BCCI Central Contract: ಮುಗಿಯಿತಾ ಟೀಂ ಇಂಡಿಯಾದ ಈ 7 ಕ್ರಿಕೆಟಿಗರ ವೃತ್ತಿಬದುಕು..?
ಮುಂಬೈ(ಮಾ.27): ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಇದೀಗ 2022-23ನೇ ಸಾಲಿನ ಕೇಂದ್ರ ಗುತ್ತಿಗೆಯನ್ನು ಪ್ರಕಟಿಸಿದ್ದು, ಬರೋಬ್ಬರಿ 26 ಆಟಗಾರರು ಸೆಂಟ್ರಲ್ ಕಾಂಟ್ರ್ಯಾಕ್ಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇದೇ ವೇಳೆ 7 ಕ್ರಿಕೆಟಿಗರು ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಿಂದ ಹೊರಬಿದ್ದಿದ್ದಾರೆ.
ಬಿಸಿಸಿಐ ಕೇಂದ್ರ ಗುತ್ತಿಗೆಯಿಂದ ಹೊರಬಿದ್ದ ಆಟಗಾರರು ಯಾರು? ಮುಗಿಯಿತಾ ಇವರ ಕ್ರಿಕೆಟ್ ವೃತ್ತಿಬದುಕು ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
1. ಅಜಿಂಕ್ಯ ರಹಾನೆ:
ಭಾರತ ಕ್ರಿಕೆಟ್ ತಂಡದ ಅನುಭವಿ ಮಧ್ಯಮ ಕ್ರಮಾಂಕದ ಬ್ಯಾಟರ್ ಅಜಿಂಕ್ಯ ರಹಾನೆ, ಕಳೆದ ಕೆಲ ಸಮಯದಿಂದ ಫಾರ್ಮ್ ಸಮಸ್ಯೆ ಅನುಭವಿಸುತ್ತಾ ಬಂದಿದ್ದರು.
ಇತ್ತೀಚೆಗಷ್ಟೇ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದ, ಟೀಂ ಇಂಡಿಯಾ ಮಾಜಿ ಉಪನಾಯಕ ಅಜಿಂಕ್ಯ ರಹಾನೆ, ಇದೀಗ ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಿಂದಲೂ ಹೊರಬಿದ್ದಿದ್ದು, ವೃತ್ತಿಬದುಕಿನ ಮೇಲೆ ಕಾರ್ಮೋಡ ಕವಿದಂತೆ ಆಗಿದೆ.
2. ಇಶಾಂತ್ ಶರ್ಮಾ:
ಟೀಂ ಇಂಡಿಯಾ ಅನುಭವಿ ನೀಳಕಾಯದ ವೇಗಿ ಇಶಾಂತ್ ಶರ್ಮಾ, ಟೀಂ ಇಂಡಿಯಾ ಪರ 100 ಟೆಸ್ಟ್ ಪಂದ್ಯವನ್ನಾಡಿದ ಕೆಲವೇ ಕೆಲವು ಆಟಗಾರರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಫಿಟ್ನೆಸ್ ಸಮಸ್ಯೆಯಿಂದಾಗಿ ಇಶಾಂತ್ ಶರ್ಮಾ, ಸಾಕಷ್ಟು ಸಮಯದಿಂದ ಭಾರತ ತಂಡದ ಹೊರಗುಳಿದಿದ್ದಾರೆ.
ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ ಶಾರ್ದೂಲ್ ಠಾಕೂರ್ ಅವರಂತಹ ವೇಗಿಗಳು ತಂಡದಲ್ಲಿರುವುದರಿಂದಾಗಿ ಇಶಾಂತ್ ಶರ್ಮಾ ಅವರನ್ನು ಕೇಂದ್ರ ಗುತ್ತಿಗೆಯಿಂದ ಹೊರಗಿಡಲಾಗಿದ್ದು, ಬಹುತೇಕ ಇಶಾಂತ್ ಶರ್ಮಾ ಕ್ರಿಕೆಟ್ ಬದುಕಿನ ಸಂಧ್ಯಾಕಾಲದಲ್ಲಿದ್ದಾರೆ.
3. ಭುವನೇಶ್ವರ್ ಕುಮಾರ್
ಟೀಂ ಇಂಡಿಯಾ ಸ್ವಿಂಗ್ ಸ್ಪೆಷಲಿಸ್ಟ್ ಬೌಲರ್ ಭುವನೇಶ್ವರ್ ಕುಮಾರ್, ಈ ಬಾರಿಯ ಕೇಂದ್ರ ಗುತ್ತಿಗೆಯಲ್ಲಿ ಸ್ಥಾನ ಪಡೆಯದೇ ಹೋದದ್ದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.
Image credit: Getty
ಕಳೆದ ನವೆಂಬರ್ 22, 2022ರಲ್ಲಿ ನ್ಯೂಜಿಲೆಂಡ್ ವಿರುದ್ದ ನೇಪಿಯರ್‌ನಲ್ಲಿ ಕೊನೆಯ ಬಾರಿಗೆ ಭಾರತ ತಂಡದ ಪರ ಕಣಕ್ಕಿಳಿದಿದ್ದ ಭುವಿ, ಫಿಟ್ನೆಸ್ ಸಮಸ್ಯೆಯಿಂದಾಗಿ ತಂಡ ಕೂಡಿಕೊಳ್ಳಲು ಪರದಾಡುತ್ತಿದ್ದಾರೆ. ಐಪಿಎಲ್‌ನಲ್ಲಿ ಭುವಿ ಮಿಂಚಿದರೆ ಮತ್ತೆ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಬಹುದಾಗಿದೆ.
4. ಮಯಾಂಕ್ ಅಗರ್‌ವಾಲ್:
ಟೀಂ ಇಂಡಿಯಾ ಪ್ರತಿಭಾನ್ವಿತ ಆರಂಭಿಕ ಬ್ಯಾಟರ್ ಮಯಾಂಕ್ ಅಗರ್‌ವಾಲ್, ಕಳೆದ ಕೆಲ ತಿಂಗಳುಗಳಿಂದ ರಾಷ್ಟ್ರೀಯ ತಂಡದಿಂದ ಹೊರಬಿದ್ದಿದ್ದಾರೆ. ರಣಜಿ ಟ್ರೋಫಿ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಹೊರತಾಗಿಯೂ, ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಮಯಾಂಕ್ ವಿಫಲವಾಗಿದ್ದಾರೆ.
ಇನ್ನು ಇದೇ ವೇಳೆ ಶುಭ್‌ಮನ್ ಗಿಲ್, ಮೂರು ಮಾದರಿಯ ಭಾರತ ತಂಡದಲ್ಲಿ ಉತ್ತಮ ಆರಂಭಿಕನಾಗಿ ಹೊರಹೊಮ್ಮುತ್ತಿರುವುದರಿಂದ ಮಯಾಂಕ್‌ಗೆ ಬಿಸಿಸಿಐ ಕೇಂದ್ರ ಗುತ್ತಿಗೆ ನೀಡಲು ಒಲವು ತೋರಿಲ್ಲ. ಭುವಿಯಂತೆ ಮಯಾಂಕ್ ಕೂಡಾ ಐಪಿಎಲ್‌ನಲ್ಲಿ ಮಿಂಚಿದರೆ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಲು ಅವಕಾಶವಿದೆ.
5. ಹನುಮ ವಿಹಾರಿ:
ಆಂಧ್ರ ಪ್ರದೇಶ ಮೂಲದ ಅನುಭವಿ ಆಲ್ರೌಂಡರ್ ಹನುಮ ವಿಹಾರಿ ಕೂಡಾ ಬಿಸಿಸಿಐ ಕೇಂದ್ರ ಗುತ್ತಿಗೆಯಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ. ಕಳೆದ ಬಾರಿ ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ಬಾರ್ಡರ್-ಗವಾಸ್ಕರ್ ಟೂರ್ನಿಯಲ್ಲಿ ವಿಹಾರಿ ಅದ್ಭುತ ಆಟವಾಡಿದ್ದರು.
ಇನ್ನು ಟೆಸ್ಟ್ ತಂಡದಲ್ಲಿ ಶ್ರೇಯಸ್ ಅಯ್ಯರ್ ಸ್ಥಿರ ಪ್ರದರ್ಶನ ತೋರುತ್ತಾ ಬಂದಿದ್ದರಿಂದ, ಅಕ್ಷರ್ ಪಟೇಲ್, ಜಡೇಜಾ ಹಾಗೂ ಅಶ್ವಿನ್ ಕೂಡಾ ಕೆಳ ಕ್ರಮಾಂಕದಲ್ಲಿ ಅತ್ಯುತ್ತಮ ಆಟವಾಡುತ್ತಿರುವುದರಿಂದ ವಿಹಾರಿಗೆ ಬಹುತೇಕ ಭಾರತ ಟೆಸ್ಟ್ ತಂಡದ ಬಾಗಿಲು ಮುಚ್ಚಿದಂತೆ ಆಗಿದೆ.
6. ವೃದ್ದಿಮಾನ್ ಸಾಹ:
ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಿಂದ ಹೊರಬಿದ್ದ ಹೆಸರುಗಳ ಪಟ್ಟಿಯಲ್ಲಿ ಅತ್ಯಂತ ನಿರೀಕ್ಷಿತ ಹೆಸರೆಂದರೇ ಅದು ವೃದ್ದಿಮಾನ್ ಸಾಹ ಅವರದ್ದು. ವಯಸ್ಸಿನ ಕಾರಣದಿಂದಾಗಿ ಕಳೆದೊಂದ ವರ್ಷದಿಂದಲೂ ಸಾಹಗೆ ಹೆಚ್ಚಿನ ಅವಕಾಶ ಸಿಗಲಿಲ್ಲ.
ಟೀಂ ಇಂಡಿಯಾ ಅನುಭವಿ ವಿಕೆಟ್ ಕೀಪರ್ ಸಾಹ ಅವರನ್ನು ಬದಿಗಿಟ್ಟು ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿ ರಿಷಭ್ ಪಂತ್‌ಗೆ ಮಣೆಹಾಕಲಾಗಿದೆ. ಗಾಯಗೊಂಡಿರುವ ಪಂತ್ ಬದಲಿಗೆ ವಿಕೆಟ್ ಕೀಪರ್ ಆಗಿ ಕೆ ಎಸ್ ಭರತ್‌ಗೆ ಅವಕಾಶ ಒದಗಿಸಲಾಗಿದೆ. ಇನ್ನು ಇಶಾನ್ ಕಿಶನ್ ಕೂಡಾ ಟೆಸ್ಟ್‌ಗೆ ಪಾದಾರ್ಪಣೆ ಮಾಡಲು ರೆಡಿಯಿರುವುದರಿಂದ ಸಾಹ ಕ್ರಿಕೆಟ್ ಬದುಕು ಬಹುತೇಕ ಅಂತ್ಯವಾಗಿದೆ.
7. ದೀಪಕ್ ಚಹಾರ್:
ರಾಜಸ್ಥಾನ ಮೂಲದ ಸ್ವಿಂಗ್ ಸ್ಪೆಷಲಿಷ್ಟ್ ಬೌಲಿಂಗ್ ಆಲ್ರೌಂಡರ್ ದೀಪಕ್ ಚಹರ್, ಬಿಸಿಸಿಐ ಕೇಂದ್ರ ಗುತ್ತಿಗೆಯಿಂದ ಹೊರಬಿದ್ದಿದ್ದು, ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.
ಕಳೆದೊಂದ ವರ್ಷದಿಂದ ಗಾಯದ ಸಮಸ್ಯೆಯಿಂದಾಗಿ ಹೆಚ್ಚು ಸ್ಪರ್ಧಾತ್ಮಕ ಕ್ರಿಕೆಟ್ ಪಂದ್ಯವನ್ನಾಡ ದೀಪಕ್ ಚಹರ್, ಈ ಬಾರಿ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ತೋರಿ, ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡುವ ವಿಶ್ವಾಸದಲ್ಲಿದ್ದಾರೆ.