ಟೀಂ ಇಂಡಿಯಾಗೆ ಹೊಸ ಅಸ್ತ್ರ ಸೇರ್ಪಡೆ, ಉಳಿದ ತಂಡಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ: ಎಬಿ ಡಿ ವಿಲಿಯರ್ಸ್ ಅಚ್ಚರಿಯ ಮಾತು
ಬೆಂಗಳೂರು: 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಿರುವಾಗಲೇ ಟೀಂ ಇಂಡಿಯಾಗೆ ಹೊಸ ಅಸ್ತ್ರ ಸೇರ್ಪಡೆಯಾಗಿದೆ. ಇದೀಗ ಆ ಅಸ್ತ್ರದ ಬಗ್ಗೆ ಆಧುನಿಕ ಕ್ರಿಕೆಟ್‌ನ ಸೂಪರ್ ಸ್ಟಾರ್ ಬ್ಯಾಟರ್ ಎನಿಸಿಕೊಂಡಿರುವ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬಹುನಿರೀಕ್ಷಿತ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 05ರಿಂದ ಆರಂಭವಾಗಿ ನವೆಂಬರ್ 19ರವರೆಗೆ ನಡೆಯಲಿದೆ. ಇದೇ ಮೊದಲ ಬಾರಿಗೆ ಸಂಪೂರ್ಣ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯವನ್ನು ವಹಿಸಿದೆ.
ನವೆಂಬರ್ 05ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು ಕಳೆದ ಆವೃತ್ತಿಯ ವಿಶ್ವಕಪ್ ರನ್ನರ್ ಅಪ್ ನ್ಯೂಜಿಲೆಂಡ್ ವಿರುದ್ದ ಕಣಕ್ಕಿಳಿಯುವ ಮೂಲಕ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ.
ಇನ್ನು ಆತಿಥೇಯ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಅಕ್ಟೋಬರ್ 08ರಂದು ಚೆನ್ನೈನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ 5 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
ವಿಶ್ವಕಪ್ ಟೂರ್ನಿಗೆ ಪಾಲ್ಗೊಳ್ಳುವ ಮುನ್ನ ಟೀಂ ಇಂಡಿಯಾ ಕೊನೆಯ ಹಂತದ ತಯಾರಿಯಲ್ಲಿದೆ. ಹೀಗಾಗಿ ಆಸ್ಟ್ರೇಲಿಯಾ ಎದುರು ತವರಿನಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡುತ್ತಿದೆ. ಸದ್ಯ ಮೊದಲೆರಡು ಪಂದ್ಯಗಳನ್ನು ಜಯಿಸುವ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಭಾರತ ಸರಣಿಯನ್ನು 2-0 ಅಂತರದಲ್ಲಿ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಇನ್ನು ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಕೊನೆಯ ಪಂದ್ಯದ ವೇಳೆ ಟೀಂ ಇಂಡಿಯಾ ಆಲ್ರೌಂಡರ್ ಅಕ್ಷರ್ ಪಟೇಲ್ ಗಾಯಗೊಂಡಿದ್ದರು. ಹೀಗಾಗಿ ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಗೆ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ಗೆ ಭಾರತ ತಂಡಕ್ಕೆ ಬುಲಾವ್ ಬಂದಿತ್ತು.
ಬಿಸಿಸಿಐ ಆಯ್ಕೆ ಸಮಿತಿ ಹಾಗೂ ಟೀಂ ಮ್ಯಾನೇಜ್‌ಮೆಂಟ್ ತೆಗೆದುಕೊಂಡ ಮಾಸ್ಟರ್ ಪ್ಲಾನ್, ತಂಡದ ಕೈಹಿಡಿದಂತಿದ್ದು, ಮೊದಲೆರಡು ಪಂದ್ಯಗಳಲ್ಲಿ ಅಶ್ವಿನ್ ಶಿಸ್ತುಬದ್ದ ದಾಳಿ ನಡೆಸುವ ಮೂಲಕ 4 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದಾರೆ. ಹೀಗಾಗಿ ಅಶ್ವಿನ್ ಕೊನೆಯ ಕ್ಷಣದಲ್ಲಿ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ದಟ್ಟವಾಗಿದೆ.
ಈ ಕುರಿತಂತೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿ ವಿಲಿಯರ್ಸ್, ರವಿಚಂದ್ರನ್ ಅಶ್ವಿನ್ ಅವರನ್ನು ಭಾರತ ತಂಡದೊಳಗೆ ಸೇರಿಸಿಕೊಂಡಿರುವುದು ಉಳಿದ ಎದುರಾಳಿ ತಂಡಗಳ ಪಾಲಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
"ಇದಂತೂ ಯಾರೂ ಊಹೆ ಮಾಡಲೂ ಸಾಧ್ಯವಾಗದಂತ ತೀರ್ಮಾನವಾಗಿದೆ. ಇದು ಉಳಿದ ತಂಡಗಳ ಪಾಲಿಗೆ ಒಳ್ಳೆಯ ಸುದ್ದಿಯಂತೂ ಅಲ್ಲವೇ ಅಲ್ಲ. ತುಂಬಾ ಅನುಭವಿ, ಚಾಣಾಕ್ಷ, ಒತ್ತಡದ ಪರಿಸ್ಥಿತಿಯಲ್ಲೂ ಪರಿಣಾಮಕಾರಿ ಆಟವಾಡಬಲ್ಲ, ಅಸಾಧಾರಣ ಕೌಶಲ್ಯಗಳನ್ನು ಹೊಂದಿರುವ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಉಪಯುಕ್ತ ಕಾಣಿಕೆ ನೀಡಬಲ್ಲ ಆಟಗಾರ ಅಶ್ವಿನ್ ಎಂದು ಎಬಿಡಿ ಬಣ್ಣಿಸಿದ್ದಾರೆ.
ಅಶ್ವಿನ್ ತಂಡ ಕೂಡಿಕೊಂಡಿದ್ದು ನಿಜಕ್ಕೂ ಭಾರತಕ್ಕೆ ತುಂಬಾ ಪ್ರಯೋಜನವಾಗಲಿದೆ. ಅವರ್ಯಾಕೆ ಇಷ್ಟು ಕಾಲ ಭಾರತ ಸೀಮಿತ ಓವರ್‌ಗಳ ತಂಡದಲ್ಲಿರಲಿಲ್ಲವೆಂದು ಅರ್ಥವಾಗುತ್ತಿಲ್ಲ. ನಾನು ಅವರ ಅತಿದೊಡ್ಡ ಅಭಿಮಾನಿ. ಅವರು ಯಾವಾಗಲೂ ತಂಡದ ಗೆಲುವಿಗಾಗಿಯೇ ಚಿಂತಿಸುತ್ತಿರುತ್ತಾರೆ. ಅವರು ಪಂದ್ಯದಲ್ಲಿ ಇಂಪ್ಯಾಕ್ಟ್ ಮಾಡಬಲ್ಲ ಆಟಗಾರರಾಗಿದ್ದಾರೆ ಎಂದು ಎಬಿಡಿ ಹೇಳಿದ್ದಾರೆ.
ಅವರು ಒತ್ತಡದ ಪರಿಸ್ಥಿತಿಯಲ್ಲಿ ಚೆನ್ನಾಗಿ ಬೌಲಿಂಗ್ ಮಾಡಲು ಇಷ್ಟಪಡುತ್ತಾರೆ. ಒತ್ತಡದ ಪರಿಸ್ಥಿತಿಯಲ್ಲಿ ಅವರು ಬೌಲಿಂಗ್ ಮಾಡಲು ಹಿಂಜರಿಯುವಂತ ಆಟಗಾರ ಅವರಲ್ಲ ಎಂದು ಅಶ್ವಿನ್ ಪ್ರತಿಭೆಯನ್ನು ಎಬಿಡಿ ಕೊಂಡಾಡಿದ್ದಾರೆ.
ವಿಶ್ವಕಪ್ ಟೂರ್ನಿಗೆ ತಂಡವನ್ನು ಅಂತಿಮಗೊಳಿಸಲು ಸೆಪ್ಟೆಂಬರ್ 27 ಕೊನೆಯ ದಿನಾಂಕವಾಗಿದ್ದು, ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಭಾರತ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.