ಆಲ್ರೌಂಡರ್ ಮಿಚೆಲ್ ಸ್ಯಾಂಟ್ನರ್ ಇತ್ತೀಚೆಗೆ ವಾಂಖೆಡೆಯಲ್ಲಿ ಚೆನ್ನೈ ವಿರುದ್ಧ ಪಂದ್ಯದ ವೇಳೆ ಬೌಂಡರಿ ಲೈನ್ ಬಳಿ ಕ್ಯಾಚ್ ಪ್ರಯತ್ನದಲ್ಲಿ ಭುಜದ ಗಾಯಕ್ಕೆ ತುತ್ತಾಗಿದ್ದರು. ಗಾಯದ ಪ್ರಮಾಣ ಗಂಭೀರವಾಗಿರುವುದರಿಂದಾಗಿ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಈ ಸೀಸನ್ ಐಪಿಎಲ್‌ನಲ್ಲಿ ಸ್ಯಾಂಟ್ನರ್ 4 ಪಂದ್ಯಗಳನ್ನಾಡಿ ಐದು ವಿಕೆಟ್ ಕಬಳಿಸಿದ್ದಾರೆ.
ಐಪಿಎಲ್‌ನಲ್ಲಿ ಎರಡು ಪಂದ್ಯಗಳನ್ನಾಡಿರುವ ಮಹರಾಜ್
ಇದೀಗ ಮಿಚೆಲ್ ಸ್ಯಾಂಟ್ನರ್ ಅವರ ಸ್ಥಾನಕ್ಕೆ ದಕ್ಷಿಣ ಆಫ್ರಿಕಾ ಮೂಲದ ಆಲ್ರೌಂಡರ್, ಶ್ರೀರಾಮನ ಪರಮ ಭಕ್ತ ಕೇಶವ್ ಮಹರಾಜ್ ಇದೀಗ ಮುಂಬೈ ಇಂಡಿಯನ್ಸ್ ತಂಡವನ್ನು ಕೂಡಿಕೊಂಡಿದ್ದಾರೆ. ಕೇಶವ್ ಮಹರಾಜ್ ಇದುವರೆಗೂ ಐಪಿಎಲ್‌ನಲ್ಲಿ ಕೇವಲ ಎರಡು ಪಂದ್ಯಗಳನ್ನಷ್ಟೇ ಆಡಿದ್ದಾರೆ.
ಶ್ರೀರಾಮನ ಭಕ್ತ ಕೇಶವ್ ಮಹರಾಜ್
ದಕ್ಷಿಣ ಆಫ್ರಿಕಾದ ಅನುಭವಿ ಸ್ಪಿನ್ನರ್ ಆಗಿ ಗುರುತಿಸಿಕೊಂಡಿರುವ ಕೇಶವ್ ಮಹರಾಜ್, ಒಟ್ಟಾರೆ 218 ಟಿ20 ಪಂದ್ಯಗಳನ್ನಾಡಿ 191 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಇದೀಗ ಕೇಶವ್ ಮಹರಾಜ್ ಅವರ ಸೇರ್ಪಡೆ ಮುಂಬೈ ಇಂಡಿಯನ್ಸ್ ತಂಡದ ಅದೃಷ್ಟ ಬದಲಾಯಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ಕಮ್‌ಬ್ಯಾಕ್ ಮಾಡುವ ವಿಶ್ವಾಸದಲ್ಲಿ ಮುಂಬೈ ಇಂಡಿಯನ್ಸ್
ಇದೀಗ ಮುಂಬೈ ಇಂಡಿಯನ್ಸ್ ತಂಡವು ಏಪ್ರಿಲ್ 29ರಂದು ಬಲಿಷ್ಠ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದ್ದು, ಗೆಲುವಿನ ಹಳಿಗೆ ಮರಳುವ ವಿಶ್ವಾಸದಲ್ಲಿದೆ. ಇನ್ನುಳಿದ ಲೀಗ್ ಹಂತದ ಪಂದ್ಯಗಳು ಮುಂಬೈ ಇಂಡಿಯನ್ಸ್ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಂಡಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

