ಐಪಿಎಲ್‌ಗೆ ಮತ್ತೆರಡು ತಂಡ ಸೇರ್ಪಡೆ; ನಾಲ್ವರು ಆಟಗಾರರ ರೀಟೈನ್‌ಗೆ ಅವಕಾಶ..!
ನವದೆಹಲಿ: 15ನೇ ಆವೃತ್ತಿಯ ಐಪಿಎಲ್ ಟೂರ್ನಿ ಆಯೋಜನೆಯ ಕುರಿತಂತೆ ಬಿಸಿಸಿಐ ಈಗಿನಿಂದಲೇ ನೀಲನಕ್ಷೆ ಸಿದ್ದಪಡಿಸುತ್ತಿದೆ. 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಈಗಿರುವ ಎಂಟು ತಂಡಗಳ ಜತೆ ಇನ್ನೆರಡು ಹೊಸ ತಂಡಗಳು ಸೇರ್ಪಡೆಯಾಗುವುದು ಬಹುತೇಕ ಖಚಿತ ಎನಿಸಿದೆ. ಹೀಗಾಗಿ ಆಟಗಾರರ ರೀಟೈನ್, ಮೆಗಾ ಹರಾಜು, ಮಾಧ್ಯಮಗಳ ಹಕ್ಕು ಮುಂತಾದವುಗಳ ಬಗ್ಗೆ ಬಿಸಿಸಿಐ ಮಹತ್ವದ ತೀರ್ಮಾನ ಕೈಗೊಂಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮತ್ತೆರಡು ಹೊಸ ಫ್ರಾಂಚೈಸಿಗಳು ಸೇರ್ಪಡೆಯಾಗಲಿದ್ದು, ಆಗಸ್ಟ್ ಮಧ್ಯದಲ್ಲಿ ಟೆಂಡರ್ ಕರೆಯಲಾಗುತ್ತದೆ. ಬಿಡ್ ಸಲ್ಲಿಸಲು ಅಕ್ಟೋಬರ್‌ವರೆಗೂ ಅವಕಾಶ ನೀಡಲಾಗುತ್ತದೆ ಎನ್ನಲಾಗಿದೆ.
ಹೊಸ ಎರಡು ತಂಡಗಳಿಗೆ ಬಿಡ್ ಸಲ್ಲಿಸಲು ಕೋಲ್ಕತ ಮೂಲದ ಆರ್ ಪಿ ಸಂಜೀವ್ ಗೋಯೆಂಕಾ ಗ್ರೂಪ್, ಅಹಮದಾಬಾದ್ ಮೂಲದ ಅದಾನಿ ಗ್ರೂಪ್, ಹೈದರಾಬಾದ್ ಮೂಲದ ಏರೋಬಿಂದೋ ಫಾರ್ಮಾ ಲಿಮಿಟೆಡ್ ಹಾಗೂ ಗುಜರಾತ್ ಮೂಲದ ಟೊರೆಂಟೋ ಗ್ರೂಪ್ ಆಸಕ್ತಿ ತೋರಿದೆ ಎನ್ನಲಾಗಿದೆ.
ಇನ್ನು 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಮೆಗಾ ಹರಾಜು ನಡೆಯಲಿದ್ದು, ಸದ್ಯ ಫ್ರಾಂಚೈಸಿಗಳಿಗಿರುವ 85 ಕೋಟಿ ರುಪಾಯಿ ಮಿತಿಯನ್ನು 90 ಕೋಟಿ ರುಪಾಯಿಗೆ ಹೆಚ್ಚಿಸಲು ಬಿಸಿಸಿಐ ತೀರ್ಮಾನ ತೆಗೆದುಕೊಂಡಿದೆ ಎನ್ನಲಾಗಿದೆ. ಇದರಲ್ಲಿ 75% ಹಣವನ್ನು ಫ್ರಾಂಚೈಸಿಗಳು ಕಡ್ಡಾಯವಾಗಿ ಆಟಗಾರರಿಗೆ ಹಂಚಬೇಕು.
ಇನ್ನು ಆಟಗಾರರನ್ನು ರೀಟೈನ್ ಮಾಡಿಕೊಳ್ಳುವ ವಿಚಾರ ಕೂಡಾ ಅಂತಿಮಗೊಳಿಸಲಾಗಿದ್ದು, ಈಗಿರುವ 8 ಫ್ರಾಂಚೈಸಿಗಳು ತಲಾ ನಾಲ್ವರು ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಬಿಸಿಸಿಐ ಅವಕಾಶ ಕಲ್ಪಿಸಿಕೊಟ್ಟಿದೆ.
ಇದರರ್ಥ ನಾಲ್ವರು ಆಟಗಾರರ ಪೈಕಿ ಮೂವರು ಭಾರತೀಯ ಆಟಗಾರರು ಹಾಗೂ ಓರ್ವ ವಿದೇಶಿ ಆಟಗಾರ, ಅಥವಾ ಇಬ್ಬರು ಭಾರತೀಯ ಕ್ರಿಕೆಟಿಗರು ಮತ್ತಿಬ್ಬರು ವಿದೇಶಿ ಕ್ರಿಕೆಟಿಗರನ್ನು ತನ್ನಲ್ಲೇ ಉಳಿಸಿಕೊಳ್ಳಲು ಬಿಸಿಸಿಐ ಅನುವು ಮಾಡಿಕೊಟ್ಟಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಉದಾಹರಣೆಗೆ ಆರ್‌ಸಿಬಿ ತನ್ನ ಸ್ಟಾರ್ ಆಟಗಾರರಾದ ಎಬಿ ಡಿವಿಲಿಯರ್ಸ್, ಕೈಲ್ ಜೇಮಿಸನ್, ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಅವರನ್ನು ರೀಟೈನ್ ಮಾಡಿಕೊಳ್ಳಬಹುದಾಗಿದೆ.
ಅಥವಾ ಆರ್‌ಸಿಬಿ ಮೂವರು ಭಾರತೀಯ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಯುಜುವೇಂದ್ರ ಚಹಲ್ ಹಾಗೂ ಓರ್ವ ವಿದೇಶಿ ಆಟಗಾರನಾಗಿ ಎಬಿ ಡಿವಿಲಿಯರ್ಸ್ ಅವರನ್ನು ರೀಟೈನ್ ಮಾಡಿಕೊಳ್ಳಬಹುದಾಗಿದೆ.
2021ರ ಅಂತ್ಯದ ವೇಳೆಗೆ ಬಿಸಿಸಿಐ ಮಾಧ್ಯಮ ಹಕ್ಕುಗಳ ಹರಾಜನ್ನು ಕೂಡಾ ಕರೆಯಲಿದ್ದು, ಈ ಬಾರಿ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯ ಮಾಧ್ಯಮ ಹಕ್ಕನ್ನು ಯಾರು ಪಡೆಯಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ.