- Home
- Sports
- Cricket
- ಇವತ್ತು ಜಿಂಬಾಬ್ವೆ ಎದುರು ಐರ್ಲೆಂಡ್ ಗೆಲ್ಲಲಿ ಎಂದು ಬೇಡಿಕೊಳ್ಳುತ್ತಿದೆ ಆಸ್ಟ್ರೇಲಿಯಾ! ಕಾಂಗರೂ ಪಡೆಗೆ ಇದೆಂಥಾ ಪರಿಸ್ಥಿತಿ
ಇವತ್ತು ಜಿಂಬಾಬ್ವೆ ಎದುರು ಐರ್ಲೆಂಡ್ ಗೆಲ್ಲಲಿ ಎಂದು ಬೇಡಿಕೊಳ್ಳುತ್ತಿದೆ ಆಸ್ಟ್ರೇಲಿಯಾ! ಕಾಂಗರೂ ಪಡೆಗೆ ಇದೆಂಥಾ ಪರಿಸ್ಥಿತಿ
ಬೆಂಗಳೂರು: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಈಗಾಗಲೇ ಹಲವು ಅಚ್ಚರಿ ಫಲಿತಾಂಶಗಳು ಹೊರಬಿದ್ದಿವೆ. ಇದೀಗ ಮಾಜಿ ನಾಯಕ ಆಸ್ಟ್ರೇಲಿಯಾ, ಇಂದು ನಡೆಯಲಿರುವ ಪಂದ್ಯದಲ್ಲಿ ಜಿಂಬಾಬ್ವೆ ಎದುರು ಐರ್ಲೆಂಡ್ ಗೆಲ್ಲಲಿ ಎಂದು ಬೇಡಿಕೊಳ್ಳುವ ಪರಿಸ್ಥಿತಿಗೆ ಬಂದು ನಿಂತಿದೆ.

ಕಾಂಗರೂ ಪಡೆಗೆ ಸೋಲುಣಿಸಿದ ಶ್ರೀಲಂಕಾ
ಐಸಿಸಿ 20 ವಿಶ್ವಕಪ್ ಟೂರ್ನಿಯ 'ಬಿ' ಗುಂಪಿನ ಪಂದ್ಯದಲ್ಲಿ ಸಹ ಆತಿಥೇಯ ಶ್ರೀಲಂಕಾ ತಂಡವು ಬಲಿಷ್ಠ ಆಸ್ಟ್ರೇಲಿಯಾ ತಂಡಕ್ಕೆ ಸೋಲಿನ ಶಾಕ್ ನೀಡುವ ಮೂಲಕ ಸೂಪರ್-8 ಹಂತಕ್ಕೆ ಅಧಿಕೃತ ಲಗ್ಗೆಯಿಟ್ಟಿದೆ. ದಶುನ್ ಶನಕಾ ನೇತೃತ್ವದ ಶ್ರೀಲಂಕಾ ತಂಡವು ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಮುಂದಿನ ಹಂತಕ್ಕೆ ಟಿಕೆಟ್ ಕನ್ಫರ್ಮ್ ಮಾಡಿಕೊಂಡಿದೆ.
ಶತಕ ಸಿಡಿಸಿ ಲಂಕಾ ಗೆಲ್ಲಿಸಿದ ನಿಸ್ಸಾಂಕ
ಪಲ್ಲೆಕೆಲೆ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 181 ರನ್ ಕಲೆಹಾಕಿತ್ತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡವು ಕೇವಲ ಎರಡು ವಿಕೆಟ್ ಕಳೆದುಕೊಂಡು ಎರಡು ಓವರ್ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. ಆರಂಭಿಕ ಬ್ಯಾಟರ್ ಪತುಮ್ ನಿಸ್ಸಾಂಕ ಅಜೇಯ ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಲಂಕಾ ಎದುರು ಹೀನಾಯ ಸೋಲು ಕಂಡ ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ
ಇನ್ನೊಂದೆಡೆ ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವು ಇದೀಗ ಟೂರ್ನಿಯಲ್ಲಿ ಸತತ ಎರಡನೇ ಸೋಲು ಕಾಣುವ ಮೂಲಕ ಸೂಪರ್-8 ಹಾದಿಯನ್ನು ಮತ್ತಷ್ಟು ಕಠಿಣ ಮಾಡಿಕೊಂಡಿದೆ. ಮೊದಲ ಪಂದ್ಯದಲ್ಲಿ ಐರ್ಲೆಂಡ್ ಎದುರು ಗೆದ್ದು ಶುಭಾರಂಭ ಮಾಡಿದ್ದ ಮಿಚೆಲ್ ಮಾರ್ಷ್ ಪಡೆ, ಆ ಬಳಿಕ ಜಿಂಬಾಬ್ವೆ ಎದುರು 23 ರನ್ ಅಂತರದ ಆಘಾತಕಾರಿ ಸೋಲು ಅನುಭವಿಸಿತ್ತು. ಇದೀಗ ಲಂಕಾ ಎದುರು 8 ವಿಕೆಟ್ ಹೀನಾಯ ಸೋಲು ಕಂಡಿದೆ.
ಜಿಂಬಾಬ್ವೆ-ಐರ್ಲೆಂಡ್ ಪಂದ್ಯದ ಮೇಲೆ ಕಣ್ಣಿಟ್ಟ ಆಸ್ಟ್ರೇಲಿಯಾ
ಶ್ರೀಲಂಕಾ ಎದುರಿನ ಪಂದ್ಯದಲ್ಲಿ ಸೋಲು ಕಾಣುತ್ತಿದ್ದಂತೆಯೇ ಇದೀಗ ಇಂದು ನಡೆಯಲಿರುವ ಜಿಂಬಾಬ್ವೆ ಹಾಗೂ ಐರ್ಲೆಂಡ್ ನಡುವಿನ ಪಂದ್ಯದ ಮೇಲೆ ಆಸ್ಟ್ರೇಲಿಯಾ ತಂಡವು ಕಣ್ಣಿಟ್ಟಿದೆ. ಇಂದು ಜಿಂಬಾಬ್ವೆ ಎದುರು ಐರ್ಲೆಂಡ್ ತಂಡವು ಗೆಲುವು ಸಾಧಿಸಲಿ ಎಂದು ಬೇಡಿಕೊಳ್ಳುವ ಪರಿಸ್ಥಿತಿಗೆ ಕಾಂಗರೂ ಪಡೆ ಬಂದು ನಿಂತಿದೆ.
ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ ಜಿಂಬಾಬ್ವೆ
ಹೌದು, ಯಾಕೆಂದರೆ ಈಗಾಗಲೇ 'ಬಿ' ಗುಂಪಿನಲ್ಲಿ ಜಿಂಬಾಬ್ವೆ ತಂಡವು ಆಡಿದ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇನ್ನೊಂದೆಡೆ ಆಸ್ಟ್ರೇಲಿಯಾ ತಂಡವು ಆಡಿದ ಮೂರು ಪಂದ್ಯಗಳಲ್ಲಿ ಒಂದು ಗೆಲುವು ಹಾಗೂ ಎರಡು ಸೋಲು ಅನುಭವಿಸಿ ಮೂರನೇ ಸ್ಥಾನದಲ್ಲಿದೆ.
ಇಂದು ಜಿಂಬಾಬ್ವೆ ಗೆದ್ದರೇ ಅಸೀಸ್ ಅಭಿಯಾನ ಅಂತ್ಯ
ಒಂದು ವೇಳೆ ಇಂದು ನಡೆಯಲಿರುವ ಪಂದ್ಯದಲ್ಲಿ ಜಿಂಬಾಬ್ವೆ ತಂಡವು ಐರ್ಲೆಂಡ್ ಎದುರು ಗೆಲುವು ಸಾಧಿಸಿದರೆ ಆಸ್ಟ್ರೇಲಿಯಾ ತಂಡವು ಅಧಿಕೃತವಾಗಿ ಸೂಪರ್-8 ರೇಸ್‌ನಿಂದ ಹೊರಬೀಳಲಿದೆ. ಅದೇ ಜಿಂಬಾಬ್ವೆ ಎದುರು ಐರ್ಲೆಂಡ್ ಗೆದ್ದರೇ ಕಾಂಗರೂ ಪಡೆಯ ಸೂಪರ್-8 ಕನಸು ಕೊಂಚ ಜೀವಂತವಾಗಿರಲಿದೆ. ಯಾಕೆಂದರೆ ಆಸ್ಟ್ರೇಲಿಯಾ ತಂಡವು ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಓಮಾನ್ ತಂಡವನ್ನು ಎದುರಿಸಲಿದೆ. ಆ ಪಂದ್ಯದಲ್ಲಿ ಆಸೀಸ್ ಭಾರೀ ಅಂತರದಲ್ಲಿ ಗೆದ್ದರೇ ಸೂಪರ್-8 ಪ್ರವೇಶಿಸಬಹುದು. ಹೀಗಾಗಬೇಕಿದ್ದರೇ ಇಂದು ಐರ್ಲೆಂಡ್ ಗೆಲ್ಲಬೇಕು ಎನ್ನುವುದು ಆಸೀಸ್ ಪ್ರಾರ್ಥನೆಯಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

