IPL 2021 ಟೂರ್ನಿಗೂ ಮುನ್ನ ಆರ್‌ಸಿಬಿ ಬಗ್ಗೆ ನೀವು ತಿಳಿದಿರಲೇಬೇಕಾದ ಇಂಟ್ರೆಸ್ಟಿಂಗ್ ಅಂಕಿ-ಅಂಶಗಳಿವು..!
ಬೆಂಗಳೂರು: ಚೊಚ್ಚಲ ಐಪಿಎಲ್ ಟ್ರೋಫಿಯ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಿಂದೆಂದಿಗಿಂತಲೂ ಬಲಿಷ್ಠವಾಗಿ ಸಜ್ಜಾಗಿದೆ. 3 ಬಾರಿ ಐಪಿಎಲ್ ಫೈನಲ್ ಪ್ರವೇಶಿಸಿರುವ ಆರ್‌ಸಿಬಿ ಪ್ರಶಸ್ತಿ ಸುತ್ತಿನಲ್ಲಿ ಮುಗ್ಗರಿಸುವ ಮೂಲಕ ನಿರಾಸೆ ಅನುಭವಿಸಿದೆ. ಇದೀಗ ಏಪ್ರಿಲ್ 09ರಿಂದ ಆರಂಭವಾಗಲಿರುವ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
2021ನೇ ಸಾಲಿನ ಐಪಿಎಲ್ ಟೂರ್ನಿಗೂ ಮುನ್ನ ಅರ್‌ಸಿಬಿ ಬಗ್ಗೆ ತಿಳಿದಿರಲೇಬೇಕಾದ ಕೆಲವು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ ನೋಡಿ.
ಇದುವರೆಗೂ ಉದ್ಘಾಟನಾ ಪಂದ್ಯದಲ್ಲಿ ಗೆಲುವನ್ನೇ ಕಂಡಿಲ್ಲ ಅರ್‌ಸಿಬಿ
ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ ಇದುವರೆಗೂ 3 ಬಾರಿ ಉದ್ಘಾಟನಾ ಪಂದ್ಯವನ್ನು ಆಡಿದ್ದು, ಮೂರು ಬಾರಿಯು ಗೆಲುವಿನ ಖಾತೆ ತೆರೆಯುಲ್ಲಿ ಬೆಂಗಳೂರು ಮೂಲದ ತಂಡ ವಿಫಲವಾಗಿದೆ. ಈ ಬಾರಿಯಾದರೂ ಮುಂಬೈ ಎದುರು ಗೆದ್ದು ಹಳೆಯ ದಾಖಲೆ ಅಳಿಸಿಹಾಕುತ್ತಾ ಕಾದು ನೋಡಬೇಕಿದೆ.
ಸತತ ಸೋಲಿನ ಸರಪಳಿಯಿಂದ ಪಾರಾಗುತ್ತಾ ಕಿಂಗ್ ಕೊಹ್ಲಿ ಪಡೆ
13ನೇ ಆವೃತ್ತಿಯ ಕೊನೆಯ 5 ಪಂದ್ಯಗಳಲ್ಲಿ ಆರ್‌ಸಿಬಿ ಸತತ ಸೋಲುಗಳನ್ನು ಕಂಡಿದೆ. ಇದುವರೆಗೂ ಆರ್‌ಸಿಬಿ 2018 ಹಾಗೂ 2019ರಲ್ಲಿ ಸತತ 7 ಸೋಲು ಕಂಡು ಕುಖ್ಯಾತಿಗೆ ಪಾತ್ರವಾಗಿದೆ. ಹೀಗಾಗಿ ಆರ್‌ಸಿಬಿ ಮುಂಬೈ ಮಣಿಸಿ ಗೆಲುವಿನ ಟ್ರ್ಯಾಕ್‌ಗೆ ಮರಳುತ್ತಾ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ
ಇನ್ನು ಕೇವಲ 122 ರನ್ ಬಾರಿಸಿದರೆ ಕೊಹ್ಲಿ ದಾಖಲೆಯ ಕಿರೀಟಕ್ಕೆ ಮತ್ತೊಂದು ಗರಿ
ಆರ್‌ಸಿಬಿ ನಾಯಕ ವಿರಾಟ್ 14ನೇ ಆವೃತ್ತಿಯ ಐಪಿಎಲ್‌ಗೂ ಮುನ್ನ ಇದುವರೆಗೂ 184 ಇನಿಂಗ್ಸ್‌ಗಳನ್ನಾಡಿ 5878 ರನ್ ಬಾರಿಸಿದ್ದಾರೆ. ಇನ್ನು 122 ರನ್ ಬಾರಿಸಿದರೆ ಐಪಿಎಲ್ ಇತಿಹಾಸದಲ್ಲಿ 6 ಸಾವಿರ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎನ್ನುವ ಕೀರ್ತಿಗೆ ವಿರಾಟ್ ಭಾಜನರಾಗಲಿದ್ದಾರೆ.
ಧೋನಿ- ರೋಹಿತ್ ಸಾಲಿಗೆ ಸೇರಲಿದ್ದಾರೆ ವಿರಾಟ್ ಕೊಹ್ಲಿ
ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಇದುವರೆಗೂ 192 ಪಂದ್ಯಗಳನ್ನಾಡಿದ್ದು, ಇನ್ನು ಕೇವಲ 8 ಪಂದ್ಯಗಳನ್ನಾಡಿದರೆ, ಐಪಿಎಲ್ ಇತಿಹಾಸದಲ್ಲಿ 200 ಪಂದ್ಯಗಳನ್ನಾಡಿದ 3ನೇ ಬ್ಯಾಟ್ಸ್‌ಮನ್ ಎನಿಸಿಕೊಳ್ಳಲಿದ್ದಾರೆ. ಈಗಾಗಲೇ ಎಂ ಎಸ್ ಧೋನಿ ಹಾಗೂ ರೋಹಿತ್ ಶರ್ಮಾ 200 ಐಪಿಎಲ್ ಪಂದ್ಯಗಳನ್ನಾಡಿದ ಸಾಧನೆ ಮಾಡಿದ್ದಾರೆ.
ಐಪಿಎಲ್‌ನಲ್ಲಿ 269 ರನ್ ಬಾರಿಸಿದರೆ ಅಪರೂಪದ ದಾಖಲೆ ವಿರಾಟ್ ಪಾಲು
ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 289 ಇನಿಂಗ್ಸ್‌ಗಳನ್ನಾಡಿ 9731 ರನ್ ಬಾರಿಸಿದ್ದಾರೆ. ಇನ್ನು ಕೇವಲ 269 ರನ್ ಬಾರಿಸಿದರೆ ಟಿ20 ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎನ್ನುವ ಹಿರಿಮೆ ವಿರಾಟ್ ಕೊಹ್ಲಿ ಪಾಲಾಗಲಿದೆ.
100ನೇ ಐಪಿಎಲ್ ಪಂದ್ಯವಾಡಲು ಸಜ್ಜಾಗಿದ್ದಾರೆ ಯುಜುವೇಂದ್ರ ಚಹಲ್
ಆರ್‌ಸಿಬಿ ಸ್ಪಿನ್ ಅಸ್ತ್ರ ಯುಜುವೇಂದ್ರ ಚಹಲ್ ಇದುವರೆಗೂ 99 ಐಪಿಎಲ್ ಪಂದ್ಯವನ್ನಾಡಿದ್ದು, ಮುಂಬೈ ಇಂಡಿಯನ್ಸ್ ವಿರುದ್ದದ ಮೊದಲ ಪಂದ್ಯ ಚಹಲ್ ಪಾಲಿನ 100ನೇ ಐಪಿಎಲ್ ಪಂದ್ಯ ಎನಿಸಲಿದೆ.
200 ಪಂದ್ಯಗಳ ಹೊಸ್ತಿಲಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು
ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೆಂಗಳೂರು ತಂಡ ಕಪ್ ಗೆಲ್ಲದಿದ್ದರೂ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದೆ. ಇದುವರೆಗೂ 196 ಐಪಿಎಲ್ ಪಂದ್ಯಗಳನ್ನಾಡಿರುವ ಆರ್‌ಸಿಬಿ ಇನ್ನು ಕೇವಲ 4 ಪಂದ್ಯಗಳನ್ನಾಡಿದರೆ, 200 ಪಂದ್ಯಗಳನ್ನಾಡಿದ ಎರಡನೇ ಐಪಿಎಲ್ ತಂಡ ಎನಿಸಿಕೊಳ್ಳಲಿದೆ. 5 ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ 203 ಪಂದ್ಯಗಳನ್ನಾಡಿದೆ.